ಜಿನೇವಾ:ಜಮ್ಮು-ಕಾಶ್ಮೀರದ ವಿಚಾರವಾಗಿ ಪದೇ, ಪದೇ ಮೂಗು ತೂರಿಸುತ್ತಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ ಜಿನೇವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಭಾರತದ ರಾಜ್ಯ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಜಿನೇವಾದಲ್ಲಿ ಮಂಗಳವಾರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ 42ನೇ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಾ ಸುದ್ದಿಗಾರರ ಜತೆ ಮಾತನಾಡುತ್ತ, ಜಮ್ಮು-ಕಾಶ್ಮೀರ ಭಾರತದ ರಾಜ್ಯ ಎಂದು ತಿಳಿಸಿದ್ದಾರೆ.
ಈತನ್ಮಧ್ಯೆ ಕಾಶ್ಮೀರದಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ತನಿಖೆ ನಡೆಸಲು ವಿಶ್ವಸಂಸ್ಥೆ ನೇತೃತ್ವದ ಜಂಟಿ ಸಮಿತಿಯನ್ನು ರಚಿಸಬೇಕು ಎಂದು ಶಾ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ರಾಜ್ಯದಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದು ಭಾರತ ಹೇಳುತ್ತಿದೆ. ಆದರೆ ಅಲ್ಲಿನ ವಾಸ್ತವ ಸ್ಥಿತಿಯೇ ಬೇರೆ ಇದೆ ಎಂದು ಶಾ ಖುರೇಷಿ ಆರೋಪಿಸಿದ್ದಾರೆ ಎಂದು ವರದಿ ತಿಳಿಸಿದೆ.
ಆದರೆ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಆರೋಪಕ್ಕೆ ತಕ್ಕ ಉತ್ತರ ನೀಡಲು ಭಾರತ ಸಿದ್ಧತೆ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಜಮ್ಮು-ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂಬ ನಿಲುವಿನ ಬಗ್ಗೆ ಈಗಾಗಲೇ ಅಂತಾರಾಷ್ಟ್ರೀಯ ಸಮುದಾಯಕ್ಕೆ ಸೇರಿದ ದೇಶಗಳು ಕೂಡಾ ಬೆಂಬಲ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.