Advertisement

ಶೂನ್ಯ ಬಂಡವಾಳ ಖುಷಿ

10:45 AM Jul 07, 2019 | mahesh |

ಕೃಷಿ  ಕ್ಷೇತ್ರದ ಅಭಿವೃದ್ಧಿಗಾಗಿ ಶೂನ್ಯ ಬಂಡವಾಳ ಕೃಷಿಯ ಅಗತ್ಯವನ್ನು ಪ್ರತಿಪಾದಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಶೂನ್ಯ ಬಂಡವಾಳ ಕೃಷಿ ಸೂತ್ರವನ್ನು ಪ್ರತಿಪಾದಿಸಿ ದ್ದಾರೆ. ‘ಈ ಸೂತ್ರವು ಕೃಷಿಯನ್ನು ಸುಸ್ಥಿರಗೊಳಿಸುತ್ತದೆ ಮತ್ತು ಕೃಷಿಯಲ್ಲಿನ ಆದಾಯವನ್ನು ದ್ವಿಗುಣಗೊಳಿಸುತ್ತದೆ’ ಎಂದು ಪ್ರತಿಪಾದಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಶುಕ್ರವಾರ 2019-20ರ ಸಾಲಿನ ಕೇಂದ್ರ ಬಜೆಟ್ ಮಂಡಿಸಿ ಮಾತನಾಡಿದ ಸಚಿವರು, ಸಾವಯವ ಪದ್ಧತಿಯ ಮೇಲೆ ಅವಲಂಬಿತವಾದ, ರಾಸಾಯನಿಕಗಳಿಂದ ಮುಕ್ತವಾದ ಸಹಜ ಕೃಷಿಯು ಸುಸ್ಥಿರವಾಗಿದ್ದು, ಕಡಿಮೆ ಬಂಡವಾಳವನ್ನು ಬೇಡುತ್ತದೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಕೃಷಿ ಕ್ಷೇತ್ರದ ಉದ್ಯಮಿಗಳ ಬೆಂಬಲಕ್ಕೂ ಕೇಂದ್ರ ಸರ್ಕಾರ ನಿಲ್ಲುತ್ತದೆ ಎಂದು ತಿಳಿಸಿದರು.

ಕರ್ನಾಟಕದ ಪರಿಕಲ್ಪನೆಯಿದು: ‘ಶೂನ್ಯ ಬಂಡವಾಳ ಕೃಷಿ’ ಅಪ್ಪಟ ಕರ್ನಾಟಕದ ಪರಿಕಲ್ಪನೆ. 2002ರ ರೈತ ಚಳವಳಿಯ ದಿನಗಳಲ್ಲಿ ಈ ಪರಿಕಲ್ಪನೆ ಉದಯಿಸಿತ್ತು. ಕೃಷಿ ತಜ್ಞ ಸುಭಾಷ್‌ ಪಾಲೇಕರ್‌ ಮತ್ತು ರಾಜ್ಯ ರೈತಸಂಘದ ಪರಿಕಲ್ಪನೆಯೊಂದಿಗೆ ರಾಜ್ಯದಲ್ಲಿ ಇದನ್ನು ಹೆಚ್ಚು ಪ್ರಚುರಪಡಿಸಲಾಗಿತ್ತು. ಸಾವಯವ ಮಾದರಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಈ ಪ್ರಯೋಗ ಕರ್ನಾಟಕದಲ್ಲಿ ಯಶಸ್ವಿಯಾಗುತ್ತಲೇ ದೇಶದ ಹಲವು ರಾಜ್ಯಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಯಿತು. ಇದೊಂದು ಬಂಡವಾಳರಹಿತ ಅಥವಾ ಅತ್ಯಂತ ಕಡಿಮೆ ಬಂಡವಾಳದಲ್ಲಿ ಕೈಗೊಳ್ಳಬಹುದಾದ ಕೃಷಿ ಪದ್ಧತಿಯಾಗಿದ್ದರಿಂದ ಇದು ‘ಶೂನ್ಯ ಬಂಡವಾಳ ಕೃಷಿ’ ಎಂಬ ಖ್ಯಾತಿಗೆ ಒಳಗಾಗಿದೆ.

ಈ ಕೃಷಿ ಪದ್ಧತಿ ಕೃಷಿ ಚಟುವಟಿಕೆಗಳ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ. ಸ್ವದೇಶಿ ವಸ್ತುಗಳ ಪದ್ಧತಿ ಹಾಗೂ ನೈಸರ್ಗಿಕವಾಗಿ ದೊರೆಯುವ ಕಚ್ಚಾ ಪದಾರ್ಥಗಳ ಬಳಕೆಗೆ ಉತ್ತೇಜನ ನೀಡುತ್ತದೆ. ರಾಸಾಯನಿಕಗಳ ಬಳಕೆಯಿಂದ ಆಗುವ ಹಾನಿಯನ್ನು, ಆರೋಗ್ಯದ ಮೇಲಿನ ದುಷ್ಪರಿಣಾಮವನ್ನು ಇದು ತಗ್ಗಿಸುತ್ತದೆ.

ಕೃಷಿ ಚಟುವಟಿಕೆಯಲ್ಲಿ ಹೆಚ್ಚುತ್ತಿರುವ ವೆಚ್ಚ, ಬ್ಯಾಂಕ್‌ ಸಾಲದ ಮೇಲಿನ ಅತಿಯಾದ ಬಡ್ಡಿ, ಖಾಸಗಿಯವರಿಂದ ಹೆಚ್ಚಿನ ಬೆಲೆಗೆ ಬೀಜ ಖರೀದಿ ಮುತಾದ ಕಾರಣಗಳಿಂದಾಗಿ ದೇಶದ ಹಲವು ರಾಜ್ಯಗಳಲ್ಲಿನ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಆರ್ಥಿಕ ಉದಾರೀಕರಣ ನೀತಿಯ ಫ‌ಲವಾಗಿ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರನ್ನು ಸಾಲಿನ ಸುಳಿಯಿಂದ ಪಾರು ಮಾಡುವುದು, ಸಣ್ಣ ಪ್ರಮಾಣದ ಕೃಷಿಯನ್ನು ಲಾಭದಾಯಕವನ್ನಾಗಿಸುವುದು ‘ಶೂನ್ಯ ಬಂಡವಾಳ ಕೃಷಿ’ಯ ಪ್ರಮುಖ ಉದ್ದೇಶ. ಈಗ ಕೇಂದ್ರ ಸರ್ಕಾರ ಈ ಪದ್ಧತಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಿದೆ.

Advertisement

10 ಸಾವಿರ ‘ಕೃಷಿಕರ ಸಂಘ’ ಸ್ಥಾಪನೆ
ದೇಶದ ರೈತರ ಆದಾಯ ವೃದ್ಧಿಗೆ ಹಲವು ಕ್ರಮಗಳನ್ನು ಘೋಷಿಸಿರುವ ವಿತ್ತ ಸಚಿವರು, ಮುಂದಿನ 5 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ 10 ಸಾವಿರ ‘ಕೃಷಿಕರ ಸಂಘ’ಗಳನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ರೈತರ ಉತ್ಪನ್ನಗಳ ಮಾರುಕಟ್ಟೆ ವೃದ್ಧಿಗೆ ಮುಂದಾಗಿರುವ ವಿತ್ತ ಸಚಿವರು, ‘ಇ-ನ್ಯಾಮ್‌’ (ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆ) ವಿಸ್ತರಣೆಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಜೊತೆ ಸಹಕಾರದಿಂದ ಕೆಲಸ ನಿರ್ವಹಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಆ ಮೂಲಕ ರೈತರು ಆನ್‌ಲೈನ್‌ ಮಾರುಕಟ್ಟೆ ಮೂಲಕ ತಾವು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಪಡೆಯಲು ಪ್ರೋತ್ಸಾಹ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next