Advertisement
ಐದಾರು ದಿನಗಳ ಹಿಂದೆ ಔರಾದ್ ತಾಲೂಕಿನ ಹೆಡಗಾಪುರದ ರೈತ ಸಚಿವ ಖೂಬಾ ಅವರ ಮೊಬೈಲ್‌ಗೆ ಕರೆ ಮಾಡಿ ತಮ್ಮ ಗ್ರಾಮದಲ್ಲಿ ಗೊಬ್ಬರ ಕೊರತೆ ಕುರಿತು ಮಾತನಾಡಿದ್ದು, ಬೇಗ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದಾರೆ. ಈ ವೇಳೆ ಸಮಾಧಾನಕರ ಉತ್ತರ ನೀಡಬೇಕಿದ್ದ ಸಚಿವರು, ಅದಕ್ಕೆ ನಾನೇನು ಮಾಡಲಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಈ ವೇಳೆ ಸಚಿವರ ಮತ್ತು ರೈತ ಮಧ್ಯ ಏಕ ವಚನದಲ್ಲಿ ಮಾತಿನ ವಾಗ್ವಾದ ಆಗಿದ್ದು, ಒಬ್ಬರಿಗೊಬ್ಬರು ಅವಾಜ್ ಹಾಕಿದ್ದ ಸಂಭಾಷಣೆ ಆಡಿಯೋ ಚರ್ಚೆಗೆ ಗ್ರಾಸವಾಗಿದೆ.
Related Articles
Advertisement
ಕೇಂದ್ರ ಸಚಿವರು ಮತ್ತು ರೈತರ ನಡುವೆ 4 ನಿಮಿಷದ ಆಡಿಯೋ ಸಂಭಾಷಣೆ ಇದಾಗಿದೆ. ಹೆಡಗಾಪುರದ ರೈತ ಎಂದು ಖೂಬಾ ಜತೆ ಮಾತನಾಡಿದ್ದು ಕುಶಾಲ ಪಾಟೀಲ ಎಂದು ಹೇಳಲಾಗುತ್ತಿದ್ದು, ಇವರು ಔರಾದ ತಾಲೂಕಿನ ಜೀರ್ಗಾ(ಕೆ) ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ರಸಗೊಬ್ಬರ ಕುರಿತಾಗಿ ನನ್ನೊಂದಿಗೆ ಮಾತನಾಡಿದ ವ್ಯಕ್ತಿ ರೈತನಲ್ಲ, ಒಬ್ಬ ಸರ್ಕಾರಿ ಶಾಲೆಯ ಸಹ ಶಿಕ್ಷಕ. ರಾತ್ರಿ ವೇಳೆ ಕರೆ ಮಾಡಿದ್ದ ವ್ಯಕ್ತಿ ರಸಗೊಬ್ಬರ ಬಗ್ಗೆ ಕೇಳುತ್ತಾ ಆಕ್ಷೇಪಾರ್ಯ ಪದಗಳು ಬಳಸಿದ್ದು, ನಾನು ಯಾವ ಮಾತುಗಳಿಗೆ ಉತ್ತರಿಸಬೇಕು ಅಷ್ಟಕ್ಕೆ ಮಾತ್ರ ಉತ್ತರಿಸಿದ್ದೇನೆ. ಆದರೆ, ಅವರಿಗೆ ಬೇಕಾದಷ್ಟು ಸಂಭಾಷಣೆಯನ್ನು ಎಡಿಟ್ ಮಾಡಿಕೊಂಡು ಇಂದು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಮ್ಮ ಸರ್ಕಾರಕ್ಕೆ ಹಾಗೂ ನನ್ನ ಹೆಸರಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಲಾಗಿದೆ. ಇದು ರಾಜಕೀಯ ಪ್ರೇರಿತವಾಗಿದ್ದು, ನಾನು ಮತ್ತು ನಮ್ಮ ಸರ್ಕಾರ ಸದಾಕಾಲ ರೈತ ಪರ ಕೆಲಸ ಮಾಡುತ್ತಿದೆ ಎಂದು ಭಗವಂತ ಖೂಬಾ ಪ್ರತಿಕ್ರಿಯೆ ನೀಡಿದ್ದಾರೆ.