Advertisement

ಗುರುತರದ ವ್ಯಕ್ತಿತ್ವ

12:12 PM Dec 28, 2019 | mahesh |

ಹಿರಿಯರಾದ ಎಂ. ರಾಮಚಂದ್ರರನ್ನು ಹಲವು ಬಾರಿ ನೋಡಿದ್ದೆ, ಅವರ ಚಿಂತನಗಳನ್ನು ರೇಡಿಯೋದಲ್ಲಿ ಕೇಳಿದ್ದೆ. ಹಲವು ಬರಹಗಳನ್ನು ಪತ್ರಿಕೆಯಲ್ಲಿ, ಕೆಲವು ಪುಸ್ತಕಗಳನ್ನು ಅಲ್ಲಿ-ಇಲ್ಲಿ ಓದಿದ್ದೆ. ಭಾಷಣಗಳನ್ನು ಕೇಳಿದ್ದೆ. ಆದರೆ, ನನಗವರು ಆತ್ಮೀಯರಾದದ್ದು ಇತ್ತೀಚೆಗೆ. ಅವರ ಹತ್ತು ಹಲವು ಪುಸ್ತಕದ ಒಂದು ಪ್ಯಾರಾವನ್ನು ನಾನು ನನ್ನ ಒಂದು ಬರಹದಲ್ಲಿ ಬಳಸುವ ಯೋಚನೆ ಮಾಡಿದ್ದೆ. ಅದಕ್ಕಾಗಿ ಅನುಮತಿ ಕೇಳ್ಳೋಣ ಎಂದು ನೀಲಾವರ ಸುರೇಂದ್ರ ಅಡಿಗರಿಗೆ ಫೋನ್‌ ಮಾಡಿ, ರಾಮಚಂದ್ರರವರ ಮೊಬೈಲ್‌ ಸಂಖ್ಯೆ ಪಡೆದೆ.

Advertisement

ವಯೋವೃದ್ದರೂ, ಜ್ಞಾನ‌ವೃದ್ದರೂ ಆಗಿದ್ದ ರಾಮಚಂದ್ರ ಸರ್‌ ಜೊತೆ ನನ್ನ ಪರಿಚಯ ಹೇಳಿಕೊಂಡು ಫೋನ್‌ ಮಾಡಿ ಮಾತನಾಡಿದೆ. ವಿಷಯ ತಿಳಿಸಿದೆ, ಅನುಮತಿ ಬೇಡಿದೆ. “”ಅಯ್ಯೋ ಪೂರ್ಣಿಮಾ! ಅದೊಂದು ನಾಣ್ನುಡಿ. ಅದನ್ನು ಯಾರು ಬೇಕಾದರೂ ಬಳಸಬಹುದು. ಅನುಮತಿಯ ಅಗತ್ಯ ಇಲ್ಲ ನಿಮಗೆ” ಎಂದರು ಬಹುವಚನದಲ್ಲಿ. ನಾನೆಂದೆ, “”ಸರ್‌, ನಾನು ತುಂಬಾ ಕಿರಿಯಳು. ನೀವು ನನ್ನನ್ನು “ನೀನು’ ಎನ್ನುವುದೇ ಚಂದ” ಎಂದೆ.

“”ಹೋ, ಹಾಗಾ! ನಿನ್ನ ಉಪಯೋಗಕ್ಕಾಗಿ ಮತ್ತು ನೀನಾಡಿದ ಈ ಕಿರಿಯಳು ಎಂಬ ಪದಕ್ಕಾಗಿ ನಿನಗೊಂದು ಪುಸ್ತಕ ಕಳುಹಿಸುವೆ. ಅದನ್ನು ನೀನು ನಿನ್ನ ಯಾವುದೇ ಬರವಣಿಗೆಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದು” ಎಂದವರೇ ನನ್ನ ವಿಳಾಸ ಪಡೆದು ಉಷಾಸೂಕ್ತಿ ಎಂಬ ಅಮೂಲ್ಯ ಪುಸ್ತಕವನ್ನು ನನಗೆ ಕಳುಹಿಸಿ ಕೊಟ್ಟರು.

ಆ ಚಿಕ್ಕ ಚೆಂದದ ಪುಸ್ತಕವು ರಾಮಚಂದ್ರರವರು ಮಂಗಳೂರು ಆಕಾಶವಾಣಿಯಲ್ಲಿ ನೀಡಿದ ಚಿಂತನಗಳ ಸಂಗ್ರಹ! ಎಷ್ಟು ಅದ್ಭುತ ವಿಷಯಗಳನ್ನು ಒಳಗೊಂಡ ಹೊತ್ತಗೆಯದು. ಅದನ್ನು ತೆರೆದೊಡನೆ ರಾಮಚಂದ್ರರು ಹಸ್ತಾಕ್ಷರದಲ್ಲಿ ಬರೆದ ಶುಭಹಾರೈಕೆ. ಉಷಾ ಸೂಕ್ತಿ ನೋಡಿ ಮನ ತುಂಬಿ ಬಂತು. ಕಣ್ಣು ಹನಿಗೂಡಿತು. ನಾನು ಯಾರೆಂದೇ ತಿಳಿಯದ ಹಿರಿಯ ಸಾಹಿತಿಯೊಬ್ಬರ ಅಕ್ಕರೆಯನ್ನು ಅಕ್ಷರಗಳಲ್ಲಿ ಬಣ್ಣಿಸಲು ಪದ ಇಲ್ಲವಾಯಿತು. ಒಂದೇ ಗುಟುಕಿಗೆ ಉಷಾಸೂಕ್ತಿ ಓದಿದೆ. ರಾಮಚಂದ್ರರಿಗೆ ಫೋನ್‌ ಮಾಡಿದೆ. “”ಗುರುಗಳೇ, ಎಷ್ಟು ಅಮೂಲ್ಯ ಪುಸ್ತಕವನ್ನು ಕಳುಹಿಸಿದ್ದೀರಿ. ಓದಿ ಮುಗಿಸಿದೆ. ನನಗಂತೂ ಇದೊಂದು ನೆನಪಿನ ಬುತ್ತಿ ಮತ್ತು ಪ್ರೀತಿಯ ಆಸ್ತಿ” ಎಂದೆ.

ಹಾಗೆ, ನನಗೆ ಆ ಹಿರಿಯರ ಸತ್ಸಂಗ ದೊರೆಯಿತು. ಅವಳ ಉಳಿದ ಪುಸ್ತಕಗಳನ್ನು ಓದಲು ಹೇಳಿದರು. ಕೆಲವನ್ನು ಕಳುಹಿಸಿಕೊಟ್ಟರು.  ಒಮ್ಮೆಯಂತೂ, “”ನೋಡು ಪೂರ್ಣಿಮಾ, ನಮ್ಮ ಸಾಹಿತ್ಯ ಸಂಘದ ಕಾರ್ಯಕ್ರಮಕ್ಕೆ ನೀನೂ ಅತಿಥಿಯಾಗಿ ಬರಬೇಕು” ಎಂದಿದ್ದರು. ವಾರದಲ್ಲಿ ಒಂದೆರಡು ಬಾರಿ ನಾವು ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಅವರೇ ಹೇಳುತ್ತಿದ್ದಂತೆ ಕೈಬರಹದಲ್ಲಿಯೇ ಒಂದು ಪತ್ರ ಬರೆದಿಟ್ಟಿದ್ದೆ. “ತೀರ್ಥರೂಪ ಸಮಾನರಾದ…’ ಎಂದು ಆರಂಭಿಸಿದ ಆ ಪತ್ರದಲ್ಲಿ ಅವರ ಗುರುತ್ವದ ಕುರಿತು ಕೃತಜ್ಞತೆಯ ನುಡಿಗಳನ್ನು ಬರೆದಿದ್ದೆ. ಹೇಗೆ ಕಳುಹಿಸಲಿ ಈಗ ಈ ಪತ್ರವನ್ನು !

Advertisement

ಪೂರ್ಣಿಮಾ ಕಮಲಶಿಲೆ

Advertisement

Udayavani is now on Telegram. Click here to join our channel and stay updated with the latest news.

Next