Advertisement

ಏಕರೂಪ ಚಿಕಿತ್ಸೆ: ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಕೊಡುಗೆ

08:57 AM Aug 29, 2017 | |

ಬೆಂಗಳೂರು: ರಾಜ್ಯದ 1.40 ಕೋಟಿ ಕುಟುಂಬಗಳಿಗೂ ಏಕರೂಪದ ಆರೋಗ್ಯ ಭಾಗ್ಯ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್‌ 1 ರಿಂದ ರಾಜ್ಯದ ಎಲ್ಲ ನಾಗರಿಕರಿಗೂ ಈ ಸೌಲಭ್ಯ ದೊರೆಯಲಿದೆ.

Advertisement

ಎಪಿಎಲ್‌, ಬಿಪಿಎಲ್‌ ಕಾರ್ಡ್‌ ಹೊಂದಿರುವ ಮತ್ತು ಸಹಕಾರ ಸಂಘದ ಸದಸ್ಯರು ತಮ್ಮ ಆಧಾರ್‌ ಕಾರ್ಡ್‌ ನಂಬರ್‌ ನೀಡಿ ನೋಂದಣಿ ಮಾಡಿಕೊಂಡರೆ, ಆರೋಗ್ಯ ಇಲಾಖೆಯಿಂದ ಉಚಿತ ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ದೊರೆಯುತ್ತದೆ. ಇವರನ್ನು ಹೊರತುಪಡಿಸಿ ಐಟಿ ಬಿಟಿ ಕ್ಷೇತ್ರದ ಉದ್ಯೋಗಿಗಳು, ಆದಾಯ ತೆರಿಗೆ ಪಾವತಿಸುವ ವ್ಯಾಪಾರಸ್ಥರು ಹಾಗೂ ರಾಜ್ಯದಲ್ಲಿ ವಾಸವಾಗಿದ್ದು, ಆಧಾರ್‌ ನಂಬರ್‌ ಹೊಂದಿರುವ ಹೊರ ರಾಜ್ಯದ ಎಲ್ಲ ಪ್ರಜೆಗಳಿಗೂ ಈ ಯೋಜನೆ ಅನುಕೂಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬಿ ವರ್ಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವವರು 300 ರೂ ಹಾಗೂ ನಗರ ಪ್ರದೇಶದಲ್ಲಿ ವಾಸವಾಗಿರುವವರು 700 ರೂಪಾಯಿ ವಾರ್ಷಿಕ ಹಣ ಪಾವತಿಸಿ ಯೋಜನೆಯ ಲಾಭಪಡೆಯ  ಬಹುದು. ಯಶಸ್ವಿನಿ ಯೋಜನೆಯಲ್ಲಿ  ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ 2.38 ಕೋಟಿ ಫ‌ಲಾನುಭವಿಗಳಿಗೆ ಯಾವುದೇ ವಂತಿಗೆ ಪಡೆ 
ಯದೇ ಕಾರ್ಡ್‌ ನೀಡಲು ಸರ್ಕಾರ ನಿರ್ಧರಿಸಿದೆ.

ಚಿಕಿತ್ಸೆ ಮೊದಲು, ಪಾವತಿ ನಂತರ ಎಂಬ ತತ್ವದಡಿ ಅಪಘಾತ ಮತ್ತು ಇತರ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಕಡ್ಡಾಯ. ಮುಖ್ಯಮಂತ್ರಿ ಹರೀಶ್‌ ಸಾಂತ್ವನ ಯೋಜನೆಯ ಮಾದರಿಯಲ್ಲಿಯೇ ಮೊದಲ 48 ಗಂಟೆಯ ಚಿಕಿತ್ಸೆಗೆ 25000 ರೂ.ವರೆಗೆ ವೆಚ್ಚ ಸರ್ಕಾರವೇ ಭರಿಸುತ್ತದೆ. ಆ ನಂತರ ರೋಗಿಯ ಅಗತ್ಯವಿರುವ ಚಿಕಿತ್ಸೆಗನುಗುಣವಾಗಿ ಆಸ್ಪತ್ರೆ ಬದಲಾವಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಬೇರೆ ಆಸ್ಪತ್ರೆಗೆ ವರ್ಗಾವಣೆಗೆ 108, 104 ಸೇವೆ ಹಾಗೂ ಉಚಿತ ರೋಗ ಪತ್ತೆ, ಡಯಾಲಿಸಿಸ್‌, ಉಚಿತ ರಕ್ತ, ಉಚಿತ ಪ್ಲೇಟ್ಲೆಟ್ಸ್‌ ಮತ್ತು ರಕ್ತದ ಅಂಗಾಂಗಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ.

ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಯಶಸ್ವಿನಿ ಹಾಗೂ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ನಿಯಮಗಳನ್ನೇ ಮುಂದುವರೆಸಲು ತೀರ್ಮಾನಿಸಿದ್ದು, ಒಂದು ಶಸ್ತ್ರ ಚಿಕಿತ್ಸೆಗೆ 1.5 ಲಕ್ಷ ದಿಂದ ಗರಿಷ್ಠ 2 ಲಕ್ಷದವರೆಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲಿದೆ. ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ ಈಗಾಗಲೇ ಜಂಟಿ ಸದನ ಸಮಿತಿಯಿಂದ ವರದಿ ಸಿದ್ಧಗೊಂಡಿರುವುದರಿಂದ ಆ ವಿಧೇಯಕ ಜಾರಿಗೆ ಬಂದ ನಂತರ ಖಾಸಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆಗೆ ಸರ್ಕಾರವೇ ದರ ನಿಗದಿ ಮಾಡಲಿದೆ. ಕಾಯ್ದೆ ತಿದ್ದುಪಡಿಯಾಗುವವರೆಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ದರಗಳು ಅನ್ವಯಿಸಲಿವೆ.

ಸಂಪುಟ ಸಭೆಯ ನಂತರ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಾಯಧನದಿಂದ ನಡೆಯುತ್ತಿದ್ದ ವಾಜಪೇಯಿ ಆರೋಗ್ಯ ಯೋಜನೆ, ರಾಜೀವ್‌ ಆರೋಗ್ಯ ಭಾಗ್ಯ, ಜ್ಯೋತಿ ಸಂಜೀವಿನಿ, ಸ್ವಾಸ್ಥ್ಯ ಬಿಮಾ ಯೊಜನೆ, ಪೋಲಿಸ್‌ ಆರೋಗ್ಯ ಭಾಗ್ಯ, ಸಿಎಂ ಹರೀಶ್‌ ಸಾಂತ್ವನ ಯೋಜನೆ ಸೇರಿದಂತೆ ಏಳು ಆರೋಗ್ಯ ಯೋಜನೆಗಳನ್ನು ಕೈ ಬಿಟ್ಟು ಕರ್ನಾಟಕದ ಎಲ್ಲ ನಿವಾಸಿಗಳಿಗೂ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಸರ್ವರಿಗೂ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಲಾಗುವುದು ಎಂದರು. ಯೋಜನೆಯ ಫ‌ಲಾನುಭವಿಯ ಆಧಾರ್‌ ಲಿಂಕ್‌ ಮಾಡಿ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ಕಾರ್ಡ್‌ ನೀಡಲಾಗುವುದು ಎಂದರು.

Advertisement

ಯಾರ್ಯಾರಿಗೆ ಈ ಸೌಲಭ್ಯ? 
ಎ ವರ್ಗ : ರೈತ ಕುಟುಂಬಗಳು, ಅನುದಾನಿತ ಶಾಲಾ ಕಾಲೇಜು ಉಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತರು, ಬಿಸಿ ಊಟ ಮತ್ತು ಆಶಾ ಕಾರ್ಯಕರ್ತೆಯರು, ಇಎಸ್‌ಐ ಸೌಲಭ್ಯ ವಂಚಿತ ಇತರೆ ಕುಟುಂಬಗಳು, ಅಸಂಘಟಿತ ಕಾರ್ಮಿಕ ವರ್ಗ, ಆಟೋ ಚಾಲಕರು, ದಿನಗೂಲಿ ಕಾರ್ಮಿಕರು, ಚಿಂದಿ ಆಯುವವರು, ಗಣಿ ಕಾರ್ಮಿಕರು, ರಸ್ತೆ ವ್ಯಾಪಾರಿಗಳು, ಕಟ್ಟಡ ನಿರ್ಮಾಣ ಕೆಲಸಗಾರರು, ನೇಕಾರರು, ನೈರ್ಮಲ್ಯ ಕೆಲಸಗಾರರು, ನರೇಗಾ ಕಾರ್ಮಿಕರು, ಎಸ್ಸಿ, ಎಸ್ಟಿ ಪಂಗಡದವರು, ಪೌರ ಕಾರ್ಮಿಕರು, ಪ್ರಾಣಿ ಕಡಿತದ ಸಂತ್ರಸ್ತರು, ಮಾಧ್ಯಮದವರು, ಸಹಕಾರಿ ಸಂಘಗಳ
ಸದಸ್ಯರು, ಸರ್ಕಾರಿ ನೌಕರರು ಹಾಗೂ ರಾಜಕಾರಣಿಗಳು.

ಬಿ ವರ್ಗ : ಎ ವರ್ಗದಲ್ಲಿ ಸೇರಿರದ ಇತರ ವರ್ಗದ ಜನರು, ಐಟಿ,ಬಿಟಿ ಉದ್ಯೋಗಿಗಳು, ಆದಾಯ ತೆರಿಗೆ ಸಲ್ಲಿಸುವ ವ್ಯಾಪಾರಿಗಳು, ಉದ್ಯಮಿಗಳು, ರಾಜ್ಯದಲ್ಲಿ ವಾಸವಿರುವ (ಆಧಾರ ಕಾರ್ಡ್‌ ಹೊಂದಿರುವ) ಹೊರ ರಾಜ್ಯ ಹಾಗೂ ಹೊರ ದೇಶದ ಪ್ರಜೆಗಳು.

ಆರೊಗ್ಯವೇ ಭಾಗ್ಯ
1. ಏನಿದು ಏಕರೂಪ ಹೆಲ್ತ್‌ ಕಾರ್ಡ್‌?
ಉಚಿತ ಚಿಕಿತ್ಸೆಗಾಗಿ ರಾಜ್ಯದಲ್ಲಿರುವ ನಾನಾ ಆರೋಗ್ಯ ಯೋಜನೆಗಳನ್ನು ಒಟ್ಟುಗೂಡಿಸಿ ಒಂದರಡಿಯಲ್ಲಿ ತರುವುದೇ ಏಕರೂಪ ಆರೋಗ್ಯ ಕಾರ್ಡ್‌. 

2. ಏನಿದರ ಉಪಯೋಗ?
ಸಮಾಜದ ಎಲ್ಲ ಸ್ತರದ ಜನರಿಗೆ ಒಂದಿಲ್ಲೊಂದು ರೀತಿಯಲ್ಲಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವುದು. 1.5 ಲಕ್ಷದಿಂದ 2 ಲಕ್ಷ ರೂ. ವರೆಗಿನ ಶಸ್ತ್ರಚಿಕಿತ್ಸೆಗೆ ಸರ್ಕಾರದಿಂದಲೇ ವೆಚ್ಚ. 

3. ಇದಕ್ಕೆ ಶುಲ್ಕವಿದೆಯೇ?
ಸಹಕಾರಿ ಸಂಘದ ಸದಸ್ಯರಿಗೆ ಮತ್ತು ಬಿಪಿಎಲ್‌, ಎಪಿಎಲ್‌ ಕಾರ್ಡ್‌ದಾರರಿಗೆ ಉಚಿತ. ಬಿ ವರ್ಗದ ಸದಸ್ಯರಿಗೆ ಮಾತ್ರ ಶುಲ್ಕ. ಗ್ರಾಮೀಣ ಭಾಗಕ್ಕೆ 300 ರೂ. ನಗರಕ್ಕೆ 700 ರೂ. ಶುಲ್ಕ.

4. ಪಡೆಯುವುದು ಹೇಗೆ?
ಈಗಾಗಲೇ ಯಶಸ್ವಿನಿ ಹೊಂದಿದ್ದರೆ ತನ್ನಿಂತಾನೇ ಏಕರೂಪ ಕಾರ್ಡ್‌ಗೆ ವರ್ಗ. ಹೊಸದಾಗಿ ಮಾಡಿಸಿಕೊಳ್ಳುವವರು 18004258330 ಕ್ಕೆ ಕರೆ ಮಾಡಬಹುದು. 

5. ಆಧಾರ್‌ ಬೇಕೇ? ಬೇಕು. ಸೋರಿಕೆ ತಡೆಗೆ ಆಧಾರ್‌ ಲಿಂಕ್‌
ಮಾಡಲಾಗುತ್ತಿದೆ. ಹಿಂದೆ 1,000 ಕೋಟಿ ಬೇಕಿತ್ತು. ಈಗ 869 ಕೋಟಿ ಮಾತ್ರ ಸಾಕು.

1.40ಕೋಟಿ ಕುಟುಂಬಗಳಿಗೆ ಉಪಯೋಗ

300 ಗ್ರಾಮೀಣ ಪ್ರದೇಶದ ಜನರಿಗೆ ಶುಲ್ಕ

700 ನಗರ ಪ್ರದೇಶದಲ್ಲಿ ಭರಿಸಬೇಕಾದ ಶುಲ್ಕ

Advertisement

Udayavani is now on Telegram. Click here to join our channel and stay updated with the latest news.

Next