Advertisement

ದೇಶದ ಎಲ್ಲ ಕೃಷಿ ವಿವಿಗಳಿಗೆ ಏಕರೂಪ ಪಠ್ಯಕ್ರಮ

03:45 AM Jun 04, 2017 | |

ಕಲಬುರಗಿ: ದೇಶದ ಎಲ್ಲ 73 ಕೃಷಿ ವಿಶ್ವವಿದ್ಯಾಲಯಗಳಿಗೆ ಏಕರೂಪದ ಪಠ್ಯಕ್ರಮ ತರಲು ಕೇಂದ್ರ ಸರ್ಕಾರ ಮುಂದಾಗಿದೆಯಲ್ಲದೇ ಪಠ್ಯಕ್ರಮ ಕಾರ್ಯರೂಪಕ್ಕೆ ತರದ ವಿವಿಗಳಿಗೆ ಅನುದಾನ ಕಡಿತ ಮಾಡುವ ಸ್ಪಷ್ಟ ಎಚ್ಚರಿಕೆ ನೀಡಿದೆ.

Advertisement

ಕೃಷಿ ಕ್ಷೇತ್ರ ಬಲಪಡಿಸುವ, ಆದಾಯ ಹೆಚ್ಚಿಸುವ ಜತೆಗೆ ಹೊಸ ತಳಿಗಳ ಸಂಶೋಧನೆ ಹಾಗೂ ಪರಿಣಾಮಕಾರಿ ವಿಷಯಗಳ ಅಳವಡಿಕೆ ನಿಟ್ಟಿನಲ್ಲಿ ಕೃಷಿ ವಿವಿಗಳ 5ನೇ ಡೀನ್‌ ತಂಡವು ಶಿಫಾರಸು ಮಾಡಿರುವ ಏಕರೂಪದ ಪಠ್ಯಕ್ರಮವನ್ನು ಕಳೆದ ವರ್ಷವೇ ಕೇಂದ್ರದ ಕೃಷಿ ಸಚಿವ ರಾಧಾ ಮೋಹನ್‌ ಬಿಡುಗಡೆ ಮಾಡಿದ್ದು, ಕಳೆದ ವರ್ಷವೇ ಕೆಲವು ವಿವಿಗಳು ಕಾರ್ಯರೂಪಕ್ಕೆ ತಂದಿವೆ. ಕಾರ್ಯರೂಪಕ್ಕೆ ತರದ ವಿವಿಗಳು ಈ ವರ್ಷದಿಂದ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.

ಇಲ್ಲದಿದ್ದಲ್ಲಿ ಕೇಂದ್ರದ ಅನುದಾನ ಕಡಿತ ಮಾಡುವುದಾಗಿ ಸ್ಪಷ್ಟಪಡಿಸಿದೆಯಲ್ಲದೆ ಪಠ್ಯಕ್ರಮ ಅಳವಡಿಕೆ ಕುರಿತು ಪರಾಮರ್ಶಿಸಲು ಜೂನ್‌ನಲ್ಲಿ ದೇಶದ ಎಲ್ಲ ವಿವಿಗಳ ಕುಲಪತಿಗಳ ಸಭೆ ಕರೆಯಲಾಗಿದೆ.

ಶೇ.70ರಷ್ಟು ಪಠ್ಯಕ್ರಮ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ರೂಪಿಸಿದ್ದು, ಪಠ್ಯಕ್ರಮವನ್ನು ಎಲ್ಲ ವಿವಿಗಳ ಮುಖ್ಯಸ್ಥರು ಹಾಗೂ ಕೃಷಿ ವಿಜ್ಞಾನಿಗಳೊಂದಿಗೆ ಆರು ತಿಂಗಳ ಕಾಲ ಚರ್ಚೆ ಹಾಗೂ ಸಭೆಗಳು ಹಾಗೂ ಅಭಿಪ್ರಾಯ ಕ್ರೋಢೀಕರಿಸುವ ಮೂಲಕ ಅಂತಿಮಗೊಳಿಸಲಾಗಿದೆ. ಉಳಿದ 30ರಷ್ಟು ಪಠ್ಯಕ್ರಮ ಸ್ಥಳೀಯ ಕೃಷಿ ಕಾರ್ಯಚಟುವಟಿಕೆಗಳಿಗೆ ಅನುಸಾರವಾಗಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ.

ಕೃಷಿ ಸಚಿವಾಲಯದಡಿ ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನಿಂದ ದೇಶದ ಕೃಷಿ ವಿವಿಗಳಿಗೆ ಸುಮಾರು 600 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಈ ಅನುದಾನದಿಂದ ವಿವಿಗಳ ಹೊಸ ಸಂಶೋಧನೆ, ಗ್ರಂಥಾಲಯ, ಪ್ರಯೋಗಾಲಯ ಸೇರಿ ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ಖರ್ಚು ಮಾಡಲಾಗುತ್ತಿದೆ. ಗುಜರಾತ್‌, ಉತ್ತರಪ್ರದೇಶ, ಪಂಜಾಬ್‌ ರಾಜ್ಯಗಳಲ್ಲಿ ಕೃಷಿ ವಿವಿಗಳಿಗೆ ಆಯಾ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಕರ್ನಾಟಕ ಮಧ್ ಸ್ಥಾನದಲ್ಲಿದೆ. ಕೇಂದ್ರದ ಅನುದಾನ ಪಡೆಯುವಲ್ಲಿಯೂ ಗುಜರಾತ್‌ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. 10 ವರ್ಷಗಳಿಗೊಮ್ಮೆ ಪಠ್ಯಕ್ರಮ ಪರಿಷ್ಕರಣೆ ನಡೆಯಲಿದ್ದು, ಏಕರೂಪದ ಪಠ್ಯಕ್ರಮವಲ್ಲದೆ
ಏಕರೂಪದಲ್ಲಿಯೇ ಪರೀಕ್ಷೆ ನಡೆಸಲು ಮುಂದಾಗಲಾಗಿದೆ. ಕೃಷಿ ಪದವಿಯನ್ನು ವೈದ್ಯಕೀಯ, ಇಂಜಿನಿಯರಿಂಗ್‌ ಪದವಿಯಂತೆ ವೃತ್ತಿಪರಗೊಳಿಸಲಾಗಿದೆ. ಇದನ್ನು ಯುಜಿಸಿ ಅನುಮತಿ ಮೇರೆಗೆ ಕಾರ್ಯಗತಗೊಳಿಸಲಾಗಿದೆ. ಇದರಿಂದ ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.

Advertisement

ಕುಲಪತಿಗಳು, ಕೃಷಿ ವಿಜ್ಞಾನಿಗಳ ಸಭೆ
ದೇಶದ ಎಲ್ಲ ಕೃಷಿ ವಿವಿಗಳಲ್ಲಿ ಏಕರೂಪದ ಪಠ್ಯಕ್ರಮ ಕಾರ್ಯಾನುಷ್ಠಾನಗೊಳಿಸುವ ಸಲುವಾಗಿ ಈಗಾಗಲೇ ಎಲ್ಲ ಕುಲಪತಿಗಳ ಹಾಗೂ ಕೃಷಿ ವಿಜ್ಞಾನಿಗಳ ಸಭೆ ಕರೆದು ಚರ್ಚಿಸಲಾಗಿದೆ.ಜೂನ್‌ ತಿಂಗಳಲ್ಲಿ ಮತ್ತೂಂದು ಸಭೆ ಕರೆಯಲಾಗಿದೆ. ಕಳೆದ ವರ್ಷದಿಂದಲೇ ಕೆಲವು ವಿವಿಗಳು ಹೊಸ ಪಠ್ಯ ಅಳವಡಿಸಿಕೊಂಡಿವೆ. ಅಳವಡಿಕೆ ಮಾಡಿಕೊಳ್ಳದ ವಿವಿಗಳಿಗೆ ಈ ವರ್ಷ ಹೊಸ ಪಠ್ಯ ಕಾರ್ಯರೂಪಕ್ಕೆ ತರದಿದ್ದಲ್ಲಿ ಅನುದಾನ ಕಡಿತ ಮಾಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

– ಡಾ|ಎಂ.ಬಿ. ಚೆಟ್ಟಿ, ಸಹಾಯಕ ಮಹಾ ನಿರ್ದೇಶಕರು, ಅಖೀಲ ಭಾರತ ಕೃಷಿ ಸಂಶೋಧನಾ ಪರಿಷತು

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next