ದೇಶದ ಪ್ರತಿಯೊಬ್ಬ ಪ್ರಜೆಗೂ ಅಗತ್ಯವಿರುವಷ್ಟು ಶುದ್ಧ ಕುಡಿಯುವ ನೀರು ಪೂರೈಸುವುದು ಕೇಂದ್ರ ಸರ್ಕಾರದ ಪ್ರಧಾನ ಆದ್ಯತೆ ಎಂದು ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.
ಈ ನಿಟ್ಟಿನಲ್ಲಿ ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ನಿರ್ಮಲೀಕರಣ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯಗಳನ್ನು ಒಂದುಗೂಡಿಸಿ ‘ಜಲಶಕ್ತಿ’ ಸಚಿವಾಲಯ ಸ್ಥಾಪಿಸಲಾಗಿದೆ. ನೀರಿನ ಸಂಪನ್ಮೂಲದ ನಿರ್ವಹಣೆ ಹಾಗೂ ಸಮರ್ಪಕ ಬಳಕೆ ನಿಟ್ಟಿನಲ್ಲಿ ಈ ಸಚಿವಾಲಯ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಈ ಸಾಲಿನ ಬಜೆಟ್‌ನಲ್ಲಿ 28,261.59 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಕುಡಿಯುವ ನೀರು ಮತ್ತು ನೈರ್ಮಲ್ಯಕರಣಕ್ಕಾಗಿ 20,016.34 ಕೋಟಿ ರೂ. ಮೀಸಲಿಡಲಾಗಿದೆ. 2018-19ರ ಬಜೆಟ್‌ನಲ್ಲಿ ಇದಕ್ಕಾಗಿ 19,992.97 ಕೋಟಿ ರೂ. ಮೀಸಲಿಡಲಾಗಿತ್ತು.
‘ಜಲಜೀವನ್ ಮಿಷನ್’ ಅಡಿ 2024ರೊಳಗೆ ದೇಶದ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಮಹತ್ತರ ಗುರಿಯನ್ನು ಸಚಿವಾಲಯ ಹೊಂದಿದೆ. ಇದಕ್ಕಾಗಿ ಈ ಸಾಲಿನ ಬಜೆಟ್‌ನಲ್ಲಿ 7,750.36 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಸಾಲಿನ ಬಜೆಟ್‌ನಲ್ಲಿ ಇದಕ್ಕಾಗಿ 5,391.32 ಕೋಟಿ ರೂ. ಮೀಸಲಿಡಲಾಗಿತ್ತು. ಜಲ ಸಂಪನ್ಮೂಲ ಮತ್ತು ಗಂಗಾ ಶುದ್ಧೀಕರಣಕ್ಕಾಗಿ 8,245.25 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಬಾರಿ ಇದಕ್ಕಾಗಿ 7,269.25 ಕೋಟಿ ರೂ. ಮೀಸಲಿಡಲಾಗಿತ್ತು.
ಕುಡಿಯುವ ನೀರು ಪೂರೈಕೆ ಮತ್ತು ನಿರ್ಮಲಿಕರಣ, ಸ್ಥಳಿಯ ಮಟ್ಟದಲ್ಲಿ ನೀರು ಪೂರೈಸುವುದು, ನೀರು ಪೂರೈಕೆಗಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಮಳೆ ನೀರು ಕೊಯ್ಲು, ಅಂತರ್ಜಲ ವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ, ಕೃಷಿಗೆ ನೀರಿನ ಪುನರ್ಬಳಕೆ ಸೇರಿದಂತೆ ನೀರಿನ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನವನ್ನು ಈ ಯೋಜನೆಯಡಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.