Advertisement

ಮರೆಯಲಾರದ ಮಹಾನುಭಾವ ಡಾ|ಕೃಷ್ಣಾನಂದ ಕಾಮತ್‌

02:31 PM Nov 16, 2019 | Suhan S |

ಹೊನ್ನಾವರ: ಕನ್ನಡ ನಾಡು ಕಂಡ ಅನನ್ಯ ಪ್ರತಿಭೆ, ಅಪರೂಪದ ಸಂಶೋಧಕ, ಲೋಕಸಂಚಾರಿ, ಪ್ರಾಣಿ-ಪಕ್ಷ ತಜ್ಞ, ಸೃಜನಶೀಲ ಬರಹಗಾರ, ಈ ಎಲ್ಲ ವಿಷಯಗಳನ್ನು ತಮ್ಮ ಲೇಖನಿ ಮತ್ತು ಕ್ಯಾಮರಾಗಳಿಂದ ವಿಶಿಷ್ಟ ಶೈಲಿಯಲ್ಲಿ ಕನ್ನಡಕ್ಕೆ ಕೊಟ್ಟ ಡಾ| ಕೃಷ್ಣಾನಂದ ಕಾಮತ್‌ ದೈಹಿಕವಾಗಿ ಇಲ್ಲವಾಗಿ 18 ವರ್ಷಗಳಾದವು.

Advertisement

ಅವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಆರಂಭಿಸಿದ ಅವರ ಪತ್ನಿ ಇತಿಹಾಸ ತಜ್ಞೆ, ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಜ್ಯೋತ್ಸಾ ಕಾಮತ್‌ ಮತ್ತು 29ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿರುವ ಅವರ ಮಗ ವಿಕಾಸ ಪ್ರತಿವರ್ಷ ಡಾ| ಕಾಮತರ ನೆನಪಿನಲ್ಲಿ ಒಂದು ದಿನದ ಸಾಹಿತ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಮಾಡುತ್ತ ಬಂದಿದ್ದಾರೆ.

ಈ ವರ್ಷದ ಪ್ರಶಸ್ತಿ ಲೇಖಕ, ಪರಿಸರ ಪ್ರೀತಿಯ ರಾಧಾಕೃಷ್ಣ ಎಸ್‌. ಭಡ್ತಿ ಇವರಿಗೆ ಸಂದಿದೆ. ನಾನು ಅಮೇರಿಕಾಗೆ ಹೋಗಿದ್ದೆ ಪ್ರವಾಸ ಕಥನದಿಂದ ಆರಂಭಿಸಿ ಮರುಪಯಣ ಕೃತಿಯವರೆಗೆ ಕನ್ನಡಕ್ಕೆ ಹಲವು ಕೃತಿಗಳನ್ನು ಕೊಟ್ಟ ಡಾ| ಕಾಮತ್‌ ದೇಶದ ಉದ್ದಗಲವನ್ನು ಓಡಾಡಿ ತಮ್ಮ ಲೇಖನಿ, ಕುಂಚ, ಕ್ಯಾಮರಾಗಳಿಂದ ಭಾರತದ ಬಹುಮುಖೀ ಸಂಸ್ಕೃತಿ ತೆರೆದಿಟ್ಟಿದ್ದಾರೆ.

ಲಕ್ಷಾಂತರ ಛಾಯಾಚಿತ್ರಗಳು ಇನ್ನೂ ಉಳಿದಿವೆ. ಡಾ| ಕಾಮತರ ಮಗ ವಿಕಾಸ ಅಮೇರಿಕಾಗೆ ಹೋಗಿ 29 ವರ್ಷಗಳಾದವು. ಕನ್ನಡ ಮರೆತಿಲ್ಲ, ಕನ್ನಡದ ಚಟುವಟಿಕೆ ಬಿಟ್ಟಿಲ್ಲ. ವೆಬ್‌ ಸೈಟ್‌ನಲ್ಲಿ ಡಾ| ಕೃಷ್ಣಾನಂದ ಕಾಮತರ ಸಾಹಿತ್ಯ, ಚಿತ್ರ ಸಂಗ್ರಹದೊಂದಿಗೆ ದೇಶದ ಆಗುಹೋಗು ಮತ್ತು ಕನ್ನಡದ ನಡೆ-ನುಡಿಗಳನ್ನೆಲ್ಲಾ ಇದರಲ್ಲಿ ತುಂಬಿಸುತ್ತ ಬರುತ್ತಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಭಾರತದ ಸಂಸ್ಕೃತಿಯನ್ನು ಅರಿಯಬೇಕಾದರೆ ವೆಬ್‌ಸೈಟ್‌ ಮೊರೆ ಹೋಗಬೇಕಾಗುತ್ತದೆ. ಇದು ಮೊಬೈಲ್‌ನಲ್ಲಿ ಲಭ್ಯವಿದೆ. ನಿತ್ಯ ಲಕ್ಷಾಂತರ ಜನ ಈ ಜಾಲತಾಣದಲ್ಲಿ ವ್ಯವಹರಿಸುತ್ತಾರೆ.

ಡಾ| ಕೃಷ್ಣಾನಂದ ಕಾಮತ್‌ ಹೊನ್ನಾವರ ಜವಳಿ ವ್ಯಾಪಾರಿ ಕುಟುಂಬದಲ್ಲಿ ಜನಿಸಿ ವಿಜ್ಞಾನ ಓದಿ, ವಿದೇಶ ಸುತ್ತಿ ಸೂಕ್ಷ್ಮ ಛಾಯಾಗ್ರಹಣದವೃತ್ತಿ ಕೈಗೊಂಡರು. ಜೋತ್ಸ್ನಾ  ಕಾಮತ್‌ ಆಕಾಶವಾಣಿಯಲ್ಲಿದ್ದರು. ಇವರ ಪತ್ರವೇ ಅಪರೂಪದ ಸಾಹಿತ್ಯ ಕೃತಿಯಾಗಿದೆ. ಕಾಮತರ ನಂತರ ಪ್ರತಿವರ್ಷ ನಡೆಯುವ ಪ್ರಶಸ್ತಿ ಪ್ರದಾನವನ್ನು ಹೊನ್ನಾವರದಲ್ಲಿ ನಡೆಸುವ ಇಚ್ಛೆ ಇತ್ತು.

Advertisement

80ದಾಟಿದ ಜೋತ್ಸ್ನಾ ಕಾಮತ್‌ ಓಡಾಟ ಕಷ್ಟ, ಮಳೆಯ ಹಾವಳಿ, ಮೊದಲಾದ ಕಾರಣಗಳಿಂದ ಬೆಂಗಳೂರು ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ತಮ್ಮ ಶಶಿಕಿರಣ ಅಪಾರ್ಟಮೆಂಟಿನಲ್ಲಿ ನ.17ರ ಸಂಜೆ 4ಕ್ಕೆ ಪ್ರಶಸ್ತಿ ಪ್ರದಾನ, ಕಾಮತ್‌ರು ತೆಗೆದ ಚಿತ್ರ ಮತ್ತು ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ವಿಜ್ಞಾನ ಸಾಹಿತಿ ನೇಮಿಚಂದ್ರ ಅತಿಥಿಗಳಾಗಿದ್ದಾರೆ. ಈ ಕುಟುಂಬದ ಕನ್ನಡ ನಾಡು, ನುಡಿ ಸೇವೆಯನ್ನು ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುತ್ತ ಬಂದಿದೆ. ಕುಡಿದೀಪವಿಡುವೆ ತಾಯಿ ನಿನ್ನ ಗುಡಿಯ ಮುಂದೆ, ಎಲ್ಲಿದ್ದರೇನಮ್ಮ ನಿನಗೆ ಮಕ್ಕಳೆಲ್ಲರೂ ಒಂದೇ ಎಂಬಂತೆ ಡಾ| ವಿಕಾಸ ಕಾಮತ್‌ ಅಮೇರಿಕಾದಲ್ಲಿದ್ದು ಜಾಲತಾಣದಲ್ಲಿ ಕನ್ನಡವನ್ನು ತುಂಬುತ್ತ ತನ್ನ ಕರ್ತವ್ಯ ನಡೆಸುತ್ತಿದ್ದು ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ.

 

-ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next