ಕಟಪಾಡಿ: ಮಣಿಪುರ ಕುಂತಳನಗರದ ಶತಮಾನೋತ್ಸವ ಸಂಭ್ರಮದಲ್ಲಿರುವ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ 64 ವಿದ್ಯಾರ್ಥಿ ಗಳಿಗೆ ಒಂದು ಜೋಡಿ ಸಮವಸ್ತ್ರ ಹಾಗೂ ಶಿಕ್ಷಕ ವರ್ಗದವರಿಗೆ ಸಮವಸ್ತ್ರವನ್ನು ಭವಾನಿ ಫೌಂಡೇಶನ್ ಮುಂಬಯಿ ವತಿಯಿಂದ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಮುಂದಾಳತ್ವದಲ್ಲಿ ವಿತರಿಸಲಾಯಿತು.
ಬಳಿಕ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಅಳಿಲ ಸೇವೆಯನ್ನು ನಡೆಸಲಾಗುತ್ತಿದೆ. ಮುಂಬಯಿನಲ್ಲಿ 3 ಶಾಲೆಗಳನ್ನು ದತ್ತು ಪಡೆದು ಶಿಕ್ಷಣ ಸೇವೆಯನ್ನು ನಡೆಸುತ್ತಿದ್ದೇವೆ. ಇನ್ನುಳಿದಂತೆ ವಿದ್ಯಾರ್ಥಿ ಗಳಿಗೆ ಅವಶ್ಯಕ ಸ್ಕೂಲ್ ಬ್ಯಾಗ್ ಒದಗಿಸಲು ಬದ್ಧ ಎಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ದುಬೈ ಉದ್ಯಮಿ ಪ್ರಸಾದ್ ಶೆಟ್ಟಿ ಕುಂತಳನಗರ ಮಾತನಾಡಿ, ವಿಶ್ವದ ವಿಶ್ಲೇಷಕರ ಪ್ರಕಾರ ಭಾರತವು ಅಗ್ರಮಾನ್ಯ ರಾಷ್ಟ್ರವಾಗಲಿದೆ. ಅಂತಹ ದೇಶದ ಭವಿಷ್ಯವು ವಿದ್ಯಾರ್ಥಿ ಗಳು, ಯುವ ಜನತೆಯ ಕೈಯಲ್ಲಿದೆ. ಜೀವನದಲ್ಲಿ ಗುರಿ ಇರಿಸಿ ಪ್ರಯತ್ನ ಶೀಲತೆಯಿಂದ ಸಾಧಕರಾಗಿ ದೇಶದ ಭವಿಷ್ಯಕ್ಕೆ ಕೊಡುಗೆಯಾಗಿರಿ ಎಂದು ವಿದ್ಯಾರ್ಥಿ ಗಳಿಗೆ ಕರೆ ನೀಡಿದರು.
ಉದ್ಯಮಿ ಸುರೇಶ್ ಪಿ. ಶೆಟ್ಟಿ ಗುರ್ಮೆ ಮಾತನಾಡಿ, ಹೆತ್ತವರಿಗೆ ಇಂಗ್ಲಿಷ್ ಮಾಧ್ಯಮದ ಭ್ರಮೆ ಬೇಡ. ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ಶಾಲೆಯನ್ನು ಉಳಿಸುವ ಜೊತೆಗೆ ಧರ್ಮವನ್ನೂ ಬೆಳೆಸಿದಂತಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಕರಾವಳಿ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಅವರು ಬಯಲು ರಂಗ ಮಂಟಪಕ್ಕೆ 25 ಲಕ್ಷ ರೂ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಮಣಿಪುರ ಗ್ರಾ.ಪಂ.ನ 1ಲಕ್ಷ ರೂ ಅನುದಾನವನ್ನೂ ಬಳಸಿಕೊಳ್ಳಲಾಗುತ್ತದೆ. ದಾನಿಗಳ ಸಹಕಾರದಿಂದ ಶಾಲೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸುವ ಇರಾದೆಯನ್ನು ವ್ಯಕ್ತಪಡಿಸಿದರು.
ಪುಸ್ತಕ ಸಹಿತ ಇತರೇ ಶೈಕ್ಷಣಿಕ ಪರಿಕರಗಳನ್ನು ಶಾಲಾ ಹಳೆ ವಿದ್ಯಾರ್ಥಿ ಪ್ರವೀಣ್ ಪೂಜಾರಿ ತೊಕೋಳಿ ವಿತರಿಸಿದರು. ಭವಾನಿ ಫೌಂಡೇಶನ್ ಇದರ ದಿನೇಶ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು
ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾಪು, ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಮಣಿಪುರ ಗ್ರಾ.ಪಂ. ಸದಸ್ಯರಾದ ಸಂತೋಷ್ ಶೆಟ್ಟಿ, ಆಶಾ ಶೇಖರ್, ಹಿರಿಯ ಹಳೆವಿದ್ಯಾರ್ಥಿ ಗೋಪು ಪೂಜಾರಿ, ಪ್ರಮುಖರಾದ ಗುರುರಾಜ್ ಭಟ್, ವಿಖ್ಯಾತ್ ಭಟ್, ಜಯರಾಮ ಆಚಾರ್ಯ ಕಾಪು, ದೆಂದೂರು ತೋಟದಮನೆ ಅಶೋಕ್ ಶೆಟ್ಟಿ, ವಿಜಿತ್ ಶೆಟ್ಟಿ ಕೊರಂಗ್ರಪಾಡಿ ಮುಖ್ಯ ಶಿಕ್ಷಕಿ ಶ್ರೀಮತಿ ವೈ. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಆಚಾರ್ಯ ವೇದಿಕೆಯಲ್ಲಿದ್ದರು.