Advertisement

ಸಿಗದ ಮನೆ ಹಂಚಿಕೆ ಪತ್ರ: ಡಿಸಿ ಕಚೇರಿಗೆ ಬಂದ ಕುಟುಂಬ

08:19 AM Feb 12, 2019 | |

ಕಲಬುರಗಿ: ನಗರದ ಜಾಫರಾಬಾದ್‌ನ ಪಂಡಿತ್‌ ದೀನದಯಾಳ ಉಪಾಧ್ಯಾಯ ಸ್ಲಂ ಬಡಾವಣೆ ನಿವಾಸಿಗಳಿಗೆ ಮನೆಗಳ ಹಂಚಿಕೆ ಪತ್ರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕುಟುಂಬವೊಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಮಗ್ರಿಗಳ ಸಮೇತ ಬಂದು ಪ್ರತಿಭಟಿಸಿದ ಪ್ರಸಂಗ ಸೋಮವಾರ ನಡೆದಿದೆ.

Advertisement

ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ 15 ದಿನಗಳ ಹಿಂದೆ ಬಡಾವಣೆ ನಿವಾಸಿಗಳಿಗೆ ಹಂಚಿಕೆ ಪತ್ರ ವಿತರಿಸಲಾಗಿದೆ. ಆದರೆ, ಕೆಲ ನಿವಾಸಿಗಳಿಗೆ ಮನೆ ಹಂಚಿಕೆ ಪತ್ರ ನೀಡದೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ತಕ್ಷಣವೇ ಕ್ರಮಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಪರಶುರಾಮ ಅಟ್ಟೂರಕರ್‌ ಎಂಬುವರು ತಮ್ಮ ಕುಟುಂಬದ ಸಮೇತ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಅವರ ಕಚೇರಿ ಎದುರು ಧರಣಿ ಕುಳಿತಿದ್ದರು.

ನಾವು 15 ವರ್ಷಗಳಿಂದ ಬಡಾವಣೆಯಲ್ಲಿ ವಾಸವಿದ್ದು, ಮನೆ ಹಂಚಿಕೆ ಹಾಗೂ ಮೂಲ ಸೌಕರ್ಯ ಫಲಾನುಭವಿಗಳ ಆಯ್ಕೆಯಲ್ಲಿ ನಮ್ಮ ಹೆಸರು ತೆಗೆದು ಹಾಕಲಾಗಿದೆ. ಮಂಡಳಿ ಕಾರ್ಯಪಾಲಕ ಖಯುಮ್‌ ಪಟೇಲ್‌, ಸಹಾಯಕ ಕಾರ್ಯಪಾಲಕ ಅರುಣಕುಮಾರ ಮಹಾಶೆಟ್ಟಿ ಹಾಗೂ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸೇರಿಕೊಂಡು ತಮಗೆ ಬೇಕಾದವರಿಗೆ ಮನೆ ಹಂಚಿಕೆ ಪತ್ರ ವಿತರಿಸಿದ್ದಾರೆ ಎಂದು ಕುಟುಂಬಸ್ಥರು ದೂರಿದರು.

ಮನೆ ಹಂಚಿಕೆ ಪತ್ರದಲ್ಲಿನ ಅನ್ಯಾಯ ಸರಿಪಡಿಸಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಇದುವರೆಗೂ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡಿಲ್ಲ. ಹೀಗಾಗಿ ನಮ್ಮ ಮನೆ ಮಹಿಳೆಯರು, ಮಕ್ಕಳು ಅತಂತ್ರ ಸ್ಥಿತಿಗೆ ಸಿಲುಕುವಂತಾಗಿದೆ. ಅನಿರ್ವಾಯವಾಗಿ ಇಡೀ ಮನೆ ಸಾಮಾನುಗಳನ್ನು ಕಟ್ಟಿಕೊಂಡು ಬಂದು ಜಿಲ್ಲಾಧಿಕಾರಿ ಕಾರ್ಯಾಲಯ ಎದುರು ಧರಣಿ ನಡೆಸುತ್ತಿದ್ದೇವೆ ಎಂದು ಪರಶುರಾಮ ಅಟ್ಟೂರಕರ್‌ ಅಳಲು ತೋಡಿಕೊಂಡರು.

ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿ ಕೆಲವರಿಗೆ ಮನೆ ಹಂಚಿಕೆಯಾಗದಂತೆ ವಂಚಿಸಿದ್ದಾರೆ. ಎರಡು ದಿನಗಳೊಳಗೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ನಮ್ಮ ಕುಟುಂಬದವರಿಗೆ ಕಾನೂನುಬದ್ಧವಾಗಿ ಮನೆ ಹಂಚಿಕೆ ಪತ್ರ ವಿತರಿಸಬೇಕು. ಅಲ್ಲದೇ, ತಮ್ಮ ಕುಟುಂಬಕ್ಕೆ ಜೀವ ಭಯವಿದ್ದು, ಸೂಕ್ತ ಭದ್ರತೆ ಒದಗಿಸಬೇಕು ಎಂದು ಪರಶುರಾಮ ಅಟ್ಟೂರಕರ್‌ ಒತ್ತಾಯಿಸಿದರು.

Advertisement

ಮಂಡಳಿ ವರದಿ ಆಧರಿಸಿ ಕ್ರಮ
ಮನೆ ಹಂಚಿಕೆ ಪತ್ರದ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂಬುವುದನ್ನು ಪರಶುರಾಮ ಅಟ್ಟೂರಕರ್‌ ಕುಟುಂಬ ಜಿಲ್ಲಾಧಿಕಾರಿಗಳ ಕಚೇರಿಗೆ ತಂದಿದೆ. ನಂತರ ಜಿಲ್ಲಾಧಿಕಾರಿಗಳು ಬೆಂಗಳೂರಿನ ಕೊಳಚೆ ಅಭಿವೃದ್ಧಿ ಮಂಡಳಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಈ ಬಗ್ಗೆ ಎಂಟು ದಿನಗಳೊಳಗೆ ವರದಿ ಸಲ್ಲಿಸುವುದಾಗಿ ಕೊಳಚೆ ಮಂಡಳಿ ಅಧಿಕಾರಿಗಳು ತಿಳಿಸಿದ್ದು, ವರದಿಯನ್ನಾಧರಿಸಿ ಕ್ರಮಕೈಗೊಳ್ಳುವುದಾಗಿ ಪರಶುರಾಮ ಅಟ್ಟೂರಕರ್‌ ಕುಟುಂಬಕ್ಕೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ್‌ ‘ಉದಯವಾಣಿ’ಗೆ ತಿಳಿಸಿದ್ದಾರೆ. ಇದೇ ವೇಳೆ ಅನ್ಯಾಯ ಹಾಗೂ ಯಾವುದೇ ಸಮಸ್ಯೆ ಇದ್ದರೂ ಬಂದು ನೇರವಾಗಿ ಭೇಟಿಯಾಗಬೇಕು. ಕುಟುಂಬದೊಂದಿಗೆ ಮನೆ ಸಾಮಾನುಗಳೊಂದಿಗೆ ಕಚೇರಿಗೆ ಬರುವುದು ಸರಿಯಲ್ಲ ಎಂದು ಅಟ್ಟೂರಕರ್‌ಗೆ ಜಿಲ್ಲಾಧಿಕಾರಿಗಳು ತಿಳಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next