Advertisement

ರೈಲ್ವೆ ಮೂಲಸೌಕರ್ಯಕ್ಕೆ ಒತ್ತು ಸ್ವಾಗತಾರ್ಹ

12:37 AM Jul 06, 2019 | Sriram |

ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 10 ವರ್ಷಗಳಿಗೆ 50 ಲಕ್ಷ ಕೋಟಿ ರೂಪಾಯಿ ಘೋಷಿಸಿರುವುದು ಸ್ವಾಗತಾರ್ಹ. ಇದು ಅತ್ಯಗತ್ಯವಾಗಿತ್ತು. ದೇಶದೆಲ್ಲೆಡೆ ರೈಲ್ವೆ ಸಂಚಾರ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ತೀರ್ಮಾನ ಕೈಗೊಂಡಿದೆ. ಆದರೆ, ಮೂಲಸೌಕರ್ಯ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 50 ಲಕ್ಷ ಸಾವಿರ ಕೋಟಿ ರೂ. ಮೊತ್ತದಲ್ಲಿ ಕರ್ನಾಟಕ ರಾಜ್ಯಕ್ಕೆ ಎಷ್ಟು ಸಿಗಲಿದೆ ಎಂಬ ಸ್ಪಷ್ಟ ಮಾಹಿತಿ ಇನ್ನಷ್ಟೇ ಸಿಗಬೇಕು. ಕರ್ನಾಟಕದವರೇ ರೈಲ್ವೆ ಸಚಿವರಾಗಿರುವುದರಿಂದ ರಾಜ್ಯಕ್ಕೂ ಸೂಕ್ತ ಆನುದಾನ ದೊರೆಯುವ ಆಶಾಭಾವನೆ ಇದೆ.

Advertisement

ಸಬ್‌ ಅರ್ಬನ್‌ ರೈಲು ವ್ಯವಸ್ಥೆ ಎಲ್ಲೆಲ್ಲಿ ಅಗತ್ಯವೋ ಅಲ್ಲಿ ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ) ಸ್ಥಾಪಿಸಿ ಅನುಷ್ಠಾನಗೊಳಿಸುವ ತೀರ್ಮಾನವೂ ಒಳ್ಳೆಯದು. ಬೆಂಗಳೂರಿನಲ್ಲಿ ಸಬ್‌ ಅರ್ಬನ್‌ ಯೋಜನೆಗೆ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಗೊಂಡಿರುವುದರಿಂದ ನಮಗೆ ಅನುಕೂಲವಾಗಲಿದೆ. ಇದು ಸಹ ಬಹುದಿನಗಳ ಬೇಡಿಕೆಯೂ ಆಗಿತ್ತು.

ಇನ್ನು, ಉತ್ತರ ಭಾರತದ ಭಾಗದಲ್ಲಿ ಸರಕು ಸಾಗಣೆಗಾಗಿಯೇ ಡೆಡಿಕೇಟೆಡ್‌ ಗೂಡ್ಸ್‌ ಕಾರಿಡಾರ್‌ ಘೋಷಣೆ, ಫೋರ್ಟ್‌ ಟು ಫೋರ್ಟ್‌ ಕನೆಕ್ಷನ್‌ ಯೋಜನೆಯಡಿ ಮುಂಬೈ, ಕೋಲ್ಕತ್ತಾ, ಒಡಿಶಾ ಮಾರ್ಗಗಳಲ್ಲಿ ಹೊಸ ರೈಲು ವ್ಯವಸ್ಥೆ ಘೋಷಿಸಿರುವುದರಿಂದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ. ಉದ್ಯಮಿಗಳ ಬಹುದಿನಗಳ ಬೇಡಿಕೆ ಕೂಡ ಇದಾಗಿತ್ತು.

ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಪ್ರತ್ಯೆಕ ಕಂಪನಿ ಸ್ಥಾಪನೆ, ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಡಿ ರೈಲ್ವೆ ಮೂಲಸೌಕರ್ಯ, ಕೋಚ್ ನಿರ್ಮಾಣ ಮತ್ತಿತರ ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾವನೆ ಉತ್ತಮ ನಿರ್ಧಾರ.

ರೈಲ್ವೆ ವಲಯದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನ ಅಂಶಗಳು ಪೂರಕವಾಗಿವೆ. ರೈಲ್ವೆ ಸಚಿವರು ರಾಜ್ಯದವರೇ ಆಗಿರುವುದರಿಂದ ಹೆಚ್ಚು ಪಾಲು ಪಡೆಯಬೇಕು. ರಾಜ್ಯದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಜತೆ ರಾಜ್ಯ ಸರ್ಕಾರವು ಸಮನ್ವಯತೆ ಸಾಧಿಸಿ ರಾಜ್ಯದಿಂದ ಕೇಂದ್ರ ಸಚಿವರಾಗಿರುವವರನ್ನು ವಿಶ್ವಾಸಕ್ಕೆ ತೆಗದುಕೊಂಡು ರಾಜ್ಯದ ಎಲ್ಲ ಸಂಸದರು ರೈಲ್ವೆ ಬೇಡಿಕೆಗಳ ಬಗ್ಗೆ ನಿರಂತರ ಪ್ರಯತ್ನ ಮುಂದುವರಿಸಬೇಕು.

Advertisement

ಬಜೆಟ್‌ ವಿಶ್ಲೇಷಣೆ: ಕೃಷ್ಣ ಪ್ರಸಾದ್‌, ರೈಲ್ವೆ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next