ಕೊಲ್ಹಾರ: ಹುಬ್ಬಳ್ಳಿ – ವಿಜಯಪುರ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ 52ನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಹಾಗೂ ಹೆದ್ದಾರಿಯಲ್ಲಿಯ ಕೃಷ್ಣಾ ನದಿಗೆ ಅಡ್ಡಲಾಗಿ ಇನ್ನೊಂದು ಸೇತುವೆ ನಿರ್ಮಿಸುವಂತೆ ದೆಹಲಿಗೆ ತೆರಳಿ ಕೇಂದ್ರ ಭೂ ಸಾರಿಗೆ ಸಚಿವ ನಿತೀನ ಗಡ್ಕರಿ ಅವರಿಗೆ ಮನವಿ ಮಾಡಿಕೋಳ್ಳುತ್ತೇನೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕನಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಲ್ಲಿ 2001-02ನೇ ಇಸ್ವಿಯಲ್ಲಿ ಆಗಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಭೂ ಸಾರಿಗೆ ಸಚಿವರಾಗಿದ್ದ ರಾಜನಾಥ್ ಸಿಂಗ್ ಅವರಿಗೆ ಹುಬ್ಬಳ್ಳಿ-ವಿಜಯಪುರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಸಲ್ಲಿಸಿದ ಮನವಿಗೆ ಸ್ಪಂದಿಸಿ ಕೂಡಲೇ ಮೇಲ್ದರ್ಜೆಗೆ ಏರಿಸಿದ್ದರು ಎಂದರು.
30 ವರ್ಷಗಳ ನಂತರ ದಕ್ಷಿಣ ಭಾರತಕ್ಕೆ ಮಂಜೂರಾದ ಮೊದಲ ಹೆದ್ದಾರಿ ಅದು. ಈಗಿನ ಹುಬ್ಬಳ್ಳಿ-ವಿಜಯಪುರ- ಹುಮನಾಬಾದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು ಪದೆ ಪದೆ ಅಪಘಾತಗಳಾಗುತ್ತಿವೆ. ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿದರೆ ದಕ್ಷಿಣ ಹಾಗೂ ಉತ್ತರ ಭಾರತದ ಜನತೆಗೆ ಹಾಗೂ ರಾಷ್ಟ್ರಕ್ಕೆ ಅನುಕೂಲವಾಗುತ್ತದೆ ಎಂದರು.
ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ 3 ಕಿ.ಮೀ. ಉದ್ದದ ಸೇತುವೆ ಏಷ್ಯಾ ಖಂಡದಲ್ಲಿ ಎರಡನೇ ಅತಿ ಉದ್ದವಾದ ಸೇತುವೆಯಾಗಿದೆ. ಇಲ್ಲೂ ಕೂಡ ಸಾಕಷ್ಟು ಅಪಘಾತಗಳಾಗುತ್ತಿದ್ದು ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಸಮಯದಲ್ಲಿ ನದಿಗೆ ಹೊಂದಿಕೊಳ್ಳುವಂತೆ 3 ಕಿ.ಮೀ. ಉದ್ದದ ಇನ್ನೊಂದು ಸೇತುವೆ ನಿರ್ಮಿಸುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಮುಖಂಡ ರಾಜಶೇಖರ ಶೀಲವಂತ, ಪಪಂ ಸದಸ್ಯರಾದ ಅಪ್ಪಾಸಿ ಮಟ್ಟಿಹಾಳ, ಬಾಬು ಭಜಂತ್ರಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಈರಯ್ಯ ಮಠಪತಿ, ಕಲ್ಲಪ್ಪ ಕಾಖಂಡಕಿ ಇದ್ದರು.