ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಶುಕ್ರವಾರ (ಸೆ27)ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಕಳೆದ ವಾರ ಇಲ್ಲಿನ ಜಮೀನು ಡಿನೋಟಿಫಿಕೇಷನ್ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ತನಿಖೆಯನ್ನು ತ್ವರಿತಗೊಳಿಸುವಂತೆ ಲೋಕಾಯುಕ್ತ ಪೊಲೀಸರನ್ನು ಕೋರಿತ್ತು.
ವಿಚಾರಣೆ ನಡೆದ ಬಳಿಕ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರಕಾರದ ವಿರುದ್ಧ ಕೆಂಡಾಮಂಡಲವಾದರು. ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಮತ್ತು ನಾನು ಅಧಿಕಾರದಲ್ಲಿದ್ದಾಗ, ಸಿಎಂ ಆಗಿದ್ದ ಅವಧಿಯಲ್ಲಿ ಅಕ್ರಮ ಎಸಗಿಲ್ಲ. ಸಚಿವರುಗಳು ಪ್ರಚಾರಕ್ಕಾಗಿ ಹಗುರವಾಗಿ ಮಾತನಾಡಿದ್ದಾರೆ. ಈ ಸರ್ಕಾರ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ” ಎಂದು ಗುಡುಗಿದರು.
“ಇದು 2024, ಈಗಾಗಲೇ ಹಲವಾರು ಬಾರಿ ವಿಚಾರಣೆಗೆ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ, ಮತ್ತೊಮ್ಮೆ ಇಂದು ನನ್ನನ್ನು ಕರೆದರು, ಇತ್ತೀಚೆಗೆ ಯಡಿಯೂರಪ್ಪ ಅವರನ್ನೂ ಕರೆದಿದ್ದಾರೆ ಎಂದು ಮಾಧ್ಯಮಗಳಿಂದ ನಾನು ಕೇಳಿದೆ. ನಾನು ಹಾಜರಾಗಿ ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ಅವರು ಮುಂದಿನ ವಿಚಾರಣೆ ನಡೆಸಲಿ, ಮತ್ತು ಈ ಸರ್ಕಾರವು ಕಾನೂನಿನ ಪ್ರಕಾರ ಯಾವುದೇ ಕ್ರಮ ತೆಗೆದುಕೊಳ್ಳಲು ಸ್ವತಂತ್ರವಾಗಿದೆ” ಎಂದರು.
ಬೆಂಗಳೂರು ಉತ್ತರ ಕಸಬಾ ಹೋಬಳಿಯ ಗಂಗೇನಹಳ್ಳಿಯಲ್ಲಿ 1.11 ಎಕರೆ ಜಮೀನು ಡಿನೋಟಿಫಿಕೇಷನ್ ಮಾಡಿರುವ ಕುರಿತು ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಮತ್ತು ಸಂತೋಷ್ ಲಾಡ್ ಅವರು ಸೆ.19ರಂದು ಜಂಟಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.