ಕೋಲಾರ: ಕೇಂದ್ರ ಬಜೆಟ್‌ನಲ್ಲಿ ಕೋಲಾರದಂತ ಕಡೆಗಣಿಸಲ್ಪಟ್ಟ ಜಿಲ್ಲೆಗಳಿಗೆ ಏನು ಸಿಗುತ್ತದೆ ಎಂದು ಹುಡುಕುವುದೇ ವ್ಯರ್ಥ ಎನ್ನುವುದನ್ನು ಎನ್‌ಡಿಎ ಎರಡನೇ ಅವಧಿಯ ಮೊದಲ ಬಜೆಟ್ ಸಾಬೀತು ಪಡಿಸಿದೆ.
ಪ್ರತಿ ಬಾರಿ ಬಜೆಟ್ ಮಂಡನೆ ವೇಳೆ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ, ಬಜೆಟ್ ಮಂಡನೆಯಾದ ನಂತರ ಏನು ಸಿಕ್ಕಿತು ಎಂದು ಹುಡುಕುವುದಕ್ಕಿಂತಲೂ ಸಿಕ್ಕಿದ್ದರಲ್ಲಿ ಜಿಲ್ಲೆಗೆ ಏನು ಪಾಲು ಸಿಗಬಹುದು ಎಂಬುದನ್ನು ಹುಡುಕಾಡಬೇಕಿದೆ.
ಜಲಜೀವನ ಮಿಷನ್: ಕೋಲಾರದಂತ ಬರಪೀಡಿತ ಜಿಲ್ಲೆಗಳಿಗೆ ನದಿಜೋಡಣೆಯಿಂದ ಶಾಶ್ವತ ಪರಿಹಾರ ಸಿಗಬಹುದು ಎಂದು ಜನತೆ ನಿರೀಕ್ಷಿಸುತ್ತಿದ್ದರು. ಆದರೆ, ಬಜೆಟ್‌ನಲ್ಲಿ ಈ ಕುರಿತು ಚಕಾರವೆತ್ತಿಲ್ಲ. ಎರಡನೇ ಬಾರಿ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ನದಿಗಳ ಜೋಡಣೆ ಕುರಿತು ಮಾತನಾಡಿದ್ದು, ಜಿಲ್ಲೆಯ ಜನರಲ್ಲಿ ಆಸೆ ಮೊಳಕೆಯೊಡೆಯುವಂತೆ ಮಾಡಿತ್ತು. ಆದರೆ, ಬಜೆಟ್‌ನಲ್ಲಿ ಈ ಕುರಿತು ಯಾವುದೇ ಪ್ರಸ್ತಾಪ ಮಾಡದಿರುವುದರಿಂದ ಜಿಲ್ಲೆಯ ಜನರು ನಿರಾಸೆ ಅನುಭವಿಸಿದ್ದಾರೆ.
ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮಂಡಿಸಿರುವ ಜಲಜೀವನ್ ಮಿಷನ್, ಮಳೆ ನೀರು ಕೊಯ್ಲು ಮಾಡಲು ಇರುವ ಯೋಜನೆಯಾಗಿದೆ.
Advertisement
ಕೇಂದ್ರ, ರಾಜ್ಯ ಸರ್ಕಾರವಾಗಲಿ ಹಿಂದುಳಿದ ಜಿಲ್ಲೆಗಳನ್ನು ತಮ್ಮ ಬಜೆಟ್‌ನಲ್ಲಿ ಕಡೆಗಣಿಸುವುದು, ಹಿಂದಿನ ಹಲವು ಬಜೆಟ್‌ಗಳಲ್ಲಿ ನೋಡಬಹುದು. ಇದೇ ಪರಂಪರೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಬಜೆಟ್ ಮುಂದುವರಿಸಿರುವುದು ದೃಢಪಟ್ಟಿದೆ.
Related Articles
Advertisement
ಜಿಲ್ಲೆಯಲ್ಲಿ ಈಗಾಗಲೇ ಅಂತರ್ಜಲ ಆಪಾಯಕಾರಿ ಮಟ್ಟ ಮೀರಿದೆ. ಜಿಲ್ಲೆಯಲ್ಲಿ 1500 ಅಡಿಗಳಿಗಿಂತಲೂ ಹೆಚ್ಚು ಆಳಕ್ಕೆ ಅಂತರ್ಜಲವು ಇಳಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್‌ನಿಂದ ಜಿಲ್ಲೆಗೆ ಅನುಕೂಲವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಹರ ಘರ್ ಜಲ್: ಪ್ರತಿ ಬಿಂದಿಗೆ ಶುದ್ಧ ಕುಡಿಯುವ ನೀರನ್ನು ಹತ್ತರಿಂದ ಹದಿನೈದು ರೂ. ಕೊಟ್ಟು ಖರೀದಿಸುತ್ತಿರುವ ಪರಿಸ್ಥಿತಿ ಸದ್ಯಕ್ಕೆ ಜಿಲ್ಲೆಯಲ್ಲಿದೆ. ಇಂತದ್ದರಲ್ಲಿ ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಹರ ಘರ್ ಜಲ್ ಯೋಜನೆಯನ್ನು ಘೋಷಿಸಿರುವುದು ಜಿಲ್ಲೆಗೆ ಸ್ವಾಗತಾರ್ಹ ಯೋಜನೆಯಾಗಿದೆ. ಹರ್ ಘರ್ ಜಲ್ ಯೋಜನೆಯಡಿ ಹೇಗೆ ಶುದ್ಧ ಕುಡಿಯುವ ನೀರನ್ನು ನೀಡುತ್ತದೆಯೆಂದು ಹೇಳಿಲ್ಲವಾದರೂ, ಹೇಗಾದರೂ ಸರಿ ಜಿಲ್ಲೆಯ ಮನೆ ಮನೆಗೂ ಶುದ್ಧ ಕುಡಿಯುವ ನೀರು ತಲುಪಲಿ ಎಂಬ ಆಶಯ ಜಿಲ್ಲೆ ಜನರದ್ದಾಗಿದೆ.
ಪಶು ಸಂಗೋಪನೆ: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮೀನುಗಾರಿಕೆ ಹಾಗೂ ಪಶು ಸಂಗೋಪನೆಗಾಗಿ 3737 ಕೋಟಿ ರೂ. ಅನ್ನು ನಿಗದಿಪಡಿಸಲಾಗಿದೆ. ಪಶು ಸಂಗೋಪನೆಯಿಂದಲೇ ಜಿಲ್ಲೆಯ ರೈತರು ನೆಮ್ಮದಿಯ ಜೀವನ ಸಾಗಿಸುತ್ತಿರುವುದರಿಂದ ಈ ಅನುದಾನದಲ್ಲಿಯೂ ವಿಶೇಷ ಯೋಜನೆಗಳು ಕೋಲಾರಕ್ಕೆ ಸಿಗಲಿ ಎಂದು ನಿರೀಕ್ಷಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಪ್ರತಿ ನಿತ್ಯವೂ 10 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದೀಗ ಕೋಲಾರ ಜಿಲ್ಲೆಯ 126 ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆಯಡಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಮೀನುಗಾರಿಕೆಯೂ ಚುರುಕುಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಬಜೆಟ್ ಅನುದಾನವು ಜಿಲ್ಲೆಗೆ ಸಹಕಾರಿಯಾಗಲಿ ಎನ್ನಲಾಗುತ್ತಿದೆ.
ಕೃಷಿ ವಲಯ: ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯದ ಅಭಿವೃದ್ಧಿಗೆ 1.38 ಲಕ್ಷ ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಕೃಷಿ, ತೋಟಗಾರಿಕೆಯನ್ನೇ ಅವಲಂಬಿಸಿರುವ ಜಿಲ್ಲೆಗೆ ಈ ಅನುದಾನದ ಯೋಜನೆಗಳ ಪಾಲು ಸಿಕ್ಕರೆ ರೈತಾಪಿ ವರ್ಗಕ್ಕೆ ಅನುಕೂಲವಾಗುತ್ತದೆ.
ಡಯಾಲಿಸಿಸ್ ದರ ಕಡಿತ: ಡಯಾಲಿಸಿಸ್ ಮತ್ತು ಶಸ್ತ್ರಚಿಕಿತ್ಸೆ ಸಲಕರಣೆಗಳ ದರ ಕಡಿತ ಮಾಡಿರುವುದರಿಂದ ಇದರ ಪ್ರತಿಫಲ ಡಯಾಲಿಸಿಸ್ ಮತ್ತು ಶಸ್ತ್ರಚಿಕಿತ್ಸೆ ದರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ವಿಷಪೂರಿತ ಲವಣಾಂಶಗಳುಳ್ಳ 1500 ಅಡಿಗಳಿಗಿಂತಲೂ ಆಳವಾದ ಕೊಳವೆ ಬಾವಿಯ ನೀರನ್ನು ಜನರು ಅನಿವಾರ್ಯವಾಗಿ ಕುಡಿಯುತ್ತಿರುವುದರಿಂದ ಜನರಲ್ಲಿ ಮೂಳೆ ಸವೆತ, ಕಿಡ್ನಿ ವೈಫಲ್ಯಸಾಮಾನ್ಯವಾಗಿದೆ. ಇದರಿಂದ ಕೇಂದ್ರ ಸರ್ಕಾರವು ಈ ಚಿಕಿತ್ಸಾ ವೆಚ್ಚಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ದರ ಕಡಿಮೆ ಮಾಡಿರುವುದು ಜಿಲ್ಲೆಯ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸಹಕಾರಿಯಾಗಲಿದೆ.
ವಸತಿ ನಗರಾಭಿವೃದ್ಧಿ: ಕೇಂದ್ರ ಬಜೆಟ್‌ನಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಹೆಚ್ಚು ಆದ್ಯತೆ ನೀಡಲಾಗಿದೆ. 48,032 ಲಕ್ಷ ರೂ. ಅನುದಾನ ನೀಡಲಾಗಿದೆ. ಇಂದಿಗೂ ಜಿಲ್ಲೆಯಲ್ಲಿ ವಸತಿ ರಹಿತ ಸಾವಿರಾರು ಕುಟುಂಬಗಳಿವೆ. ನಿವೇಶನಗಳನ್ನು ನೀಡಲಾಗದಂತ ಪರಿಸ್ಥಿತಿಯಲ್ಲಿ ಸ್ಥಳೀಯ ಸಂಸ್ಥೆಗಳಿವೆ. ಈ ಯೋಜನೆ ಯಡಿ ಜಿಲ್ಲೆಯ ವಸತಿ ಹೀನರಿಗೆ ಸೌಲ ಭ್ಯ ಸಿಗುವಂತಾಗಲಿ ಎಂಬ ನಿರೀಕ್ಷೆ ಇದೆ.
ಬೆಲೆ ಏರಿಕೆ ಹೆಚ್ಚಳ ಸಾಧ್ಯತೆ: ಕೇಂದ್ರ ಬಜೆಟ್‌ನಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ ಸೆಸ್ ಹಾಕಿರುವುದರಿಂದ ಇದರ ನೇರ ಪರಿಣಾಮ ಅಗತ್ಯ ವಸ್ತುಗಳ ಮೇಲೆ ಬೀಳಲಿದೆ. ಇದರಿಂದ ಅಗತ್ಯ ವಸ್ತುಗಳ ಸಾಗಾಣಿಕಾ ವೆಚ್ಛ ಹೆಚ್ಚಳವಾಗಿ ಅವುಗಳ ಗ್ರಾಹಕ ದರವು ಹೆಚ್ಚಾಗಲಿದೆ. ಇದರಿಂದ ಅಗತ್ಯ ವಸ್ತುಗಳ ಖರೀದಿ ಜನಸಾಮಾನ್ಯರಿಗೆ ಹೊರೆಯಾಗಲಿದೆ.
ಇದೇ ರೀತಿಯಲ್ಲಿ ಬಂಗಾರದ ಮೇಲಿನಆಮದು ಸುಂಕವನ್ನು ಶೇ.10 ರಿಂದ ಶೇ.12.5 ಕ್ಕೇರಿಸಲಾಗಿದೆ. ಇದರಿಂದ ವಿದೇಶಗಳಿಗೆ ಹೋಗಿ ಮೈಮೇಲೆ ಕಡಿಮೆ ದರದಲ್ಲಿ ಬಂಗಾರ ಖರೀದಿಸಿ ಹಾಕಿಕೊಂಡು ಬರುವುದು ಕಡಿಮೆಯಾಗಲಿದೆ. ಆಮದು ಚಿನ್ನ ದಂತೆಯೇ ಆಮದು ರೇಷ್ಮೆ ಮೇಲೆ ಸುಂಕ ಹೆಚ್ಚಿಸಬೇಕೆಂಬ ಬೇಡಿಕೆಗೂ ಕೇಂದ್ರ ಬಜೆಟ್ ಸ್ಪಂದಿಸಿಲ್ಲ. ಇದರಿಂದ ಕೋಲಾರ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಸಂಕಷ್ಟ ನಿವಾರಣೆಯಾದಂತಾಗಿಲ್ಲ.
ಜನಧನದಲ್ಲಿ ಒಒಡಿ: ಈಗಾಗಲೇ ಶೂನ್ಯ ಬಂಡವಾಳ ಖಾತೆಗಳನ್ನು ದೇಶಾದ್ಯಂತ ತೆರೆಯಲಾಗಿದ್ದು, ಸದ್ಯಕ್ಕೆ ಈ ಖಾತೆಗಳ ಮೂಲಕವೇ ಸರ್ಕಾರದ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ಇದೀಗ ಮತ್ತೂಂದು ಹೆಜ್ಜೆ ಮುಂದಕ್ಕೆ ಹೋಗಿ ಜನಧನ ಖಾತೆಯಲ್ಲಿ 5 ಸಾವಿರ ರೂ. ಒಒಡಿ ನೀಡುತ್ತಿರುವುದು ಬಡ ಹಾಗೂ ಮಧ್ಯಮ ವರ್ಗದ ಅಗತ್ಯಗಳಿಗೆ ಅನುಕೂಲಕರವಾಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ನಾರಿ ಟು ನಾರಾಯಣಿ ಯೋಜನೆಯು ಗ್ರಾಮೀಣ ಮಹಿಳೆಯರ ಅಭಿ ವೃದ್ಧಿಗೆ ಸಹಕಾರಿಯಾಗಬಹುದು
ಕಾರ್ಮಿಕ ಪಿಂಚಣಿ: 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ತಲಾ 3 ಸಾವಿರ ರೂ. ಪಿಂಚಣಿ ನೀಡಲು ಕೇಂದ್ರ ಬಜೆಟ್ ಘೋಷಣೆ ಮಾಡಿದ್ದು, ಈ ಸೌಲಭ್ಯವೂ ಈಗಾಗಲೇ ಕೆಲಸ ಕಳೆದುಕೊಂಡು ಪರಿತಪಿಸುತ್ತಿರುವ ಕೆಜಿಎಫ್ ಚಿನ್ನದ ಗಣಿ ಕಾರ್ಮಿಕರಿಗೆ ಸಿಗುವಂತಾದರೆ ಜಿಲ್ಲೆಯ ಕಾರ್ಮಿಕ ಕುಟುಂಬಗಳಿಗೆ ನೆರವಾಗಲಿದೆ.
19 ವರ್ಷಗಳ ಹಿಂದೆ ಮುಚ್ಚಲ್ಪಟ್ಟ ಕೋಲಾರ ಚಿನ್ನದ ಗಣಿಗಳ ಕಾರ್ಮಿಕರಿಗೆ ಪುನಶ್ಚೇತನಗೊಳಿಸ ಬೇಕು. ಚಿನ್ನದ ಗಣಿಯನ್ನು ಪುನರಾರಂಭಗೊಳಿಸಬೇಕೆಂಬ ಬೇಡಿಕೆಗೆ ಕೇಂದ್ರ ಬಜೆಟ್ ಸ್ಪಂದಿಸಿಲ್ಲ. ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕ ಕುಟುಂಬಗಳಿಗೆ ಇಂದಿಗೂ ಸೌಲಭ್ಯಗಳು ಸಿಕ್ಕಿಲ್ಲ. ವಸತಿ ಭಾಗ್ಯ ಇಲ್ಲವಾಗಿದೆ. ಕೆಜಿಎಫ್ ಪ್ರದೇಶದಲ್ಲಿ ಕೈಗಾರಿಕಾ ಹಬ್ ಮಾಡಬೇಕೆಂಬ ಬೇಡಿಕೆಯೂ ಕೇಂದ್ರವನ್ನು ತಲುಪಿದಂತೆ ಕಾಣಿಸುತ್ತಿಲ್ಲ. ಇದು ಮತ್ತೂಮ್ಮೆ ಕಾರ್ಮಿಕ ವಲಯವನ್ನು ನಿರಾಸೆಗೆ ನೂಕಿದೆ.
ನಿರಾಶಾದಾಯಕ ಬಜೆಟ್: ಕೆಎಚ್ಎಂ:
ಕೋಲಾರ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜನಪರವಲ್ಲದ, ನಿರಾಶಾದಾಯಕ ಬಜೆಟ್ ಮಂಡಿಸಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಬಣ್ಣಿಸಿದ್ದಾರೆ. ರೈತರ ಸಾಲ ಮನ್ನಾ, ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ ಧನವಿಲ್ಲದ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವಿ ಲ್ಲದೇ, ಹೆಚ್ಚಿನ ಗಮನ ಹರಿಸಿರುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದ್ದರೂ ಅವರ ಶ್ರೇಯೋಭಿವೃದ್ಧಿಗೆ ಒತ್ತು ನೀಡಿಲ್ಲ. ಬೃಹತ್ ಕೈಗಾರಿಕಾ ಸಂಸ್ಥೆಗಳನ್ನು ಮುಚ್ಚಲು ಹಾಗೂ ಅವುಗಳನ್ನು ಮಾರಲು ಚಿಂತನೆ ಮಾಡಿರುವುದು, ಪ್ರಸಕ್ತ ಸರ್ಕಾರವು ದಿವಾಳಿ ಎದ್ದಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಅಲ್ಲದೇ, ಕೋಟ್ಯಂತರ ಉದ್ಯೋಗಿಗಳು ಬೀದಿ ಪಾಲಾಗುವಂತೆ ಮಾಡಿರುವ ಬಜೆಟ್ ಎಂದು ದೆಹಲಿಯಲ್ಲಿ ಬೀಡುಬಿಟ್ಟಿರುವ ಮುನಿಯಪ್ಪ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
● ಕೆ.ಎಸ್.ಗಣೇಶ್