Advertisement

ಲೋಕ ಉಪ ಚುನಾವಣೆಗೆ ಬಹಿರಂಗ ಅಸಮಾಧಾನ

06:00 AM Oct 08, 2018 | Team Udayavani |

ಬೆಂಗಳೂರು: ನಾಲ್ಕು ತಿಂಗಳ ಅವಧಿ ಉಳಿದಿರುವ ಮೂರೂ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿರುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿವೆ.

Advertisement

ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಅಗತ್ಯವಿತ್ತಾ? ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಚರ್ಚೆಯಾಗುತ್ತಿದ್ದು, ಸ್ವತಃ ನಾಯಕರೇ ಟ್ವಿಟರ್‌ನಲ್ಲಿ ಅಭಿಪ್ರಾಯ ಟ್ವೀಟಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ ಬಿ.ಎಸ್‌.ಯಡಿಯೂರಪ್ಪ ಅವರು, ಮೂರೂ ಪಕ್ಷಗಳಿಗೆ ಚುನಾವಣೆ ಅಗತ್ಯವಿರಲಿಲ್ಲ. ಆದರೆ, ಆಯೋಗ ಯಾಕೆ ಘೋಷಣೆ ಮಾಡಿತೋ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಮಾಜಿ ಸಚಿವ, ಬಿಜೆಪಿಯ ಸುರೇಶ್‌ಕುಮಾರ್‌, ನವೆಂಬರ್‌ 6 ರಂದು ಮತ ಎಣಿಕೆಯಲ್ಲಿ ಆಯ್ಕೆಯಾಗುವ ಕರ್ನಾಟಕದ ಮೂರು ಲೋಕಸಭೆ ಸದಸ್ಯರ ಅವಧಿ ಎಷ್ಟಿರುತ್ತದೆ ? ಗರಿಷ್ಠ 4 ತಿಂಗಳು. ಉಪ ಚುನಾವಣೆ ಅಗತ್ಯವಿತ್ತೇ? ಎಂದು ಬಹಿರಂಗವಾಗಿ ಟ್ವೀಟ್‌ ಮಾಡಿದ್ದಾರೆ. ನಾಲ್ಕು ತಿಂಗಳ ಅವಧಿಯ ಲೋಕಸಭೆಗೆ ಉಪ ಚುನಾವಣೆ ಘೋಷಣೆ ಮಾಡಿರುವ ಚುನಾವಣಾ ಆಯೋಗದ ತಲೆಯಲ್ಲಿ ಸಾಮಾನ್ಯ ಜ್ಞಾನವೇ ಇಲ್ಲವಾ? ಎಂದು ಬಿಜೆಪಿ ಸಹ ವಕ್ತಾರ ಪ್ರಕಾಶ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಸಹ ಲೋಕಸಭೆಯ ಮೂರು ಕ್ಷೇತ್ರಗಳಿಗೆ  ಉಪ ಚುನಾವಣಗೆ ಔಚಿತ್ಯ ಪ್ರಶ್ನಿಸಿದ್ದಾರೆ. ಹೀಗೆ, ರಾಜಕೀಯ ಪಕ್ಷಗಳ ನಾಯಕರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುತ್ತಿವೆ. ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಹಿಂದೇಟು: ಈ ಮಧ್ಯೆ, ನಾಲ್ಕು ತಿಂಗಳ ಅವಧಿಗೆ ಸ್ಪರ್ಧೆ ಮಾಡಲು ಅಕಾಂಕ್ಷಿಗಳು ಹಿಂದೇಟು ಹಾಕುತ್ತಿದ್ದು, ಚುನಾವಣಾ ವೆಚ್ಚದ ಆತಂಕದಿಂದ ನಮಗೆ ಟಿಕೆಟ್‌ ಬೇಡ ಎಂದು ನಾಯಕರಿಗೆ ಹೇಳುತ್ತಿದ್ದಾರೆ.

Advertisement

ನಾಲ್ಕು ತಿಂಗಳ ಅವಧಿಗೆ ಹಣ ವೆಚ್ಚ ಮಾಡುವ ಬದಲು 2019ರ ಚುನಾವಣೆಗೆ ಸ್ಪರ್ಧೆ ಮಾಡುವುದು ಸೂಕ್ತ. ಒಂದೊಮ್ಮೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ದೊರೆಯುವ ಖಾತರಿಯೂ  ಇಲ್ಲ. ಸೋತರಂತೂ ಟಿಕೆಟ್‌ ಸಿಗುವುದು ಅನುಮಾನ. ಹೀಗಿರುವಾಗ ಅನಗತ್ಯ “ರಿಸ್ಕ್’ ತೆಗೆದುಕೊಳ್ಳುವುದು ಬೇಡ ಎಂಬುದು ಆಕಾಂಕ್ಷಿಗಳ ಅಭಿಪ್ರಾಯ. ಹೀಗಾಗಿ, ಪಕ್ಷಗಳ  ವತಿಯಿಂದಲೇ ಚುನಾವಣೆ ವೆಚ್ಚ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಅಗ್ನಿಪರೀಕ್ಷೆ, ಬಿಜೆಪಿಗೆ ಪ್ರತಿಷ್ಠೆಯಾಗಿರುವುದರಿಂದ ಇಷ್ಟವಿಲ್ಲದಿದ್ದರೂ ಅಭ್ಯರ್ಥಿಗಳನ್ನು ಹುಡುಕಿ ನಿಲ್ಲಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅ.16 ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿರುವುದರಿಂದ ಪಿತೃ ಪಕ್ಷ ಕಳೆಯುತ್ತಿದ್ದಂತೆ ಬುಧವಾರ ಅಥವಾ ಗುರುವಾರ ಅಭ್ಯರ್ಥಿಗಳ ಘೋಷಣೆಯಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next