Advertisement

Union Budget 2024: ರಾಜ್ಯದ ರೈಲ್ವೇ ಯೋಜನೆಗೆ 7,559 ಕೋಟಿ ರೂ. ಹಂಚಿಕೆ

12:57 AM Jul 25, 2024 | Team Udayavani |

ಹುಬ್ಬಳ್ಳಿ: ಕೇಂದ್ರದ ಬಜೆಟ್‌ನಲ್ಲಿ ರಾಜ್ಯದ ರೈಲ್ವೇ ಯೋಜನೆಗಾಗಿ 7,559 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು ಹಲವು ಯೋಜನೆಗಳಿಗೆ ಅನುದಾನ ಕಲ್ಪಿಸಲಾಗಿದೆ. ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿನ 2009-14ನೇ ಸಾಲಿನ ಸರಾಸರಿ ಬಜೆಟ್‌ 835 ಕೋಟಿ ರೂ. ಇತ್ತು. ಆದರೆ ಇಂದಿನ ಎನ್‌ಡಿಎ ಸರಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ 7,559 ಕೋಟಿ ರೂ. ಗಳನ್ನು ನೀಡುವ ಮೂಲಕ 9 ಪಟ್ಟು ಹೆಚ್ಚಿನ ಅನುದಾನ ನೀಡಿದಂತಾಗಿದೆ.

Advertisement

ರಾಜ್ಯದಲ್ಲಿ 47,016 ಕೋಟಿ ರೂ. ಗಳ ಮೌಲ್ಯದ 3,840 ಕಿ.ಮೀ. ಉದ್ದದ 31 ಯೋಜನೆಗಳು ಪ್ರಗತಿಯಲ್ಲಿವೆ. ಕಳೆದ 10 ವರ್ಷಗಳಲ್ಲಿ ಕರ್ನಾಟಕದಾದ್ಯಂತ 638 ರಸ್ತೆ ಮೇಲ್ಸೇತುವೆಗಳು, ರಸ್ತೆ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಇದು ರಸ್ತೆ ಪ್ರಯಾಣಿಕರಿಗೆ ಸುರಕ್ಷಿತ ಮಾರ್ಗ ಖಾತ್ರಿಪಡಿಸಿದೆ.

2014ರಿಂದ 2024ರ ವರೆಗೆ, ಸರಾಸರಿ ವಾರ್ಷಿಕ ಹೊಸ ಮಾರ್ಗವು 163 ಕಿ.ಮೀ.ಗೆ ಹೆಚ್ಚಾಗಿದ್ದು, ಇದು 2009ರಿಂದ 2014ರ ವರೆಗೆ ವರ್ಷಕ್ಕೆ ಸರಾಸರಿ 113 ಕಿ.ಮೀ.ಗೆ ಹೋಲಿಸಿದರೆ 1.4 ಪಟ್ಟು ಹೆಚ್ಚಳ ಕಂಡಿದೆ. ಕರ್ನಾಟಕದಲ್ಲಿ ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆಯಡಿ ರೈಲ್ವೇ ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸುವ ಕೆಲಸ ನಡೆದಿದ್ದು, 59 ರೈಲ್ವೇ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ.

ಈ ಯೋಜನೆಯಲ್ಲಿ ರೈಲ್ವೇ ನಿಲ್ದಾಣಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವುದು ಪ್ರಮುಖ ಗುರಿಯಾಗಿದೆ. 2009-2014ರ ಅವ ಧಿಯಲ್ಲಿ ವಿದ್ಯುದ್ದೀಕರಣವು ವರ್ಷಕ್ಕೆ ಸರಾಸರಿ 18 ಕಿ.ಮೀ. ಆಗಿತ್ತು. 2014-2024ರ ಅವ ಧಿಯಲ್ಲಿ ಸರಾಸರಿ ವಿದ್ಯುದ್ದೀಕರಣ ವರ್ಷಕ್ಕೆ 317 ಕಿ.ಮೀ. ಗಮನಾರ್ಹವಾಗಿ ಹೆಚ್ಚಿಸಲಾಗಿದೆ.

ನೈಋತ್ಯ ರೈಲ್ವೇಗಾಗಿ ಅನುದಾನ
ನೈಋತ್ಯ ರೈಲ್ವೇಯಲ್ಲಿ ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆಯಡಿ 1103 ಕೋಟಿ ರೂ. ವೆಚ್ಚದಲ್ಲಿ 5 ಪ್ರಮುಖ ನಿಲ್ದಾಣಗಳ ಸಹಿತ 46 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಯಶವಂತಪುರ ನಿಲ್ದಾಣವನ್ನು 367 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, 2025 ಜುಲೈರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ನೈಋತ್ಯ ರೈಲ್ವೇ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

Advertisement

2025 ಮಾರ್ಚ್‌ ಅಂತ್ಯಕ್ಕೆ ವಿದ್ಯುದ್ದೀಕರಣ ಪೂರ್ಣ
ಹುಬ್ಬಳ್ಳಿ ರೈಲ್ವೇ ನಿಲ್ದಾಣದ ಅಭಿವೃದ್ಧಿಗಾಗಿ 397 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರಯಾಣಿಕರ ಮೂಲ ಸೌಲಭ್ಯ, ವಾಣಿಜ್ಯ ಸೇರಿದಂತೆ ಹಲವು ಸೌಲತ್ತುಗಳು ಬರಲಿವೆ. ವಾಸ್ಕೋ ಡಿ ಗಾಮಾ ನಿಲ್ದಾಣದ 84 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಆರಂಭಿಸಲಾಗಿದೆ. ಅಗಸ್ಟ್‌ ಅಂತ್ಯದೊಳಗೆ 558 ಲೋಕೋಪಾಯಿಲೆಟ್‌ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 2025 ಮಾರ್ಚ್‌ ಅಂತ್ಯದೊಳಗೆ ವಿದ್ಯುತೀಕರಣ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಎಂದು ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ತಿಳಿಸಿದರು.

“ಎನ್‌ಡಿಎ ಸರಕಾರದ 10 ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ ರೈಲ್ವೇ ಅಭಿವೃದ್ಧಿಯಲ್ಲಿ ಪರಿಣಾಮಕಾರಿ ಪ್ರಗತಿಯಾಗಿದೆ. ಪ್ರಸ್ತುತ ಚಾಲನೆಯಲ್ಲಿರುವ ರಾಜ್ಯದ ರೈಲು ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ 7,500 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.” -ವಿ. ಸೋಮಣ್ಣ, ರಾಜ್ಯ ರೈಲ್ವೇ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next