ಹೊಸದಿಲ್ಲಿ : ವಿತ್ತ ಸಚಿವ ಅರುಣ್ ಜೇತ್ಲಿ ಅವರಿಂದು ಸಂಸತ್ತಿನಲ್ಲಿ ಮಂಡಿಸಿರುವ ಕೇಂದ್ರ ಬಜೆಟ್ ಪ್ರಕಾರ ಮುಂದಿನ ವಿತ್ತೀಯ ವರ್ಷದಲ್ಲಿ ಪ್ರತೀ ರೂಪಾಯಿ ಆದಾಯದಲ್ಲಿ ಕೇಂದ್ರ ಸರಕಾರ 68 ಪೈಸೆಯನ್ನು ನೇರ ಹಾಗೂ ಪರೋಕ್ಷ ತೆರಿಗೆಯ ಮೂಲಕ ಗಳಿಸುತ್ತದೆ.
ಖರ್ಚುಗಳ ಪಟ್ಟಿಯನ್ನು ಗಮನಿಸಿದರೆ ರಾಜ್ಯದ ತೆರಿಗೆ ಪಾಲು ಪಾವತಿಗೆ ಪ್ರತೀ ರೂಪಾಯಿಗೆ 24 ಪೈಸೆ ಮತ್ತು ಬಡ್ಡಿ ಪಾವತಿಗೆ 18 ಪೈಸೆ ಖರ್ಚಾಗುತ್ತದೆ.
ಸರಕಾರದ ಭಂಡಾರವನ್ನು ಸೇರುವ ಪ್ರತೀ ರೂಪಾಯಿಯಲ್ಲಿ 19 ಪೈಸೆ ಮಾರುಕಟ್ಟೆಯಲ್ಲಿ ಎತ್ತಲಾಗುವ ಸಾಲದಿಂದ ಬರುತ್ತದೆ; 18 ಪೈಸೆ ಬಡ್ಡಿ ಪಾವತಿಗೆ ಹೋಗುತ್ತದೆ.
ಹಾಲಿ ಹಣಕಾಸು ವರ್ಷದಲ್ಲಿ ರಕ್ಷಣಾ ವಲಯಕ್ಕೆ ಪ್ರತೀ ರೂಪಾಯಿಗೆ 10 ಪೈಸೆ ವಿನಿಯೋಗವಾಗುತ್ತಿದೆ; ಮುಂದಿನ 2017-18ರ ಹಣಕಾಸು ವರ್ಷದಲ್ಲಿ ಇದನ್ನು ಒಂದು ಪೈಸೆಯಷ್ಟು ಇಳಿಸಲಾಗಿದೆ; ಆ ಪ್ರಕಾರ 9 ಪೈಸೆ ವಿನಿಯೋಗವಾಗುತ್ತದೆ.
ಸರಕಾರಕ್ಕೆ ಏಕೈಕ ಮೂಲದಿಂದ ಬರುವ ಗರಿಷ್ಠ ಆದಾಯ ಕಾರ್ಪೋರೇಟ್ ತೆರಿಗೆಯಿಂದ, ಪ್ರತೀ ರೂಪಾಯಿಗೆ 19 ಪೈಸೆ ಪ್ರಮಾಣದಲ್ಲಿ ಬರುತ್ತದೆ. ಸೇವಾ ತೆರಿಗೆಯಿಂದ ಬರುವ ಆದಾಯ ಪ್ರತೀ ರೂಪಾಯಿಗೆ 10 ಪೈಸೆ.
ಆದಾಯ ತೆರಿಗೆ ರೂಪದಲ್ಲಿ ಸರಕಾರಕ್ಕೆ ಹಾಲಿ ಹಣಕಾಸು ವರ್ಷದಲ್ಲಿ ಬರುತ್ತಿರುವ ಆದಾಯ ಪ್ರತೀ ರೂಪಾಯಿಗೆ 14 ಪೈಸೆ; ಮುಂದಿನ ಹಣಕಾಸು ವರ್ಷದಲ್ಲಿ ಇದು 16 ಪೈಸೆಗೆ ಏರಲಿದೆ.
ಪರೋಕ್ಷ ತೆರಿಗೆ ರಂಗದಲ್ಲಿ ಅಬಕಾರಿ ಮತ್ತು ಕಸ್ಟಮ್ಸ್ ಮೂಲಕ ಸರಕಾರಕ್ಕೆ ಹಾಲಿ ಹಣಕಾಸು ವರ್ಷದಲ್ಲಿ ಸಿಗುತ್ತಿರುವ ಆದಾಯ ಪ್ರತೀ ರೂಪಾಯಿಗೆ 21 ಪೈಸೆ; ಇದು ಮುಂದಿನ ಹಣಕಾಸು ವರ್ಷದಲ್ಲಿ 23 ಪೈಸೆಗೆ ಏರಲಿದೆ.