ಸುರಪುರ: ರೈಲ್ವೆ ಮಾರ್ಗಕ್ಕೆ ಜಮೀನು ಕಳೆದುಕೊಂಡ ಕೆಲವರಿಗೆ ಪರಿಹಾರ ದೊರೆಯದೇ ಅನ್ಯಾಯವಾಗಿದೆ ಎಂದು ಆರೋಪಿಸಿ ದಲಿತ ಸಮಿತಿ ಕ್ರಾಂತಿಕಾರಿ ಬಣದ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ತಾಲೂಕಿನ ಗುಡಿಹಾಳ ಜೆ. ಗ್ರಾಮದ ತಾಯಪ್ಪ ಹೆಮಡಗಿ ಸರ್ವೇ 33/1 ರಲ್ಲಿ ರೇಲ್ವೆ ಮಾರ್ಗಕ್ಕೆ ಜಮೀನು ಸ್ವಾಧೀನ ಪಡೆಸಿಕೊಳ್ಳಲಾಗಿದೆ. ಆದರೆ ಇವರ ಜಮೀನಿನಲ್ಲಿ ಬೇರೆಯವರ ಹಿಸಾ ಸೇರ್ಪಡೆಯಾಗಿದ್ದು, ಜಮೀನು ಕಳೆದುಕೊಂಡಿರುವ ತಾಯಪ್ಪನಿಗೆ ಪರಿಹಾರ ಸಿಗದೇ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ತಾಯ್ವನ ಜಮೀನಿನಲ್ಲಿ ಸರ್ವೇ ಗುರುತು ಮಾಡಲಾಗಿದೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಇದೇ ಸರ್ವೇ ನಂಬರ್‌ನಲ್ಲಿ ಬೇರೊಬ್ಬರ ಆಸ್ತಿ ಸೇರ್ಪಡೆ ಮಾಡಲಾಗಿದೆ. ಅಧಿಕಾರಿಗಳ ತಪ್ಪಿನಿಂದ ನಿಜವಾದ ಫಲಾನುಭವಿಗೆ ಪರಿಹಾರ ನೀಡಿಲ್ಲ. ಸಮಸ್ಯೆ ಪರಿಹರಿಸುವಲ್ಲಿ ಕಂದಾಯ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಬಗ್ಗೆ ಪರಿಶೀಲಿಸಿ ಜಮೀನು ಕಳೆದುಕೊಂಡ ಫಲಾನುಭವಿ ತಾಯಪ್ಪನಿಗೆ ನ್ಯಾಯ ಒದಗಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಸಮಿತಿ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು. ಶಿರಸ್ತೇದಾರ್ ಸೀಮನಾಥ ದೊರೆ ಮೂಲಕ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕು ಸಂಚಾಲಕ ರಾಮಣ್ಣ ಶೆಳ್ಳಗಿ, ಜಟ್ಟೆಪ್ಪ ನಾಗರಾಳ, ಹುಲಗಪ್ಪ ಶೆಳ್ಳಗಿ, ಮಲ್ಲೇಶಿ ಬಡಿಗೇರ, ಮಹೇಶ ಯಾದಗಿರಿ, ಮಲ್ಲಪ್ಪ ಬಡಿಗೇರ, ಮರಿಲಿಂಗಪ್ಪ ದೇವಿಕೇರಿ, ದೇವಪ್ಪ ಬಿಜಾಪೂರ, ರಾಮಣ್ಣ ಬಬಲಾದ ಇತರರಿದ್ದರು.