ಅಯ್ಯೋ ಗಂಟೆ ಏಳಾಯ್ತು! ಇಷ್ಟೊತ್ತಾದ್ರೂ ಎಚ್ಚರವೇ ಆಗಿಲ್ಲಲ್ವಾ’ ಎನ್ನುತ್ತಾ ಎದ್ದು ಗಡಿಬಿಡಿಯಲ್ಲಿ ಎದ್ದು ಕಾಲೇಜಿಗೆ ರೆಡಿಯಾದೆ. ಅಂಗಳಕ್ಕಿಳಿದು ನಾಲ್ಕು ಹೆಜ್ಜೆ ಮುಂದಿಟ್ಟದ್ದೇ ತಡ ಕ್ಷಣಾರ್ಧದಲ್ಲಿ ಕತ್ತಲಾಗಿ “ಧೋ’ ಎಂದು ಜೋರಾಗಿ ಮಳೆ ಸುರಿಯಲಾರಂಭಿಸಿತು. ಇನ್ನು ತಡವಾದರೆ ಬಸ್ಸು ಸಿಗಲಿಕ್ಕಿಲ್ಲ ಎಂದು ಕೊಡೆ ಬಿಡಿಸಿ ಆ ಗಾಳಿ-ಮಳೆಯಲ್ಲೇ ಹೊರಟುಬಿಟ್ಟೆ.
ಅವಸರವಸರವಾಗಿ ಸಂಚರಿಸುತ್ತಿದ್ದ ವಾಹನಗಳಿಂದಾಗಿ ನನ್ನ ಕೊಡೆ ಗಾಳಿಪಟದಂತಾಗಿತ್ತು. ಮೈಯೆಲ್ಲ ಒದ್ದೆ. ಈ ವರುಣ ಸ್ವಲ್ಪ ವಿರಾಮವಾದರೂ ತೆಗೆದುಕೊಳ್ಳಬಾರದೇ ಎಂದು ಗೊಣಗುತ್ತಿರುವಾಗಲೇ ಅದೆಲ್ಲಿಂದಲೋ ನುಗ್ಗಿ ಬಂದ ಲಾರಿಯ ರಭಸಕ್ಕೆ ಆಗಲೇ ಅರೆಜೀವವಾಗಿದ್ದ ನನ್ನ ಕೊಡೆ ಹೂವಿನಂತೆ ಅರಳಿಬಿಟ್ಟಿತು. ಕಡ್ಡಿಗಳು ಮುರಿದು ಬಿದ್ದವು. ದಾರಿ ತೋಚದೆ ಬೆಪ್ಪಾದ
ನನಗೆ ಪಕ್ಕದಲ್ಲೊಂದು ಪೋಸ್ಟ್ ಆಫೀಸ್ ಕಾಣಿಸಿತು. ಸ್ಪೀಡ್ ಪೋಸ್ಟ್‌ನಲ್ಲಿ ಬರುವ ಪತ್ರದಂತೆ ಓಡಿಹೋಗಿ ಪೋಸ್ಟ್ ಆಫೀಸು ಸೇರಿಕೊಂಡೆ. ಅಷ್ಟರಲ್ಲಿ ನೋಡನೋಡುತ್ತಿದ್ದಂತೆ ನಾನು ಪ್ರತಿದಿನ ಪ್ರಯಾಣಿಸುವ ಬಸ್ಸು ಕಣ್ಣಮುಂದೆಯೇ ಹೊರಟುಹೋಯಿತು. ಸಿಟ್ಟಿನಲ್ಲಿ ಕಾಲೇಜೂ ಬೇಡ ಏನೂ ಬೇಡ ಮನೆಗೆ ಹಿಂತಿರುಗೋದೇ ವಾಸಿ ಅನ್ನಿಸಿಬಿಟ್ಟಿತು. ಆದರೆ, ಸುರಿಯುವ ಮಳೆ ಏನೂ ಮಾಡದ ಹಾಗೆ ನನ್ನ ಕಟ್ಟಿಹಾಕಿತ್ತು.
ಸದ್ಯಕ್ಕಂತೂ ಮಳೆ ಬಿಡುವ ಲಕ್ಷಣ ಕಾಣಲಿಲ್ಲ. ಏನು ಮಾಡುವುದೆಂದು ತಿಳಿಯದೆ ಕಲ್ಲಿನಂತೆ ನಿಂತುಬಿಟ್ಟೆ. ಒದ್ದೆಯಾದ ಪತ್ರದಂತಿದ್ದ ನನ್ನ ಸ್ಥಿತಿಯನ್ನು ಕಂಡು ಪೋಸ್ಟಾಫೀಸಿನ ಮ್ಯಾನೇಜರ್‌ಗೆ ಕರುಣೆ ಹುಟ್ಟಿತೇನೋ, ನನ್ನನ್ನು ವಿಚಾರಿಸಿ, ಅವರದ್ದೊಂದು ಹಳೆಯ ಕೊಡೆಯನ್ನು ಕೊಟ್ಟು “ನಾಳೆ ಹಿಂತಿರುಗಿಸಿದರೆ ಸಾಕು’ ಅಂದರು. ಮರುಭೂಮಿಯಲ್ಲಿ ಬಳಲಿ ಬಾಯಾರಿದವನಿಗೆ ಒಂದು ತಂಬಿಗೆ ನೀರು ಸಿಕ್ಕಷ್ಟು ಖುಷಿಪಟ್ಟು, ಕೊಡೆ ಬಿಡಿಸಿ ಹೊರಟೆ. ಇನ್ನೇನು ಕೆಲವೇ ನಿಮಿಷ ಬಸ್ಟ್ಯಾಂಡ್ ಸೇರುತ್ತೇನೆ ಅನ್ನುವಷ್ಟರಲ್ಲಿ ಯಾರೋ ಗಾಡಿಯವ ಅವಸರದಲ್ಲಿದ್ದ ನನ್ನ ಮೇಲೆ ಕೆಸರೆರಚಿಕೊಂಡು ಹೋದ. ಮೊದಲೇ ಮಳೆಯಲ್ಲಿ ಮಿಂದು ಬೆಂದ ನನ್ನ ಸಿಟ್ಟು ನೆತ್ತಿಗೇರಿತು. ಆತನಿಗೆ ಬಾಯಿಗೆ ಬಂದಂತೆ ಹಿಡಿಶಾಪ ಹಾಕಿದೆ. ಅಂದು ಬೇರೆ ಸೋಮವಾರವಾಗಿದ್ದರಿಂದ ಇನ್ನು ವಾರವಿಡೀ ಯಾವ ಗ್ರಹಚಾರ ಕಾದಿದೆಯೋ ಅನ್ನಿಸಿಬಿಟ್ಟಿತು. ಮೈಕೈ ಒರೆಸಿಕೊಂಡು ಹೇಗೋ ಬಸ್‌ಸ್ಟಾಂಡ್ ಸೇರಿದೆ. ಬಸ್ಸಿನ ಸುಳಿವೇ ಇಲ್ಲ. ಈ ಮಳೆ ಯಾಕೆ ಯಾವಾಗಲೂ ನಾನು ಕಾಲೇಜಿಗೆ ಹೊರಡುವ ಸಮಯದಲ್ಲೇ ಸುರಿಯುತ್ತದೆ ಎಂದು ಗೊಣಗುತ್ತಿದ್ದಂತೆ “ಪೋಂ’ ಎಂದು ಸದ್ದು ಮಾಡುತ್ತ ಬಸ್ ಬಂದೇ ಬಿಟ್ಟಿತು. ಅದು ನನ್ನ ಮಾಮೂಲಿ ಬಸ್ ಅಲ್ಲದ್ದರಿಂದ ಕಂಡಕ್ಟರ್ ಕೇಳಿದಷ್ಟು ಕೊಟ್ಟು ಸುಮ್ಮನಾದೆ. ಬೆಳಗ್ಗೆ ಬೆಳಗ್ಗೆ ಯಾರ ಮುಖ ದರ್ಶನ ಮಾಡಿದೆನೋ, ಹೀಗೆಲ್ಲ ಆಗುತ್ತಿದ್ದೆಯಲ್ಲಾ ಎನ್ನುತ್ತಿದ್ದಂತೆ ಬಸ್ಸೂ ಕೆಟ್ಟು ನಿಂತುಬಿಟ್ಟಿತು. ಒಟ್ಟಿನಲ್ಲಿ ಏನೋ ಗ್ರಹಚಾರ ಸರಿಯಿಲ್ಲ ಎಂದುಕೊಳ್ಳುತ್ತಿರುವಾಗಲೇ ಕಂಡಕ್ಟರ್ ಎಲ್ಲರನ್ನೂ ಕೆಳಗಿಳಿಸಿ, “ಈಗ ಹಿಂದೆಯೊಂದು ಬಸ್ಸು ಬರುತ್ತಿದೆ. ಟಿಕೆಟ್ ತೋರಿಸಿ ಅದರಲ್ಲಿ ಹೋಗಿ’ ಅಂದುಬಿಟ್ಟ. ಪುಣ್ಯಕ್ಕೆ ಬಸ್ ಬಂದಿತು. ಕಾಲೇಜಿಗೆ ತಲುಪುವಾಗ ತುಂಬಾ ತಡವಾಗಿತ್ತು.
ಇಷ್ಟೆಲ್ಲ ನಡೆದ ಮೇಲೆ ಇನ್ನು ಕಾಲೇಜಿನಲ್ಲಿ ಇನ್ನೇನು ಕಾದಿದೆಯೋ ಎನ್ನುತ್ತ ಭಯದಿಂದಲೇ ತರಗತಿಗೆ ಹೊರಟೆ. ಉಪನ್ಯಾಸಕರು ಒಳ್ಳೆಯ ಮನಸ್ಥಿತಿ ಯಲ್ಲಿದ್ದರಿಂದ ಏನೂ ಹೇಳದೆ ಒಳ ಕರೆದರು. ಬೆಂಚಿನಲ್ಲಿ ಕುಳಿತವಳೇ “ಅಬ್ಟಾ’ ಎಂದು ನಿಟ್ಟುಸಿರುಬಿಟ್ಟೆ. ನಡೆದ ಘಟನೆಗಳೆಲ್ಲ ತಲೆಯಲ್ಲಿ ಅಚ್ಚಾದಂತೆ ಕೂತಿತ್ತು. ತರಗತಿ ಮುಗಿದಿದ್ದೇ ತಡ ಸ್ನೇಹಿತರೊಂದಿಗೆ ನನ್ನೆಲ್ಲ ಅಳಲನ್ನು ತೋಡಿಕೊಂಡೆ. ನಾನೇನೋ ಜೋಕ್ ಹೇಳಿದಂತೆ ಅವರೆಲ್ಲ ಜೋರಾಗಿ ನಗಲಾರಂಭಿಸಿದರು. ಆದರೆ, ನಾನು ಅನುಭವಿಸಿದ ಫಜೀತಿ ನನಗೆ ಮಾತ್ರ ತಿಳಿದಿತ್ತು.
ಸಂಜೆ ಮನೆಗೆ ತೆರಳುತ್ತಾ ನನ್ನೆಲ್ಲ ಫಜೀತಿಗೆ ಕಾರಣಕರ್ತವಾದ ಕೊಡೆಯನ್ನು ರಿಪೇರಿಗೆ ಕೊಟ್ಟು ಹೊರಟೆ. ಮನೆಯೆಲ್ಲ ಅದೇ ಮಾತುಗಳು. ಮರುದಿನ ಮರೆಯದೇ ಪೋಸ್ಟ್ ಆಫೀಸಿಗೆ ತೆರಳಿ ಕೊಡೆಯನ್ನು ಹಿಂದಿರುಗಿಸಿ ಕೃತಜ್ಞತೆ ಸಲ್ಲಿಸಿದೆ. ಇಂದಿಗೂ ಕೆಲವೊಮ್ಮೆ ಅಂದಿನ ನನ್ನ ಪಾಡು ನೆನಪಾಗಿ ನಗು ಬರುತ್ತದೆ.
ದೀಕ್ಷಾ ಕುಮಾರಿ
ತೃತೀಯ ಪತ್ರಿಕೋದ್ಯಮ ವಿಭಾಗ,
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು