Advertisement

ಕೋಡಿ ಅಳಿವೆ ರಸ್ತೆ ಕಾಮಗಾರಿ ತ್ವರಿತಕ್ಕೆ ಆಗ್ರಹ

01:42 AM Mar 06, 2020 | Sriram |

ಕುಂದಾಪುರ: ಕೋಡಿಯಲ್ಲಿ ನಡೆಯುತ್ತಿರುವ ಡಾಮರು ಕಾಮಗಾರಿ ಕುರಿತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯ ಗುಣಮಟ್ಟದ ಕಡೆಗೆ ಒಂದು ಕಡೆಯಾದರೆ ವಿಳಂಬಗತಿಯ ಕುರಿತು ಇನ್ನೊಂದೆಡೆ ಅಸಮಾಧಾನವಿದೆ.

Advertisement

ಡಾಮರು
ಕೋಡಿಯಲ್ಲಿ ಲೈಟ್‌ಹೌಸ್‌ ಪಕ್ಕದಿಂದ ಹಾದು ಸೀವಾಕ್‌ ಸಮೀಪದವರೆಗೂ 1.5 ಕೋ.ರೂ. ವೆಚ್ಚದಲ್ಲಿ ಡಾಮರುಗೊಳ್ಳುತ್ತಿದೆ. ಈ ರಸ್ತೆ ತೀರಾ ಹದಗೆಟ್ಟಿದ್ದು ಸ್ಥಳೀಯರ ಬೇಡಿಕೆ ಮೇರೆಗೆ ಶಾಸಕರ ಸೂಚನೆಯಂತೆ ಪುರಸಭೆ ಈ ಕಾಮಗಾರಿ ನಡೆಸುತ್ತಿದೆ.

ಅಭಿವೃದ್ಧಿ
ಅತಿ ಉದ್ದ ವ್ಯಾಪ್ತಿ ಹೊಂದಿದ ಬೀಚ್‌ ಎಂಬ ಹೆಗ್ಗಳಿಕೆಗೆ ಕೋಡಿ ಬೀಚ್‌ ಪಾತ್ರವಾಗಲಿದೆ. ಏಕೆಂದರೆ ಸರಿಸುಮಾರು 3.5 ಕಿ.ಮೀ. ದೂರದಲ್ಲಿ ಬೀಚ್‌ ವ್ಯಾಪಿಸಿಕೊಂಡಿದೆ.
ಆದ್ದರಿಂದ ಯಾವುದೇ ಪ್ರದೇಶದಲ್ಲೂ ಸಮುದ್ರ ವಿಹಾರ ನಡೆಸಬಹುದಾಗಿದೆ. ಇದರೊಂದಿಗೆ ಇಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ ನಡೆದಂತೆಯೇ ಇಲ್ಲಿಗೆ ಸಂಜೆ ವೇಳೆಗೆ ಸೂರ್ಯಾಸ್ತ ವೀಕ್ಷಣೆಗೆ ಜನ ಬರಲಾರಂಭಿಸಿದ್ದಾರೆ. ವಾರಾಂತ್ಯವೂ ಇಲ್ಲಿ ಜನಸಂದಣಿ ಹೆಚ್ಚಿದೆ. ಸಂಸಾರ ಸಹಿತರಾಗಿ, ಮಕ್ಕಳು ಸ್ನೇಹಿತರ ಜತೆಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ನಿಧಾನ
ಕಾಮಗಾರಿಯ ವೇಗದ ಕುರಿತು ಇಲ್ಲಿನ ಜನರಲ್ಲಿ ಅಸಮಾಧಾನವಿದೆ. ಒಂದು ತಿಂಗಳಿನಿಂದ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ. ವಾಹನಗಳ ಓಡಾಟಕ್ಕೂ ಕಷ್ಟ , ಜತೆಗೆ ಈ ಪ್ರದೇಶವೆಲ್ಲಾ ಧೂಳುಮಯ. ಆಸುಪಾಸಿನ ಮನೆಯವರಿಗೆ ಕಷ್ಟವಾಗುತ್ತಿದೆ ಎಂದು ಊರವರುತಿಳಿಸಿದ್ದಾರೆ. ಆದ್ದರಿಂದ ತುರ್ತಾಗಿ ಕಾಮಗಾರಿ ಮುಗಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಆಗಿರುವ ಡಾಮರು ಕಾಮಗಾರಿಯ ಗುಣ ಮಟ್ಟದ ಕುರಿತಾಗಿಯೂ ಅಸಮಾಧಾನ ಹೊರಹಾಕುವವರು ಇದ್ದಾರೆ. ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣವಾಗಿದ್ದು ಇನ್ನುಳಿಕೆ ಪ್ರದೇಶಕ್ಕೆ ಜಲ್ಲಿ ಹಾಕಲಾಗಿದೆ. ಲೈಟ್‌ಹೌಸ್‌ ಬದಿ ಕಾಮಗಾರಿ ಪ್ರಗತಿಯಲ್ಲಿದೆ. ಈಗ ವಾಹನಗಳ ಓಡಾಟ ಕಷ್ಟದಲ್ಲಿ ನಡೆಯುತ್ತಿದೆ. ಕಾಮಗಾರಿ ಪೂರ್ಣವಾದ ಬಳಿಕ ಸುವ್ಯವಸ್ಥಿತ ರಸ್ತೆ ಉಪಯೋಗಕ್ಕೆ ದೊರೆಯಲಿದೆ.

ಹೂತುಹೋಗುವ ಆತಂಕ
ಲೈಟ್‌ಹೌಸ್‌ ಎದುರು ವಾಹನ ನಿಲ್ಲಿಸಲು ಸ್ಥಳಾವಕಾಶ ಒದಗಿಸಬೇಕೆಂದು ಬೇಡಿಕೆ ಯಿದೆ. ಇಲ್ಲಿ ಈಗಾಗಲೇ ಅನೇಕ ಪ್ರವಾಸಿ ವಾಹನಗಳು ಮಣ್ಣು, ಮರಳಿನಲ್ಲಿ ಹೂತು ಹೋಗುತ್ತಿದೆ. ಆದ್ದ ರಿಂದ ಇದಕ್ಕೊಂದು ಸುಸಜ್ಜಿತ ಪಾರ್ಕಿಂಗ್‌ಗೆ ಅನುವು ಮಾಡಿ ಕೊಡ ಬೇಕೆಂಬ ಬೇಡಿಕೆ ಇದೆ.

Advertisement

ಸುದಿನ ವರದಿ
ಉದಯವಾಣಿ ಸುದಿನ ಇಲ್ಲಿ ಕಾಮಗಾರಿಗೆ ಬೇಡಿಕೆ ಹಾಗೂ ಅನುದಾನ ಮಂಜೂರಾದ ಕುರಿತು ವರದಿ ಪ್ರಕಟಿಸಿತ್ತು. ಇದೀಗ ಕಾಮಗಾರಿ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಜನೋಪಯೋಗಕ್ಕೆ ದೊರೆಯಲಿದೆ.

ಕೋಡಿ ಬೀಚ್‌ಗೆ, ಸೀವಾಕ್‌ ಕಡೆಗೆ,
ಲೈಟ್‌ಹೌಸ್‌ ಕಡೆಗೆ ಬರುವ ರಸ್ತೆ ಹಾಳಾಗಿತ್ತು. ಅಳಿವೆ ಕಾಮಗಾರಿಯಿಂದ ಹಾಳಾಗಿದೆ ಎನ್ನಲಾಗುತ್ತಿದೆ. ಆದರೆ ಎರಡು ಮೂರು ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಇದ್ದಂತಿದೆ. ಈ ಹಿನ್ನೆಲೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪುರಸಭೆಗೆ ಸೂಚನೆ ನೀಡಿ ದುರಸ್ತಿಗೆ ಹೇಳಿದ್ದರು. ಅದರಂತೆ ಕುಡಿಯುವ ನೀರಿನ ಕಾಮಗಾರಿಯಲ್ಲಿ ಹಾಳಾದ ರಸ್ತೆ ದುರಸ್ತಿಗೆ ಇರುವ ಅನುದಾನ ಬಳಸಿ ರಸ್ತೆ ಸರಿಪಡಿಸಲು ಪುರಸಭೆ ಆಡಳಿತ ಮುಂದಾಗಿದ್ದು ಕಾಮಗಾರಿ ನಡೆಯುತ್ತಿದೆ.

ಶೀಘ್ರ ಮುಕ್ತಾಯ
ಅನುಮತಿ ದೊರೆಯುವುದು ವಿಳಂಬವಾದ ಕಾರಣ ಕಾಮಗಾರಿ ನಿಧಾನವಾಗಿದೆ. ಈಗ ಕಾಮಗಾರಿಗೆ ಅನುಮತಿ ದೊರೆತಿದ್ದು ಶೀಘ್ರದಲ್ಲಿ ಮುಗಿಸಲಾಗುತ್ತಿದೆ. ಕುಡಿಯುವ ನೀರಿನ ಕಾಮಗಾರಿಯ ಅನುದಾನ ಬಳಸಿಕೊಂಡು ಕಾಮಗಾರಿ ಮಾಡಲಾಗುತ್ತಿದೆ.
-ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next