ಹುಮನಾಬಾದ: ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ಹಾಗೂ ಹುಮನಾಬಾದ ತಹಶೀಲ್ದಾರ್ ಅವರನ್ನು ಸರ್ಕಾರ ಕೂಡಲೇ ಸೇವೆಯಿಂದ ವಜಾ ಮಾಡಲು ಆಗ್ರಹಿಸಿ ಪಟ್ಟಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಸೋಮವಾರ ಪ್ರತಿಭಟನೆ ನಡೆಸಿತು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ವಿವಿಧ ದಲಿತ ಸಂಘಟನೆಗಳ ಮುಖಂಡರು, ರಾಯಚೂರು ಘಟನೆ ಕುರಿತು ಖಂಡಿಸುವ ನಿಟ್ಟಿನಲ್ಲಿ ಅಂಕುಶ ಗೋಖಲೆ ನೇತೃತ್ವದಲ್ಲಿ ಪಟ್ಟಣದ ತಹಶೀಲ್ದಾರ್ ಅವರಿಗೆ ಮನವಿ ನೀಡಲು ತೆರಳಿದ ಸಂದರ್ಭದಲ್ಲಿ ಮನವಿ ಪತ್ರ ತೆಗೆದುಕೊಳ್ಳಲು ತಹಶೀಲ್ದಾರ ಬಂದಿಲ್ಲ. ಸುಮಾರು ಹೊತ್ತು ಕಚೇರಿ ಎದುರಿಗೆ ನಿಂತ ಪ್ರತಿಭಟನಾ ನಿರತರಿಗೆ ಗೌರವ ನೀಡುವ ಕೆಲಸ ಮಾಡದೆ ಅವಮಾನ ಮಾಡಿದ್ದಾರೆ.
ಘಟನೆ ನಡೆದ ಕೆಲ ಘಂಟೆಗಳಲ್ಲಿ ಅಂಕುಶ ಗೋಖಲೆ ಅವರನ್ನು ಬಂಧಿಸುವ ಕಾರ್ಯ ಪೊಲೀಸ್ ಇಲಾಖೆ ಮಾಡಿದ್ದು, ಅದೇ ರೀತಿ ತಹಶೀಲ್ದಾರ್ ವಿರುದ್ಧವೂ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಮುಂದಿನ 24 ಗಂಟೆಗಳಲ್ಲಿ ತಹಶೀಲ್ದಾರ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಪಟ್ಟಣದ ಎಂ.ಪಿ ಬಡಾವಣೆಯಿಂದ ಆರಂಭಗೊಂಡಿರುವ ಪ್ರತಿಭಟನೆ ಪಟ್ಟಣದ ಹಳೆ ತಹಸೀಲ್ ಕಚೇರಿಗೆ ತಲುಪಿ ಅಲ್ಲಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತದ ವರೆಗೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ರಾಯಚೂರು ಜಿಲ್ಲಾ ನ್ಯಾಯಾಧೀಶ ಹಾಗೂ ಹುಮನಾಬಾದ ತಹಶೀಲ್ದಾರ್ ಪ್ರದೀಪಕುಮಾರ ಅವರ ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ಪ್ರತಿಕೃತಿಗಳನ್ನು ದಹನ ಮಾಡಲಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ಬಂದ್ ವಾತಾವರಣ ನಿರ್ಮಾಣಗೊಂಡಿತು. ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮೀಪುತ್ರ ಮಾಳಗೆ, ಪರಮೇಶ್ವರ ಆರ್ಯ, ದಿಲೀಪಕುಮಾರ ಮರಪಳ್ಳಿ, ಪ್ರಭು ಚಿತ್ತಕೊಟಾ, ಗೌತಮ್ ಪ್ರಸಾದ, ವೀರಪ್ಪಾ ಧೂಮನಸ್ಸೂರ್, ಅನಿಲ ದೊಡ್ಡಿ, ಗೌತಮ್ ಚವ್ಹಾಣ್, ಸಿದ್ಧಾರ್ಥ ಡಾಂಗೆ, ಶರಣ್ಣಪ್ಪಾ ಮೆತ್ರೆ, ಮಾಣಿಕ ಮಾಡಗೊಳ್ಳ, ರವಿ ಹೊಸಳ್ಳಿ, ಗಜೇಂದ್ರ ಕನಕಟ್ಟಕರ್, ಮಧುಕರ್ ಹಿಲಾಲಪೂರ್, ರಮೇಶ ಡಾಕುಳಗಿ, ಸುರೇಶ ಘಾಂಗರೆ, ಚೇತನ್ ಗೋಖಲೆ, ಗೌತಮ್ ಮೇಟಿ, ಮಾಣಿಕರಾವ ಪವಾರ ಸೇರಿದಂತೆ ಅನೇಕ ಮುಖಂಡರು ಇದ್ದರು.