Advertisement

ಆರ್ಥಿಕತೆಯನ್ನು ಹಳಿಯೇರಿಸುವ ಕಸರತ್ತು

01:52 AM Feb 02, 2020 | mahesh |

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ 2020-21ನೇ ಸಾಲಿನ ಬಜೆಟ್‌ ಮಹತ್ವಾಕಾಂಕ್ಷಿ ಭಾರತ, ಎಲ್ಲರನ್ನೂ ತಲುಪುವ ಆರ್ಥಿಕ ಅಭಿವೃದ್ಧಿ ಮತ್ತು ಕಾಳಜಿಯುಕ್ತ ಸಮಾಜ ಎಂಬ ಮೂರು ಧ್ಯೇಯಗಳ ಸುತ್ತ ತಿರುಗುತ್ತದೆ. ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದ ಆರ್ಥಿಕತೆಯಿಂದ 11 ವರ್ಷಗಳಲ್ಲೇ ಕಡಿಮೆ ಅಭಿವೃದ್ಧಿಗೊಂಡ ಆರ್ಥಿಕತೆಯ ಸ್ಥಾನಕ್ಕೆ ದೇಶ ಜಾರಿದ ಹಿನ್ನೆಲೆಯಲ್ಲಿ ಆರ್ಥಿಕತೆಯನ್ನು ಹಳಿಗೆ ತರಲು ಸರಕಾರ ಯಾವ ಕಸರತ್ತು ಮಾಡುತ್ತದೆ ಎಂಬ ಕುತೂಹಲ ಇತ್ತು.

Advertisement

ಆರ್ಥಿಕ ಹಿಂಜರಿತದ ಬಿಸಿ ಸರಕಾರಕ್ಕೆ ತಟ್ಟಿರುವುದು ಬಜೆಟ್‌ನಲ್ಲಿ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಯಾವುದೇ ಸರಕಾರವಾದರೂ ಆಡಳಿತದ ಮೊದಲ ವರ್ಷದಲ್ಲಿ ಆಯ-ವ್ಯಯದಲ್ಲಿ ತುಸು ಬಿಗುವನ್ನು ಕಾಯ್ದುಕೊಳ್ಳುತ್ತದೆ. ಆದರೆ ಆರ್ಥಿಕ ಪರಿಸ್ಥಿತಿ ಪ್ರತಿಕೂಲವಾಗಿರುವ ಕಾರಣ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ತುಸು ಧಾರಾಳತನವನ್ನು ತೋರಿಸಿದ್ದಾರೆ. ಅದರಲ್ಲೂ ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿದ ಕೊಡುಗೆಗಳು ಸಿಕ್ಕಿವೆ. ಮಧ್ಯಮ ವರ್ಗವನ್ನು ಖುಷಿಪಡಿಸುವ ಉಪಕ್ರಮಗಳು ಬೇಕಾದಷ್ಟು ಇವೆ.

ಆದಾಯ ಕರ ದರಗಳ ಕಡಿತ, ಕೃಷಿಕರ ಆದಾಯವನ್ನು ಹೆಚ್ಚಿಸುವ ಉಪಕ್ರಮಗಳು, ಕಾರ್ಪೊರೇಟ್‌ ಜಗತ್ತಿಗೆ ನೀಡಿದ ಕೊಡುಗೆಗಳು, ಸ್ಟಾರ್ಟ್‌ ಅಪ್‌ಗಳಿಗೆ ಇನ್ನಷ್ಟು ಉತ್ತೇಜನ ಹೀಗೆ ಎಲ್ಲ ವಲಯಗಳಿಗೂ ಅನ್ವಯಿಸುವಂತೆ ವಿವಿಧ ರೀತಿಯ ಕೊಡುಗೆಗಳು, ರಿಯಾಯಿತಿಗಳನ್ನು ನೀಡುವ ಮೂಲಕ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಒಟ್ಟಾರೆಯಾಗಿ ಸುಧಾರಣಾವಾದಿ ನೆಲೆಯ ಬಜೆಟ್‌ ಎಂದೇ ಹೇಳಬಹುದಾದರೂ ಕೆಲವೊಂದು ಘೋಷಣೆಗಳು ಮಾತ್ರ ತುಸು ಕಳವಳಕಾರಿಯಾಗಿವೆ.

ಮುಖ್ಯವಾಗಿ ಜೀವ ವಿಮಾ ನಿಗಮಲ್ಲಿರುವ ಸರಕಾರದ ಹಿಡಿತವನ್ನು ಸಡಿಲಗೊಳಿಸುವ ಘೋಷಣೆ ಇಳಿಗಾಲದ ಜೀವನ ಭದ್ರತೆಗಾಗಿ ಎಲ್‌ಐಸಿಯಲ್ಲಿ ಹೂಡಿಕೆ ಮಾಡಿರುವ ಬಡ ಮತ್ತು ಮಧ್ಯಮ ವರ್ಗದವರನ್ನು ಆತಂಕಕ್ಕೆ ದೂಡಿದೆ. ಪಬ್ಲಿಕ್‌ ಇಶ್ಯೂ ಮೂಲಕ ಎಲ್‌ಐಸಿಯಲ್ಲಿರುವ ತನ್ನ ಶೇ. 100 ಬಂಡವಾಳದ ಪೈಕಿ ಕೆಲವು ಪಾಲನ್ನು ಹಿಂದೆಗೆದುಕೊಳ್ಳಲು ಸರಕಾರ ಮುಂದಾಗಿದೆ. ಇದು ಪರೋಕ್ಷವಾಗಿ ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ಹುನ್ನಾರದಂತೆ ಕಾಣಿಸುತ್ತದೆ. ದೇಶದ ಅತಿ ದೊಡ್ಡ ಹಣಕಾಸು ಸಂಸ್ಥೆ, ಅತಿ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿರುವ ಸಂಸ್ಥೆ ಮಾತ್ರವಲ್ಲದೆ ಜನರ ಅತೀವ ವಿಶ್ವಾಸಕ್ಕೆ ಪಾತ್ರವಾದ ಸಂಸ್ಥೆಯೊಂದನ್ನು ಹೀಗೆ ಹಿಂಬಾಗಿಲಿನ ಮೂಲಕ ಖಾಸಗೀಕರಣಗೊಳಿಸುವ ತುರ್ತು ಅಗತ್ಯವೇನಿದೆ ಎಂಬ ಪ್ರಶ್ನೆಗೆ ಉತ್ತರಿಸುವ ಬಾಧ್ಯತೆ ಸರಕಾರಕ್ಕಿದೆ.

ಶಿಕ್ಷಣಕ್ಕೆ ಸುಮಾರು 99 ಸಾವಿರ ಕೋ.ರೂ. ಅನುದಾನವನ್ನು ಘೋಷಿಸಿರುವುದು ಅಪೇಕ್ಷಣೀಯವೇ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಎನ್ನಬಹುದಾದ ಸುಧಾರಣೆಗಳು ಆಗಬೇಕಾಗಿರುವುದು ನಿಜ. ಇದೇ ವೇಳೆ ಶಿಕ್ಷಣದಲ್ಲಿ ವಿದೇಶಿ ಹೂಡಿಕೆಗೆ ಅವಕಾಶ ನೀಡಿರುವ ಪ್ರಸ್ತಾವವನ್ನು ಇಟ್ಟಿರುವುದು ತುಸು ಕಳವಳಕಾರಿ ಸಂಗತಿ. ಇಂಥ ಅಪಾಯಕಾರಿ ಸಾಹಸಕ್ಕಿಳಿಯುವ ಮೊದಲು ಅದರ ಸಾಧಕಬಾಧಕಗಳ ಬಗ್ಗೆ ಸಮಗ್ರವಾದ ಚರ್ಚೆ ನಡೆಯಬೇಕು.

Advertisement

ಜನರ ಜೇಬಿಗೆ ಹೆಚ್ಚು ಹಣ ಹಾಕಬೇಕು ಎನ್ನುವ ನಿರ್ಮಲಾ ಮಾತು ಸತ್ಯ. ಈಗಿನ ಆರ್ಥಿಕ ಹಿಂಜರಿತದ ಮೂಲ ಕಾರಣವೇ ಜನರ ಖರ್ಚು ಮಾಡುವ ಸಾಮರ್ಥ್ಯ ಕಡಿಮೆಯಾಗಿರುವುದು. ಇದರಿಂದಾಗಿ ಬೇಡಿಕೆ ಕುಸಿದು ಎಲ್ಲ ವಲಯಗಳು ಕುಂಟತೊಡಗಿವೆ. ಜನರ ಕೈಯಲ್ಲಿ ಹಣ ಓಡಾಡತೊಡಗಿದರೆ ಚೇತರಿಕೆ ತನ್ನಿಂದ ತಾನೇ ಆಗುತ್ತದೆ.

ಸಾರಿಗೆ, ಎಲೆಕ್ಟ್ರಾನಿಕ್‌ ವಸ್ತುಗಳ ಉತ್ಪಾದನೆಗೆ ಉತ್ತೇಜನ, ಗ್ರಾಮೀಣ ಭಾಗಗಳಿಗೆ ನೀಡಿದ ಕೊಡುಗೆಗಳು ಇತ್ಯಾದಿಗಳಿಂದ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಿದಂತಾಗಿದೆ. ಆದರೆ ಕೃಷಿ ಕ್ಷೇತ್ರಕ್ಕೆ ಘೋಷಿಸಿರುವ ಕೆಲವು ಕೊಡುಗೆಗಳಿಂದ ಬಡ ರೈತನಿಗಿಂತ ಕಾರ್ಪೋರೇಟ್‌ ವಲಯಕ್ಕೆ ಹೆಚ್ಚು ಲಾಭವಾಗಬಹುದು ಎಂಬ ಅನುಮಾನವಿದ್ದು, ಈ ಬಗ್ಗೆ ಗಮನ ಹರಿಸುವುದು ಅಗತ್ಯ. ಸಣ್ಣ ಮತ್ತು ಮಧ್ಯಮ ಹಿಡುವಳಿದಾರರ ಆದಾಯ ಇಮ್ಮಡಿಯಾಗಬೇಕೆ ಹೊರತು ಕೃಷಿ ವಲಯದಲ್ಲಿ ತೊಡಗಿಸಿಕೊಂಡಿರುವ ಕಾರ್ಪೊರೇಟ್‌ ಕಂಪೆನಿಗಳದ್ದಲ್ಲ. ಆರ್ಥಿಕತೆಯ ಬಂಡಿಯ ಗಾಲಿಯೆಂದು ಭಾವಿಸಲಾಗಿರುವ ರಿಯಲ್‌ ಎಸ್ಟೇಟ್‌ ವಲಯವನ್ನು ಕಡೆಗಣಿಸಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಅಂತೆಯೇ ಕುಸಿದಿರುವ ರಫ್ತು ಹೆಚ್ಚಿಸಲು ಯಾವ ಉಪಕ್ರಮವೂ ಕಾಣಿಸುತ್ತಿಲ್ಲ. ರಸಗೊಬ್ಬರ, ಬ್ಯಾಂಕಿಂಗ್‌, ಲಾಜಿಸ್ಟಿಕ್ಸ್‌ ಕಡೆಗಣಿಸಲ್ಪಟ್ಟ ಇನ್ನೂ ಕೆಲವು ವಲಯಗಳು. ಒಟ್ಟಾರೆಯಾಗಿ ಆರ್ಥಿಕತೆಯನ್ನು ಹಳಿಯೇರಿಸಲು ಸಾಕಷ್ಟು ಕಸರತ್ತು ಮಾಡಿರುವುದು ಢಾಳಾಗಿ ಗೋಚರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next