Advertisement

ಪಾಲನೆಯಾಗದ ಜಿಲ್ಲಾಧಿಕಾರಿ ಆದೇಶ

12:43 PM Oct 14, 2019 | Suhan S |

ಗದಗ: ನಮ್ಮ ಎಲ್ಲ ಸಿಬ್ಬಂದಿ ಒಟ್ಟಿಗೆ ಟೀ ಕುಡಿಯುವುದಕ್ಕೆ ಹೋಗ್ಯಾರೀ. ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹೋದವ್ರು ಮತ್ತೆ ಬಂದಿಲಿಲ್ಲ. ಇನ್ನೇನು ಬರಬಹುದು. ಎಲ್ಲರೂ ಕಚೇರಿಗೆ ಬಂದಾರ್ರೀ. ಇಲ್ಲೆ ಎಲ್ಲೋ ಹೋಗಿಬೇಕ್ರಿ. ಜಿಲ್ಲಾಡಳಿತ ಭವನದ ಯಾವುದೇ ಇಲಾಖೆ ಕಚೇರಿಗೆ ರವಿವಾರ ಭೇಟಿ ನೀಡಿದವರಿಗೆ ಸಿಕ್ಕ ಸಿದ್ಧ ಉತ್ತರಗಳಿವು!

Advertisement

ರಾಜ್ಯ ವಿಧಾನ ಮಂಡಲ ಅಧಿವೇಶನ ಮತ್ತು ನೆರೆ ಪರಿಹಾರ ಕಾರ್ಯಗಳು ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಸರ್ಕಾರಿ ಕಚೇರಿಗಳು ಅ.12 ಮತ್ತು 13ರಂದು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶಿಸಿದ್ದರು. ಆದರೆ, ದೀಪದ ಕೆಳಗೆ ಕತ್ತಲು ಎಂಬಂತೆ ಜಿಲ್ಲಾಧಿಕಾರಿಗಳ ಆದೇಶವನ್ನು ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳೇ ಪಾಲಿಸಲಿಲ್ಲ.

ಬಹುತೇಕ ಕುರ್ಚಿಗಳು ಖಾಲಿ: ಮಧ್ಯಾಹ್ನ 12:00ರ ಸುಮಾರಿಗೆ ಜಿಲ್ಲಾಡಳಿತ ಭವನದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಅಬಕಾರಿ, ಸಹಕಾರ ಇಲಾಖೆ, ಲಾಟರಿ, ಸಣ್ಣ ನೀರಾವರಿ, ವಯಸ್ಕರ ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಒಬ್ಬಿಬ್ಬರು ಮಾತ್ರ ಕಂಡು ಬಂದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಬಹುತೇಕ ಇಲಾಖೆಗಳ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಆಯಾ ಕಚೇರಿಗಳಲ್ಲಿ ಸಿಬ್ಬಂದಿಗೆ ಒದಗಿಸಿದ ಕಂಪ್ಯೂಟರ್‌ಗಳೂ ಚಾಲು ಆಗಿರಲಿಲ್ಲ.

ಕ್ಯಾಂಟೀನ್‌ನಲ್ಲೂ ಒಂದಂಕಿ ಮೀರುವಷ್ಟು ಜನ ಇರಲಿಲ್ಲ. ಯಾವ ಇಲಾಖೆಗೆ ಭೇಟಿ ನೀಡಿದರೂ ಸಿದ್ಧ ಉತ್ತರ ದೊರೆಯುತ್ತಿದ್ದವು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಚುನಾವಣಾ ವಿಭಾಗಳಲ್ಲಿ ಮಾತ್ರ ನಿಗದಿತ ಸಿಬ್ಬಂದಿ ಕಂಡು ಬಂದರು. ಜಿಲ್ಲಾಧಿಕಾರಿಗಳು ರವಿವಾರ ಸುದ್ದಿಗೋಷ್ಠಿ ಕರೆದಿದ್ದರಿಂದ ಅದಕ್ಕೆ ಪೂರಕ ಮಾಹಿತಿ ಒದಗಿಸುವ ಕಾರ್ಯದಲ್ಲಿ ಚುನಾವಣಾ ಸಿಬ್ಬಂದಿ ತಲ್ಲೀನರಾಗಿದ್ದರು. ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಮಗ್ನರಾಗಿದ್ದರು. ಇನ್ನು, ಆರೋಗ್ಯ ಇಲಾಖೆ ಸಿಬ್ಬಂದಿ ಹಳೆ ಕಡತ ತಡಕಾಡುತ್ತಿರುವುದು ಕಂಡು ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next