ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ (ಫೆ.01) ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸಲು ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2014ರಿಂದ 2024ರವರೆಗೆ ದೇಶ ಹಲವಾರು ಪ್ರಗತಿ ಸಾಧಿಸಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆಯಡಿ ಹಲವಾರು ಅಭಿವೃದ್ಧಿ ಕೆಲಸ ಮಾಡಲಾಗಿದೆ ಎಂದರು.
ಇದನ್ನೂ ಓದಿ:Budget 2024: ಬಜೆಟ್ ನಲ್ಲಿ ಮಹಿಳಾ ಸಬಲೀಕರಣ, ರೈತರ ಆದಾಯಕ್ಕೆ ಹೆಚ್ಚಿನ ಒತ್ತು ಸಾಧ್ಯತೆ…
ಭಾರತ ಗಣನೀಯವಾಗಿ ಆರ್ಥಿಕ ಪ್ರಗತಿ ಸಾಧಿಸಿದೆ. ನಮ್ಮ ಸರ್ಕಾರದ ಯೋಜನೆ ಪ್ರತಿಯೊಬ್ಬರಿಗೂ ತಲುಪಿದೆ. ದೇಶ ಹಲವಾರು ಸವಾಲುಗಳನ್ನು ಎದುರಿಸಿದರೂ ಕೂಡಾ ಅವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಲಾಗಿದೆ. ದೇಶದ ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ಕಾರ್ಯನಿರ್ವಹಿಸಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕ ಸ್ಥಿತಿ ಬದಲಾಗಿದೆ. ದೇಶದ ಜನರು ನಮಗೆ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಧ್ಯೇಯದ ಸರ್ಕಾರ ನಮ್ಮದಾಗಿದೆ.
ನಮ್ಮ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದೆ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ನೀಡಲಾಗಿದೆ. ಗರೀಬ್ ಕಲ್ಯಾಣ ದೇಶದ ಕಲ್ಯಾಣವಾಗಿದೆ. ನಮ್ಮ ಸರ್ಕಾರ ಸ್ವಜನ ಪಕ್ಷಪಾತ ಮೆಟ್ಟಿನಿಂತಿದೆ. ಕೋವಿಡ್ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿ ಮುನ್ನಡೆದಿದೆ.