Advertisement

ಅವೈಜ್ಞಾನಿಕ ಸಮುದ್ರ ತಡೆಗೋಡೆ : ಕಡಲ್ಕೊರೆತ ಭೀತಿ

07:58 PM May 18, 2019 | Team Udayavani |

ಕಾಸರಗೋಡು: ಪ್ರತೀ ವರ್ಷದಂತೆ ಈ ವರ್ಷವೂ ಕಾಸರಗೋಡು ಜಿಲ್ಲೆಯ ವಿವಿಧೆಡೆ ಕಡಲ್ಕೊರೆತ ಭೀತಿ ಆವರಿಸಿದೆ. ಸಮುದ್ರ ತಡೆಗೋಡೆ ನಿಮಾರ್ಣದಲ್ಲಿನ ಅವೈಜ್ಞಾನಿಕತೆಯಿಂದ ಈ ಬಾರಿಯೂ ತಡೆಗೋಡೆ ಸಮುದ್ರ ಪಾಲಾಗಲಿದೆ ಎಂದು ಸಮುದ್ರ ಕಿನಾರೆಯಲ್ಲಿ ವಾಸ್ತವ್ಯ ಹೂಡಿರುವ ಮತ್ತು ಭಯದಲ್ಲಿ ತತ್ತರಿಸಿರುವ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ಕಾಸರಗೋಡು ಜಿಲ್ಲೆಯ ಕಸಬ ಕಡಪ್ಪುರ, ಚೇರಂಗೈ ಕಡಪುರ, ಲೈಟ್‌ಹೌಸ್‌, ಅಜಾನೂರು, ಕಾಂಞಂಗಾಡ್‌, ಕೀಯೂರು, ಶಾರದಾನಗರ, ಮೊಗ್ರಾಲ್‌ಪುತ್ತೂರು, ಮುಸೋಡಿ ಹನುಮಾನ್‌ ನಗರ ಮೊದಲಾದೆಡೆಗಳಲ್ಲಿ ಈ ವರ್ಷವೂ ಕಡಲ್ಕೊರೆತ ಸಾಧ್ಯತೆಯಿದೆ.

ಜಿಲ್ಲೆಯ ವಿವಿಧೆಡೆ ಕಡಲ್ಕೊರೆತ ತಡೆಯಲು ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ತಡೆಗೋಡೆ ಈಗಾಗಲೇ ಸಮುದ್ರ ಪಾಲಾಗಿದೆ. ಇನ್ನು ಹಲವೆಡೆ ತಡೆಗೋಡೆ ಸಮುದ್ರ ಪಾಲಾಗುವ ಹಂತದಲ್ಲಿದೆ. ಸಮುದ್ರ ಕಿನಾರೆಯಲ್ಲಿ ಈಗಾಗಲೇ ಹಲವು ಮನೆಗಳು ಕಡಲ್ಕೊರೆತದಿಂದ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಹಂತದಲ್ಲಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ.

ಕಡಲ್ಕೊರೆತ ತಡೆಯಲು ಪ್ರತೀ ವರ್ಷವೂ ಭಾರೀ ಪ್ರಮಾಣದಲ್ಲಿ ಹಣವನ್ನು ವ್ಯಯಿಸಲಾಗುತ್ತಿದೆ. ಆದರೆ ಪ್ರತೀ ವರ್ಷವೂ ಮಳೆಗಾಲದಲ್ಲಿ ಸಮುದ್ರ ತಡೆಗೋಡೆ ಕೊಚ್ಚಿ ಹೋಗುತ್ತಿದೆ. ಇದಕ್ಕೆಲ್ಲ ಕಾರಣ ಅವೈಜ್ಞಾನಿಕ ರೀತಿಯಲ್ಲಿ ತಡೆ ಗೋಡೆ ನಿರ್ಮಾಣ ಮಾಡಿದ್ದು ಕಾರಣವೆಂದು ಸ್ಥಳೀಯರು ಆರೋಪಿಸುತ್ತಲೇ ಬಂದಿದ್ದಾರೆ. ಹೀಗಿರುವ ಸಂದರ್ಭದಲ್ಲಿ ತಡೆಗೋಡೆ ನಿರ್ಮಾಣದಲ್ಲಿನ ಲೋಪದೋಷಗಳನ್ನು ಪರಿಹರಿಸಲು ಸಂಬಂಧಪಟ್ಟವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದೇ ದೊಡ್ಡ ದುರಂತ.

ಕಾಸರಗೋಡು ನಗರಸಭಾ ವ್ಯಾಪ್ತಿಯ ಕಸಬಾ ಸಮುದ್ರ ತೀರದಲ್ಲಿ ಈ ಬಾರಿಯೂ ತೀವ್ರ ಕಡಲ್ಕೊರೆತ ಸಾಧ್ಯತೆಯಿದೆ. ಇದರಿಂದಾಗಿ ಅಪಾರ ನಾಶ ನಷ್ಟ ಸಂಭವಿಸುವ ಸಾಧ್ಯತೆಯೂ ಇದೆ. ಈ ಪ್ರದೇಶದಲ್ಲಿ ಸುಮಾರು 25ರಿಂದ 30 ಮನೆಗಳು ಅಪಾಯದ ಭೀತಿಯಲ್ಲಿದೆ. ಮೂರು ತಾಲೂಕುಗಳಲ್ಲಿ ಕಡಲಬ್ಬರ : ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕಾಸರಗೋಡು ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಕಡಲ್ಕೊರೆತ ಸಾಮಾನ್ಯವಾಗಿದೆ. ಈ ಪ್ರದೇಶಗಳ ಕರಾವಳಿ ಭಾಗಗಳಲ್ಲಿನ ಅಪಾಯದ ಸ್ಥಿತಿಯಲ್ಲಿರುವ ಮೀನು ಕಾರ್ಮಿಕರ ಕುಟುಂಬಗಳನ್ನು ಕಡಲ್ಕೊರೆತ ತೀವ್ರಗೊಳ್ಳುವ ಮೊದಲೇ ಬೇರೆಡೆಗೆ ಸ್ಥಳಾಂತರಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕಾಗಿದೆ.

Advertisement

ಮಂಗಲ್ಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶಾರದಾ ನಗರ, ಮುಸೋಡಿ ಹನುಮಾನ್‌ ನಗರದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕಡಲ್ಕೊರೆತದ ಭೀತಿ ಆವರಿಸಿದೆ. ಹತ್ತಿರದ ಶಿವಾಜಿ ನಗರ, ಮಣಿಮುಂಡ ಮೊದಲಾದ ಪ್ರದೇಶಗಳಲ್ಲೂ ಕಡಲ್ಕೊರೆತದ ಭೀತಿಯಿದೆ.

ಕಳೆದ ಕೆಲವು ವರ್ಷಗಳಿಂದ ಕಸಬಾ ಲೈಟ್‌ಹೌಸ್‌ ಪರಿಸರದಿಂದ ಮೊಗ್ರಾಲ್‌ ತನಕ ಹಾಗೂ ಚೇರಂಗೈ ಪ್ರದೇಶಗಳಲ್ಲಿ ಕಡಲ್ಕೊರೆತವು ಆತಂಕ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

ಕಸಬಾ ಭಾಗದಲ್ಲಿ ಹಲವಾರು ಮನೆಗಳು ತೀವ್ರ ಅಪಾಯವನ್ನು ಎದುರಿಸುತ್ತಿವೆ. ಇವುಗಳು ಯಾವುದೇ ಸಂದರ್ಭದಲ್ಲೂ ಸಮುದ್ರ ಪಾಲಾಗುವ ಭಯವಿದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಇದಕ್ಕಾಗಿ ಕೇರಳ ಸರಕಾರವು ಇನ್ನಾದರೂ ಶಾಶ್ವತ ತಡೆಗೋಡೆ ನಿರ್ಮಿಸಬೇಕು. ಕಡಲ್ಕೊರೆತ ಉಂಟಾದಾಗ ಮಾತ್ರ ಎಚ್ಚೆತ್ತುಕೊಳ್ಳುವ ಬದಲು ಮೀನು ಕಾರ್ಮಿಕರ ಕುಟುಂಬಗಳ ಸಂರಕ್ಷಣೆಗೆ ರಾಜ್ಯ ಸರಕಾರವು ವ್ಯವಸ್ಥಿತ ಯೋಜನೆಯೊಂದನ್ನು ಜಾರಿಗೊಳಿಸಬೇಕು ಎಂದು ಕರಾವಳಿ ಪ್ರದೇಶದ ನಿವಾಸಿಗಳು ಆಗ್ರಹಿಸಿದ್ದಾರೆ.

ಪ್ರತೀ ವರ್ಷವೂ….
ಚೇರಂಗೈ ಕಡಪ್ಪುರದಲ್ಲಿ ಸುಮಾರು 100ರಷ್ಟು ಮೀನು ಕಾರ್ಮಿಕರ ಕುಟುಂಬಗಳು ಹಲವು ವರ್ಷಗಳಿಂದ ತೀವ್ರ ಆತಂಕ ಎದುರಿಸುತ್ತಿವೆ. ಚೆರಂಗೈ ಪ್ರದೇಶದಲ್ಲಿ ಪ್ರತೀ ವರ್ಷವೂ ಮಳೆಗಾಲದಲ್ಲಿ ಕಡಲಬ್ಬರ ಹೆಚ್ಚು. ಕೆಲವು ಮನೆಗಳು ಧರಾಶಾಹಿಯಾಗುವ ಹಂತದಲ್ಲಿವೆ. ಮಾತ್ರವಲ್ಲದೆ ಈ ಭಾಗದಲ್ಲಿ ವರ್ಷಗಳ ಹಿಂದೆಯೇ ಸುಮಾರು 250 ಮೀಟರ್‌ನಷ್ಟು ಭೂ ಪ್ರದೇಶವು ಸಮುದ್ರ ಪಾಲಾಗಿದೆ. ಇಲ್ಲಿನ ನಿವಾಸಿಗಳು ರಾತ್ರಿ ಹೊತ್ತಿನಲ್ಲಿ ನಿದ್ರಿಸದೆ ಆತಂಕದಿಂದಲೇ ದಿನಗಳನ್ನು ಕಳೆಯ ಬೇಕಾದ ಸ್ಥಿತಿಯ ಕೆಲವೊಮ್ಮೆ ಎದುರಾಗುತ್ತಿದೆ.

ಮನೆಗಳ ಭದ್ರತೆಗೆ ಮರಳು ಚೀಲ : ಮನೆಗಳು ಕಡಲ್ಕೊರೆತಕ್ಕೆ ಆಹುತಿಯಾಗುತ್ತಿರುವುದನ್ನು ಮನಗಂಡು ಕರಾವಳಿಯ ಅನೇಕ ಕುಟುಂಬ ಸದಸ್ಯರು ಮರಳು ತುಂಬಿಸಿದ ಗೋಣಿಚೀಲಗಳನ್ನು ತಾತ್ಕಾಲಿಕ ತಡೆಗೋಡೆಯಾಗಿ ನಿರ್ಮಿಸುತ್ತಿದ್ದಾರೆ. ಆದರೆ ಇದೂ ಕೂಡ ತೀವ್ರ ಕಡಲ್ಕೊರೆತಕ್ಕೆ ಆಹುತಿಯಾಗಿ ಸಮುದ್ರ ಸೇರುತ್ತಿದೆ. ಕಳೆದ ವರ್ಷ ಕಸಬಾ ಕಡಪ್ಪುರ ಭಾಗದ ಸುಮಾರು 3 ರಿಂದ 4 ಕಿಲೋ ಮೀಟರ್‌ನಷ್ಟು ಶಾಶ್ವತ ತಡೆಗೋಡೆಯೇ ಕಡಲಬ್ಬರಕ್ಕೆ ಕುಸಿದುಬಿದ್ದಿದೆ. ಈ ಪ್ರದೇಶದಲ್ಲಿ 300ರಿಂದ 500 ಮೀಟರ್‌ನಷ್ಟು ಭೂ ಭಾಗವು ಸಮುದ್ರ ಪಾಲಾಗುತ್ತಿರುವುದು ಸಾಮಾನ್ಯ.

Advertisement

Udayavani is now on Telegram. Click here to join our channel and stay updated with the latest news.

Next