ರೈತ ಉತ್ಪಾದಕ ಸಂಘಗಳ ರಚನೆ, ಶೂನ್ಯ ಬಂಡವಾಳ ಕೃಷಿ, ಪ್ರತಿ ಮನೆಗೆ ನೀರು ಪೂರೈಸುವಂತಹ ಯೋಜನೆಗಳು ರೈತರ ಆದಾಯವನ್ನು ಹೆಚ್ಚಿಸುವ ಕ್ರಮಗಳಾಗಿವೆ. ಆದರೆ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಎದುರಿಸುತ್ತಿರುವ ಭೀಕರ ಸಮಸ್ಯೆಗಳ ದೃಷ್ಟಿಯಿಂದ ನೋಡಿದಾಗ, ಬಜೆಟ್ ನಿರೀಕ್ಷಿತ ಮಟ್ಟದಲ್ಲಿ ಉತ್ತೇಜನಕಾರಿ ಆಗಿಲ್ಲ.
ದೇಶಕ್ಕೆ ಶೇ.60ರಷ್ಟು ಅಡುಗೆ ಎಣ್ಣೆ ಆಮದು ಆಗುತ್ತಿದೆ. ಈ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಬೆಳೆಗಾರರನ್ನು ಪ್ರೋತ್ಸಾಹಿಸಲು ಹತ್ತು ಸಾವಿರ ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಗರಿಷ್ಠ ತಲಾ ಒಂದು ಸಾವಿರ ರೈತರನ್ನು ತೆಗೆದುಕೊಂಡರೂ ಸುಮಾರು ಒಂದು ಕೋಟಿ ರೈತರು ಇದರ ವ್ಯಾಪ್ತಿಗೊಳಪಡುತ್ತಾರೆ. ಗುಂಪಾಗಿ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತಂದಾಗ, ಅದಕ್ಕೆ ಉತ್ತಮ ಬೆಲೆಯೂ ದೊರೆಯುತ್ತದೆ. ಹಾಗಾಗಿ, ಇದೊಂದು ಸ್ವಾಗತಾರ್ಹ ಕ್ರಮ. ಆದರೆ ಒಟ್ಟಾರೆ ರೈತರ ಲೆಕ್ಕ ಹಾಕಿದರೆ, ಇದು ನಗಣ್ಯ.
ಶೂನ್ಯ ಬಂಡವಾಳ ಕೃಷಿ ಮತ್ತೂಂದು ಉತ್ತಮ ಹೆಜ್ಜೆಯಾಗಿದೆ. ಕೃಷಿ ಚಟುವಟಿಕೆ ದುಬಾರಿ ಆಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಬಂಡವಾಳ ಹೂಡಿಕೆ ಇಲ್ಲದೆ, ಕೃಷಿ ಮಾಡಲು ಒತ್ತು ಕೊಡಲಾಗಿದೆ. ಇದರಿಂದ ರೈತರ ಆದಾಯ ಕೂಡ ಹೆಚ್ಚಳ ಆಗಲಿದೆ. ಇದಕ್ಕಿಂತ ಮುಖ್ಯವಾಗಿ ‘ಕೃಷಿ ಸಂರಕ್ಷಣೆ’ಗೆ ಒತ್ತುಕೊಡುವ ಅಗತ್ಯ ಇತ್ತು (ಉದಾಹರಣೆಗೆ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವುದು). ದೇಶದ ಆರ್ಥಿಕತೆಯಲ್ಲಿ ಶೇ. 70ರಷ್ಟು ಪಾಲು ಕೃಷಿ ಕ್ಷೇತ್ರದ್ದಾಗಿದೆ. ಆದರೆ, ಅದರಲ್ಲಿ ಆಗುತ್ತಿರುವ ಹೂಡಿಕೆ ಶೇ. 25ರಷ್ಟೂ ಇಲ್ಲ.
ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 1,500 ತಾಲ್ಲೂಕುಗಳನ್ನು ಆಯ್ಕೆ ಮಾಡಿದ್ದು, ನಾಲ್ಕು ಇಲಾಖೆಗಳು ಒಂದೇ ಸೂರಿನಡಿ ಬಂದು ಕಾರ್ಯನಿರ್ವಹಿಸಲಿವೆ. ಈ ಮೂಲಕ ಪ್ರತಿ ಮನೆಗಳಿಗೆ ನೀರು ಪೂರೈಸಲು ಮುಂದಾಗಿರುವುದು, ಇನ್‌ಕ್ಯುಬೇಟರ್‌ಗಳ ಮೂಲಕ ಕೌಶಲ್ಯಯುತ ಉದ್ಯಮಿಗಳನ್ನು ತಯಾರು ಮಾಡುವುದು ಒಳ್ಳೆಯ ಬೆಳವಣಿಗೆ. ‘ಇ-ನ್ಯಾಮ್’ ಕೂಡ ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ನೀಡುವ ಪ್ರಯತ್ನ ಆಗಿದೆ.
ಬಜೆಟ್ ವಿಶ್ಲೇಷಣೆ:ಡಾ.ಎಂ.ಜಿ. ಚಂದ್ರಕಾಂತ್ ನಿರ್ದೇಶಕರು, ಐಸೆಕ್