Advertisement

ಅನ್ಯ ಜಿಲ್ಲೆಗಳ ಬೆಳೆಗಾರರಿಗೆ ಅನ್ಯಾಯ

12:07 AM Apr 10, 2021 | Team Udayavani |

ಏಷ್ಯಾದಲ್ಲೇ ಅತೀ ಹೆಚ್ಚು ವಹಿವಾಟು ನಡೆಯುವ ರೇಷ್ಮೆ ಗೂಡು ಮಾರುಕಟ್ಟೆ ಎಂಬ ಹೆಗ್ಗಳಿಕೆ ಇರುವ ರಾಮನಗರದ ರೇಷ್ಮೆಗೂಡು ಮಾರುಕಟ್ಟೆಯ ಕರ್ಮಕಾಂಡ ದಿನನಿತ್ಯ ತೆರೆದುಕೊಳ್ಳುತ್ತಲೇ ಇದೆ. ಅಮಾನತುಗೊಂಡಿರುವ ಮಾರುಕಟ್ಟೆ ಉಪನಿರ್ದೇಶಕ ಮುನ್ಷಿ ಬಸಯ್ಯ ಅವರ ಪ್ರಕರಣದ ಅನಂತರ ಮುಗ್ದ ರೇಷ್ಮೆ ಬೆಳೆಗಾರರ ಶೋಷಣೆ ಬೆಳಕಿಗೆ ಬರುತ್ತಿದೆ.
ವಿಶೇಷವಾಗಿ ಬೆಳಗಾವಿ, ರಾಯಚೂರು, ದಾವಣಗೆರೆ ಮುಂತಾದ ಉತ್ತರ ಕರ್ನಾಟಕ ಜಿಲ್ಲೆಗಳು, ದೂರದ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂಬ ಅಂಶ ಬಯಲಾಗಿದೆ. 1 ಕೋಟಿಗೂ ಅಧಿಕ ಮೊತ್ತದ ರೇಷ್ಮೆ ಗೂಡು ಹರಾಜು ಮೊತ್ತ ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆ ಬಾಕಿ ಇದೆ.

Advertisement

ಮೊತ್ತ ತಲುಪುವ ವ್ಯವಸ್ಥೆ ಏನು?
ರೇಷ್ಮೆ ಗೂಡು ಹರಾಜು ಅನಂತರ ಖರೀದಿಸಿದ ರೀಲರ್‌ಗಳು ಹರಾಜು ಮೊತ್ತವನ್ನು ಉಪನಿರ್ದೇಶಕರ ಖಾತೆಗೆ ಜಮೆ ಮಾಡಬೇಕು. ಹೀಗೆ ಜಮೆಯಾದ ಹರಾಜು ಮೊತ್ತವನ್ನು ಮಾರುಕಟ್ಟೆಯ ಅಧಿಕಾರಿಗಳು ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು.

ಗೊತ್ತಾಗಿದ್ದು ಹೇಗೆ?
1 ಕೋಟಿಗೂ ಮೀರಿದ ಹರಾಜು ಮೊತ್ತ ಬೆಳೆಗಾರರಿಗೆ ತಲುಪಿಲ್ಲ ಎಂಬ ದೂರುಗಳು ಹೆಚ್ಚಾದವು. ಪೊಲೀಸ್‌ ಠಾಣೆಗೂ ಮೌಖೀಕ ದೂರು ಸಲ್ಲಿಕೆಯಾದವು. ಬೆನ್ನಲ್ಲೆ ಹಿರಿಯ ಅಧಿಕಾರಿಗಳು ಚುರುಕುಗೊಂಡರು. ಈ ಬೆಳವಣಿಗೆಯ ಅನಂತರ ಕಳೆದ ಮಾ.19ರಂದು ಉಪನಿರ್ದೇಶಕ ಮುನ್ಷಿ ಬಸಯ್ಯ ಏಕಾಏಕಿ ನಾಪತ್ತೆಯಾದರು. ಜತೆಗೆ ಇವರ ಕಚೇರಿಯಲ್ಲಿದ್ದ ಕಂಪ್ಯೂಟರ್‌ನಲ್ಲಿ ಎಲ್ಲ ವಹಿವಾಟು ದಾಖಲೆಗಳು ಮಾಯವಾಗಿದ್ದವು. ಬೆಳೆಗಾರರಿಗೆ ಸಲ್ಲಬೇಕಾದ ಒಟ್ಟು ಮೊತ್ತವೆಷ್ಟು ಎಂದು ಮೇಲ್ನೋಟಕ್ಕೆ ಮಾಹಿತಿ ಕಲೆ ಹಾಕಿದಾಗ ದೂರದ ಜಿಲ್ಲೆಗಳ ಬೆಳೆಗಾರರೇ ಹೆಚ್ಚು ಶೋಷಣೆಗೆ ಒಳಗಾಗಿರುವ ಅಂಶ ಬಯಲಾಗಿದೆ. ವಿಷಯವೆಂದರೆ 2 ಕೋಟಿ ರೂ.ನಷ್ಟು ಮೊತ್ತಕ್ಕೆ ಇನ್ನೂ ಲೆಕ್ಕವೇ ಸಿಕ್ಕಿಲ್ಲ. ಇದಕ್ಕೆ ಮುನ್ಶಿ ಬಸಯ್ಯನವರನ್ನೇ ಹೊಣೆ ಮಾಡಲಾಗಿದೆ.

ಬೆಳೆಗಾರರೇಕೆ ಟಾರ್ಗೆಟ್‌?
ಕಳೆದ ಮಾ. 14ರಂದು ಹರಪನಹಳ್ಳಿಯಿಂದ ಗೂಡು ತಂದ ಐವರು ಬೆಳೆಗಾರರಿಗೆ ಎ.8ನೇ ತಾರೀಕಿನಂದೂ ಹರಾಜು ಮೊತ್ತ ಅವರ ಬ್ಯಾಂಕ್‌ ಖಾತೆಗಳಿಗೆ ಜಮೆಯಾಗಿಲ್ಲ. ಜನವರಿಯ ಹಣವೂ ಜಮೆಯಾಗಿಲ್ಲ. ದೂರದ ಜಿಲ್ಲೆಗಳ ಬೆಳೆಗಾರರು ಬ್ಯಾಂಕ್‌ ಖಾತೆಗೆ ಹಣ ಜಮೆ ಆಗುತ್ತದೆ ಎಂದು ಅಧಿಕಾರಿಗಳನ್ನು ನಂಬಿ ತಮ್ಮ ಊರುಗಳಿಗೆ ವಾಪಸಾಗುತ್ತಾರೆ. ಇದೇ ಹಣಕ್ಕಾಗಿ ಅವರು ಮತ್ತೆ ಮತ್ತೆ ಬರಲಾರರು ಎಂಬ ಕಾರಣಕ್ಕಾಗಿ ಶೋಷಿಸಲಾಗುತ್ತಿದೆ ಎಂಬ ಆರೋಪವಿದೆ.

– ಬಿ.ವಿ. ಸೂರ್ಯ ಪ್ರಕಾಶ್

Advertisement
Advertisement

Udayavani is now on Telegram. Click here to join our channel and stay updated with the latest news.

Next