ಸತತ ಅಧ್ಯಯನ, ನಿರಂತರ ಪ್ರಯೋಗ ಶೀಲತೆ, ಪರ್ಯಾಪ್ತ ವಿಚಾರ ಮಂಡನೆ ಜತೆಗೆ ಆತ್ಯಂತಿಕ ವಿಧಿನಿಷೇಧದ ಮೇಳೈಸುವಿಕೆ ಯಾವುದೇ ಒಂದು ಸಿದ್ಧಾಂತದ ಪರಿಪೂರ್ಣ ಪರಿಕಲ್ಪನೆಯ ಹಿಂದಿರುವ ಪ್ರೇರಣೆ. ಸಮಾಜಕ್ಕೊ, ವಿಜ್ಞಾನಕ್ಕೊ, ಗಣಿತಕ್ಕೊ, ವೈದ್ಯಕೀಯ ಕ್ಷೇತ್ರಕ್ಕೊ ಅಥವಾ ಇನ್ನಿತರ ವಿಭಾಗಗಳಿಗೋ ಇದು ವಿಧಿತ.
Advertisement
ಯಾವುದೇ ಒಂದು ವ್ಯವಸ್ಥೆ ಆಕಾಶದಿಂದ ಪಕ್ಕನೆ ಉದುರಿ ಬಿದ್ದು ಆಚರಿಸಲ್ಪಡುವು ದಿಲ್ಲವಲ್ಲ. ಸುದೀರ್ಘ ಕಾಲಕ್ರಮದಲ್ಲಿ ಸಾಗಿ ಬರುವಾಗ ಒಳಿತು- ಕೆಡುಕುಗಳ ಮಿಶ್ರಣದಲ್ಲಿ ಕೆಡುಕುಗಳನ್ನು ಕಡಿಮೆ ಮಾಡುತ್ತಾ ಬಂದು ಕೊನೆಗೆ ಜನಹಿತವನ್ನೇ ಲಕ್ಷ್ಯವಾಗಿಟ್ಟು, ಅತ್ಯಂತ ಪಕ್ವವಾದ ಅವಸ್ಥೆಗೆ ಆತುಕೊಳ್ಳುತ್ತೇವೆ. ಅದನ್ನೇ ನಾವು ಸುವ್ಯವಸ್ಥೆ ಎನ್ನುತ್ತೇವೆ. ಯಾವುದೋ ಒಂದು ರೋಗಕ್ಕೆ ಆ ಕಾಲದಲ್ಲಿ ಕಂಡುಹಿಡಿದ ಔಷಧ ಮುಂದೆ ಹತ್ತು ಹಲವು ಮಜಲುಗಳಲ್ಲಿ ಸಂಶೋಧನೆಗಳಿಗೆ ಒಳಪಟ್ಟು ಉನ್ನತ ಶ್ರೇಣಿಯ ಔಷಧವಾಗಿ ಬಳಸಲ್ಪಡುತ್ತದೆ. ಹಾಗೆಯೇ ಒಂದು ವ್ಯವಸ್ಥೆ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ ಎಂದರೆ ಅದರ ಹಿಂದೆ ಸುದೀರ್ಘವಾದ ಇತಿಹಾಸವಿದೆ, ಸಾವಿರಾರು ಬಾರಿ ಮೌಲ್ಯದ ನಿಕಷದಲ್ಲಿ ಮಿಂದೆದ್ದು ಬಂದಿದೆ. ಮತ್ತೆ ತಾನೆ ಅದು ಪರಂಪರೆ ಯಾಗಿ ಜನಮಾನಸ ಒಪ್ಪಿಕೊಳ್ಳುವುದು. ಹೌದು, ಪ್ರತಿಯೊಂದರಲ್ಲೂ ಶಿಸ್ತಿನ ಮಾದರಿಯನ್ನು, ವ್ಯವಸ್ಥಿತ ಶಿಸ್ತನ್ನು, ಶಿಸ್ತಿನ ವ್ಯವಸ್ಥೆಯನ್ನು ರೂಪುಗೊಳಿಸಬೇಕಾದರೆ ಅಲ್ಲಿ ಎಲ್ಲವನ್ನೂ ಅಳೆದು ತೂಗಿ ಸಂತುಲಿತ ಮಾನದಂಡದಲ್ಲಿ ನೇರ್ಪುಗೊಳಿಸಿರುತ್ತಾರೆ. ಒಬ್ಬೊಬ್ಬರ ಮಾನಸಿಕತೆಗನುಗುಣವಾಗಿ ದಿನಕ್ಕೊಂದು ವ್ಯವಸ್ಥೆಯನ್ನು ಸಿನಿಕತನದಿಂದ ಬದಲಾಯಿಸಲಾಗುವುದಿಲ್ಲ. ಪರಿಶುದ್ಧ ಪರಿಮಾಣದ ಮಾನಕೀಕರಣದ ಮಾನದಂಡದ ಮೂಸೆಯಲ್ಲಿ ಸಿದ್ಧವಾದ ಸ್ಥಾಪಿತ ವ್ಯವಸ್ಥೆಯನ್ನೇ ಪ್ರತಿಯೊಬ್ಬರೂ ಅನುಸರಿಸಬೇಕು, ಅನುಕರಿಸಬೇಕು ಮತ್ತು ಆಚರಿಸಬೇಕು.
Related Articles
Advertisement
ಮಕ್ಕಳ ಶಿಸ್ತು, ಸಂಯಮ,ಪಠ್ಯಕ್ರಮ, ಬೋಧನೆ, ಪಠ್ಯೇತರ ಚಟುವಟಿಕೆ, ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿಗೆ ಸಜ್ಜುಗೊಳಿಸುವಿಕೆ, ಉನ್ನತ ವ್ಯಾಸಂಗಕ್ಕಾಗಿನ ಅರ್ಹತೆ ಗಳಿಸುವಿಕೆ, ತಾವೇ ಪೋಷಕರಾಗಿ ಮಕ್ಕಳ ಸರ್ವಾಂಗೀಣ ಮೇಲುಸ್ತುವಾರಿ…ಹೀಗೆ ಹತ್ತಾರು ಜವಾಬ್ದಾರಿಯನ್ನು ಹೊತ್ತು ಸಮಾಜಕ್ಕಾಗಿ ದುಡಿಯುವ, ದುಡಿದು ದಣಿಯುವ ಶಿಕ್ಷಕ ವೃಂದ, ಅಡಳಿತ ಮಂಡಳಿ, ಖಾಸಗಿ ಮತ್ತು ಸರಕಾರಿ ವ್ಯವಸ್ಥೆ ನಿಜಕ್ಕೂ ಅಭಿನಂದನಾರ್ಹ. ನಾವು ಎಂದೆಂದೂ ಇವರೆಲ್ಲರಿಗೆ ಋಣಿಯಾಗಿರಬೇಕು. ಸಾಧ್ಯವಾದರೆ ಅವರ ಬೆನ್ನುತಟ್ಟಿ ಬೆಂಬಲಿಸಿ ಸ್ಫೂರ್ತಿ ತುಂಬಿ ಇನ್ನೂ ಹೆಚ್ಚು ಕೆಲಸ ಮಾಡುವಂತೆ ಪ್ರೇರೇಪಿಸಬೇಕು.
ನಾಗರಿಕತೆಯ ವಿಕಾಸದೊಂದಿಗೆ ಹೊಸ ವಿನ್ಯಾಸ ಗಳು ಬದುಕಿನ ಪ್ರತೀ ಹೆಜ್ಜೆಯಲ್ಲೂ ಗೋಚರವಾಗುತ್ತಾ ಅದನ್ನೇ ರೂಢಿಯಲ್ಲಿ ಬಳಸುತ್ತಾ ಮುಂದೆ ಪರಿ ಪಕ್ವಗೊಂಡು ಸತ್ಸಂಪ್ರದಾಯದ ಬೀಜವಾಗಿ ಅದೇ ಸಂಸ್ಕೃತಿ ಎಂಬ ನಾಮರೂಪದ ಹೆಮ್ಮರವಾಗಿ ಬೆಳೆದು ಸಮಸ್ತ ಭಾರತೀಯರಿಗೆ ನೆರಳಾಯಿತು. ಮಕ್ಕಳ ಮನಸ್ಸು ಹಸಿಮಣ್ಣಿನ ಗೋಡೆಯಂತೆ ಮೃದು. ಮೆತ್ತನೆಯ ಚಿತ್ತಭಿತ್ತಿಯಲ್ಲಿ ಉನ್ನತ ಮೌಲ್ಯಗಳನ್ನು ಬಿತ್ತಿ ಶ್ರೇಷ್ಠ ಫಲ ಪಡೆಯಬೇಕು. ಉದಾರತೆ, ಸಮಾನತೆ, ಏಕತೆ, ಸಮಗ್ರತೆ, ಭಾವೈಕ್ಯತೆ, ಸಹೋದರತೆ, ಸೌಶೀಲ್ಯತೆ… ಹೀಗೆ ಉದಾತ್ತ ಗುಣಗಳನ್ನು ನಮ್ಮ ಮಕ್ಕಳ ನೆತ್ತರ ಕಣಕಣಗಳಲ್ಲೂ ಸು#ರಿಸುವಂತೆ ತ್ರಿಕರಣಶುದ್ಧರಾಗಿ ಪ್ರವೃತ್ತರಾಗಬೇಕು. ಯುವಪೀಳಿಗೆಯ ಅಸಾಧಾರಣ ಶಕ್ತಿ ಸಾಮರ್ಥ್ಯವನ್ನು ಹರಿದು ಹಂಚಿ ಹೋಗಲು ಬಿಡಬಾರದು. ಅದನ್ನು ಗುರಿಯೆಡೆಗೆ ಅಖಂಡವಾಗಿ ಪ್ರವಹಿಸುವಂತೆ ನೋಡಿ ಕೊಳ್ಳಬೇಕು. ಯುವಶಕ್ತಿಯನ್ನು ವೈಯಕ್ತಿಕ ಹಿತಾಸಕ್ತಿಗೆ ದುರುಪಯೋಗಪಡಿಸಿಕೊಳ್ಳುವುದು ಅಕ್ಷಮ್ಯ. ಇಂತಹ ಪಾತಕ ಪ್ರವೃತ್ತಿ ಆ ವಿದ್ಯಾರ್ಥಿಗಳ ಸುಂದರ ಬಾಳಿನಲ್ಲಿ ಆಡುವ ಚೆಲ್ಲಾಟ ಮಾತ್ರವಲ್ಲ ಭವಿಷ್ಯದ ಬೆಳವಣಿಗೆಗೆ ಕೊಡಲಿ ಏಟು.
ಪ್ರಶಾಂತ ವಾತಾವರಣದಲ್ಲಿ ಆಗಾಗ ತಲ್ಲಣ, ಆಂದೋಲನ ಸಹಜ. ಆದರೆ ಅದು ನಮ್ಮ ಸಂಕುಚಿತ ಮನೋಭೂಮಿಕೆಯಲ್ಲಿ ವಿಷವೃಕ್ಷವಾಗಬಾರದು. ಮುಂದಿನ ತಲೆಮಾರಿನ ಕಂದಮ್ಮಗಳ ಹಾದಿಗೆ ಮುಳ್ಳಾಗಬಾರದು. ಶ್ರೇಷ್ಠವಾದ ಸಿದ್ಧಾಂತಗಳ ಅಡಿಪಾಯದಲ್ಲಿ ಕಟ್ಟಲ್ಪಟ್ಟ ನಮ್ಮ ಶೈಕ್ಷಣಿಕ ಮೌಲ್ಯಗಳು ಕುತ್ಸಿತ ಕುಯುಕ್ತಿಗಳಿಗೆ ಬಲಿಯಾಗದಂತೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹೊಸ ಜನಾಂಗವು ಸುಂದರ ಬದುಕು ಕಟ್ಟಿಕೊಳ್ಳುವಲ್ಲಿ ನಮ್ಮ ಉತ್ತರದಾಯಿತ್ವವಿದೆ. ಪ್ರತಿಯೊಬ್ಬರು ಅಂತಃಶೋಧ ಮಾಡಿ ಕೊಳ್ಳಬೇಕಾದ ಜರೂರು ಹಿಂದೆಂದಿಗಿಂತಲೂ ಹೆಚ್ಚಾಗಿದೆ.
– ಡಾ| ಬುಡ್ನಾರು ವಿನಯಚಂದ್ರ ಶೆಟ್ಟಿ