ಹೊಸದಿಲ್ಲಿ : ಕೇಂದ್ರ ಸಚಿವ ಸಂಪುಟ 7ನೇ ವೇತನ ಆಯೋಗದ ಭತ್ಯೆಗಳ ಶಿಫಾರಸಿಗೆ ಅನುಮೋದನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
7ನೇ ವೇತನ ಆಯೋಗದ ಶಿಫಾರಸಿಗೆ ಅನುಗುಣವಾದ ಭತ್ಯೆಯನ್ನು ನೀಡುವಲ್ಲಿ ಕೇಂದ್ರ ಸಚಿವ ಸಂಪುಟದ ತೀರ್ಮಾನವೇ ಅಂತಿಮವಾಗಿದ್ದು ಆ ಪ್ರಕಾರ ಇದೀಗ ಅದಕ್ಕೆ ಅನುಮೋದನೆ ದೊರಕಿರುವ ಕಾರಣ ಕೇಂದ್ರ ಸರಕಾರ ನೌಕರರಿಗೆ ಜುಲೈ ತಿಂಗಳ ಸಂಬಳದಲ್ಲೇ ಪರಿಷ್ಕೃತ ಭತ್ಯೆಗಳು ಸಿಗಲಿವೆ.
7ನೇ ವೇತನ ಆಯೋಗವು ಪರಿಷ್ಕೃತ ಭತ್ಯೆಗಳಿಗೆ ಸಂಬಂಧಿಸಿದಂತೆ ಮಾಡಿದ ಶಿಫಾರಸುಗಳನ್ನು ಪರಾಮರ್ಶಿಸಲು ಕಾರ್ಯದರ್ಶಿಗಳ ದತ್ತಾಧಿಕಾರ ಸಮಿತಿಯು ನೇಮಿಸಿದ್ದ ಲವಾಸಾ ಮಂಡಳಿಯು ತನ್ನ ಶಿಫಾರಸುಗಳ ವರದಿಯನ್ನು ಕಳೆದ ಎ.27ರಂದೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರಿಗೆ ಸಲ್ಲಿಸಿದ್ದು ಅದಕ್ಕೆ ಈಗ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಎ ಕೆ ಮಾಥುರ್ ನೇತೃತ್ವದ 7ನೇ ವೇತನ ಆಯೋಗವು ಈ ಮೊದಲು ಎಕ್ಸ್, ವೈ ಮತ್ತು ಝಡ್ ವರ್ಗದ ನಗರಗಳಿಗೆ ಅನ್ವಯಿಸುವಂತೆ ಅನುಕ್ರಮವಾಗಿ ಶೇ.24, ಶೇ.16 ಮತ್ತು ಶೇ.8ರ ಎಚ್‌ಆರ್‌ಎ ಶಿಫಾರಸು ಮಾಡಿತ್ತು.
ಅನಂತರದಲ್ಲಿ ಇದನ್ನು ಶೇ.50 ಡಿಎ ದಾಟಿದ ಸಂದರ್ಭಗಳಲ್ಲಿ ಅನುಕ್ರಮವಾಗಿ ಶೇ.27, ಶೇ.18 ಮತ್ತು ಶೇ.9ಕ್ಕೆ ಏರಿಸುವಂತೆ ಹಾಗೂ ಶೇ.100 ಡಿಎ ದಾಟಿದ ಸಂದರ್ಭಗಳಲ್ಲಿ ಅವುಗಳನ್ನು (ಎಚ್‌ಆರ್‌ಎ) ಅನುಕ್ರಮವಾಗಿ ಶೇ.30, ಶೇ.20 ಮತ್ತು ಶೇ.10ರ ಪ್ರಮಾಣದಲ್ಲಿ ನೀಡುವಂತೆ ಶಿಫಾರಸು ಮಾಡಿತ್ತು.
ಎಕ್ಸ್, ವೈ ಮತ್ತು ಝಡ್ ವರ್ಗದ ನಗರಗಳಿಗೆ ಪ್ರಕೃತ ಅನುಕ್ರಮವಾಗಿ ಮೂಲ ವೇತನದ (ಪೇ ಬ್ಯಾಂಡ್ + ಗ್ರೇಡ್ ಪೇ) ಶೇ.30, ಶೇ.20 ಮತ್ತು ಶೇ.10ರ ಎಚ್‌ಆರ್‌ಎ ಇದೆ.