Advertisement

ಅಮೃತ ವರ್ಷದಲ್ಲಿ ಶತಮಾನದತ್ತ ದೃಷ್ಟಿ ಹರಿಸಿದ ಬಜೆಟ್‌

12:18 AM Feb 02, 2022 | Team Udayavani |

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ದೇಶವನ್ನು ಮುಂದಿನ 25 ವರ್ಷಗಳ ಅವಧಿಯಲ್ಲಿ ಮತ್ತಷ್ಟು ಸದೃಢಗೊಳಿಸುವ ಮತ್ತು ಸ್ವಾವಲಂಬಿಯನ್ನಾಗಿಸುವ ದೂರದೃಷ್ಟಿಯನ್ನು ಒಳಗೊಂಡ ಮುಂಗಡ ಪತ್ರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಮಂಡಿಸಿದ್ದಾರೆ.

Advertisement

ಕೊರೊನಾ ತಂದೊಡ್ಡಿದ ತೀವ್ರ ಆರ್ಥಿಕ ಮುಗ್ಗಟ್ಟಿನ ಹೊರತಾಗಿಯೂ ದೇಶ ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಲಕ್ಷಣಗಳನ್ನು ತೋರಿರುವ ಹಿನ್ನೆಲೆಯಲ್ಲಿ ಈ ನಾಗಾಲೋಟಕ್ಕೆ ಎಲ್ಲೂ ತಡೆ ಬೀಳದಂತೆ ಸಚಿವರು ಎಚ್ಚರಿಕೆ ವಹಿಸಿರುವುದು ಸ್ಪಷ್ಟ. ಯಾವುದೇ ಜನಪ್ರಿಯ ಘೋಷಣೆಗಳನ್ನು ಹೊಂದಿರದ ಮತ್ತು ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ಮುಂದಿದ್ದರೂ ಎಲ್ಲೂ ಓಲೈಕೆ ನೀತಿಗೆ ಶರಣಾಗದಿರುವುದು ಶ್ಲಾಘನೀಯ. ಹಣದುಬ್ಬರ ದರವನ್ನು ನಿಯಂತ್ರಣದ ಲ್ಲಿರಿಸಿಕೊಳ್ಳುವ ಗುರಿಯೊಂದಿಗೆ ದೇಶದ ಆರ್ಥಿಕತೆಯಲ್ಲಿ ನಿರಂತರತೆ ಯನ್ನು ಕಾಯ್ದುಕೊಳ್ಳುವ ದಿಟ್ಟತನ ತೋರಿರುವುದು ವಿಶೇಷ.

ಕೊರೊನಾ ತಂದೊಡ್ಡಿದ ಆರ್ಥಿಕ ಸಂಕಷ್ಟದಿಂದಾಗಿ ಬೆಲೆ ಏರಿಕೆ, ವೈಯಕ್ತಿಕ ಆದಾಯದಲ್ಲಿ ಇಳಿಕೆ, ಉದ್ಯೋಗ ನಷ್ಟ ಮತ್ತಿತರ ತೀವ್ರ ತೆರನಾದ ಸಮಸ್ಯೆಗಳಿಗೆ ಸಿಲುಕಿ ಜರ್ಝರಿತವಾಗಿರುವ ಜನಸಾಮಾನ್ಯರು ಮತ್ತು ಬಡವರ್ಗ ಈ ಬಾರಿಯ ಕೇಂದ್ರ ಬಜೆಟ್‌ ಬಗ್ಗೆ ಒಂದಿಷ್ಟು ಆಶಾವಾದ ವನ್ನು ಹೊಂದಿತ್ತು. ಆದಾಯ ತೆರಿಗೆದಾರರು ತೆರಿಗೆ ಮಿತಿಯಲ್ಲಿ ಅಲ್ಪ ಹೆಚ್ಚಳದ ನಿರೀಕ್ಷೆಯಲ್ಲಿದ್ದರು. ಆದರೆ ಈ ಎಲ್ಲ ಆಶಾವಾದ, ನಿರೀಕ್ಷೆಗಳಿಗೆ ಕೇಂದ್ರ ಸರಕಾರ ಹೆಚ್ಚಿನ ಗಮನ ಕೊಡದೇ ದೇಶದ ಭವಿಷ್ಯದತ್ತ ದೃಷ್ಟಿ ಹರಿಸುವ ಮೂಲಕ ತನ್ನ ದೂರದೃಷ್ಟಿತ್ವವನ್ನು ಪ್ರದರ್ಶಿಸಿದೆ. ಇದೇ ವೇಳೆ ಜನಸಾಮಾನ್ಯರ ಮೇಲೆ ಹೊರೆ ಹೇರುವ ದುಸ್ಸಾಹಸಕ್ಕೂ ಕೈಹಾಕಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಮೂಲ ಸೌಕರ್ಯ, ಹೂಡಿಕೆ, ಕೃಷಿ, ಕೈಗಾರಿಕೆ, ಮಹಿಳಾ ಸಶಕ್ತೀ ಕರಣ, ಗ್ರಾಮೀಣ ಅಭಿವೃದ್ಧಿ, ಸಾರಿಗೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಗಮನಾರ್ಹ ಪ್ರಮಾಣದಲ್ಲಿ ಅನುದಾನವನ್ನು ಕಾಯ್ದಿರಿಸಲಾಗಿದೆ. ಆಡ ಳಿತ ವ್ಯವಸ್ಥೆಯಲ್ಲಿ ಡಿಜಿಟಲ್‌ ಕ್ರಾಂತಿಗೆ ಮತ್ತಷ್ಟು ಉತ್ತೇಜನ ನೀಡಲು ಪೂರಕವಾದ ಯೋಜನೆಗಳನ್ನು ಘೋಷಿಸಲಾಗಿದೆ.

2022ರಲ್ಲಿ 5ಜಿ ಸಂಪರ್ಕ, ಇ-ಪಾಸ್‌ಪೋರ್ಟ್‌, ಡಿಜಿಟಲ್‌ ವಿವಿ, ಕಿಸಾನ್‌ ಡ್ರೋನ್‌, ಗ್ರಾಮೀಣ ಪ್ರದೇಶಗಳಲ್ಲೂ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಕೆ, ಆರ್‌ಬಿಐನಿಂದ ಡಿಜಿಟಲ್‌ ಕರೆನ್ಸಿ ಮತ್ತಿತರ ಪ್ರಸ್ತಾ ವನೆ ಗಳನ್ನು ಬಜೆಟ್‌ ಒಳಗೊಂಡಿದೆ. ರಕ್ಷಣ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಹೆಚ್ಚಿನ ಒತ್ತು ನೀಡುವುದಾಗಿ ಘೋಷಿಸಲಾಗಿದೆ.

Advertisement

ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿ ನಡುವೆ ಹಣಕಾಸು ವರ್ಗಾವಣೆ ಸರಳವಾಗಲಿದ್ದು ಇದರಿಂದ ಗ್ರಾಮೀಣ ಪ್ರದೇಶಗಳ ಜನರಿಗೆ ಅದರಲ್ಲೂ ರೈತಾಪಿ ವರ್ಗಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಕಾವೇರಿ-ಪೆನ್ನಾರ್‌ ನದಿ ಸಹಿತ ಐದು ನದಿಗಳ ಜೋಡಣೆ, 5.5 ಕೋಟಿ ಮನೆಗಳಿಗೆ ನೀರು ಸಂಪರ್ಕ, 60 ಲಕ್ಷ ಉದ್ಯೋಗ ಸೃಷ್ಟಿ, 400 ವಂದೇ ಭಾರತ್‌ ರೈಲುಗಳ ಓಡಾಟ ಮತ್ತು 100 ಗತಿಶಕ್ತಿ ಕಾರ್ಗೋ ಟರ್ಮಿನಲ್‌ ನಿರ್ಮಾಣ, 25,000 ಕಿ.ಮೀ. ಹೆದ್ದಾರಿಗಳ ವಿಸ್ತರಣೆ, ಎಸ್‌ಇಝಡ್‌ ಕಾನೂನು ಪರಿಷ್ಕರಣೆಯ- ಇವೇ ಮೊದಲಾದ ಘೋಷಣೆಗಳನ್ನು ಮಾಡಲಾಗಿದೆ.

ಆರ್ಥಿಕ ಹಿಂಜರಿತದ ಹೊರತಾಗಿಯೂ ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‌ ಮೇಲ್ನೋಟಕ್ಕೆ ಅಂಕಿಅಂಶಗಳ ಕಸರತ್ತಿನಂತೆ ಕಂಡರೂ ಒಟ್ಟಾರೆಯಾಗಿ ಪ್ರಸ್ತಾವಿಸಲಾಗಿರುವ ಬಹುತೇಕ ಅಂಶಗಳು ದೀರ್ಘ‌ಕಾಲಿಕವಾಗಿ ಜನಸಾಮಾನ್ಯರು ಮತ್ತು ದೇಶದ ಹಿತದೃಷ್ಟಿಗೆ ಪೂರಕವಾದವುಗಳೇ. ಬಜೆಟ್‌ನಲ್ಲಿ ಮೀಸಲಿರಿಸಲಾಗಿರುವ ಅನುದಾನಗಳೆಲ್ಲವೂ ಸಕಾಲದಲ್ಲಿ ಬಿಡುಗಡೆಯಾಗಿ ಯೋಜನೆಗಳು ವ್ಯವಸ್ಥಿತವಾಗಿ ಜಾರಿಗೊಂಡಲ್ಲಿ ಕೇಂದ್ರ ಸರಕಾರದ ಉದ್ದೇಶ ಮತ್ತು ಗುರಿ ಇವೆರಡೂ ಈಡೇರಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next