ಬಳ್ಳಾರಿ: ಶೀಘ್ರದಲ್ಲೇ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.21ರಂದು ಬಳ್ಳಾರಿಗೆ ಆಗಮಿಸಲಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡಿ, ಪಕ್ಷವನ್ನು ಸಂಘಟಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೂಮ್ಮೆ ಅ ಧಿಕಾರಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ ಎಂದರು.
ಕುಮಾರಸ್ವಾಮಿ ಜನರನ್ನು ದಿಕ್ಕು ತಪ್ಪಿಸಲು ಪ್ರಹ್ಲಾದ ಜೋಶಿ ಸಿಎಂ ಆಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ಇದಕ್ಕಾಗಿ ಅವರು ಯಾವುದೇ ದಾಖಲೆ ಬಿಡುಗಡೆ ಮಾಡುವುದು ಬೇಕಾಗಿಲ್ಲ. ಜೋಶಿ ಅವರು ಪ್ರಧಾನಿ ಮೋದಿ ಕ್ಯಾಬಿನೆಟ್‌ಲ್ಲಿ ಮಂತ್ರಿಯಾಗಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಅವರೇ ಮತ್ತೆ ಸಿಎಂ ಆಗಲಿದ್ದಾರೆ. ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ನಾನು ರಾಜಕೀಯ ಹೊರತುಪಡಿಸಿಯೂ ಸ್ನೇಹಿತರು. ಜಾತ್ರೆಗೆ ಹೋದಾಗ ಲಾಡ್ ಸಿಕ್ಕಿದ್ದರು. ಸ್ನೇಹ ಮನೋಭಾವನೆಯಿಂದ ಅಪ್ಪಿಕೊಂಡಿದ್ದಾರೆ. ರಾಜಕೀಯದಿಂದ ಅಥವಾ ಬೇರೆ ಯಾವುದೇ ಉದ್ದೇಶಕ್ಕೆ ಅಪ್ಪಿಕೊಂಡಿಲ್ಲ. ಶ್ರೀರಾಮುಲು ಸಂಡೂರಿನಿಂದ ಸ್ಪ ರ್ಧಿಸುತ್ತಾರೆ ಎನ್ನುವುದಕ್ಕೆ ಅಪ್ಪಿಕೊಂಡಿದ್ದಾರೆ ಎನ್ನುವುದು ಸುಳ್ಳು. ನನ್ನ ಸ್ಪರ್ಧೆಯ ವಿಚಾರದಲ್ಲಿ ಪಕ್ಷದ ತೀರ್ಮಾನವೇ ಅಂತಿಮ ಎಂದರು.