Advertisement

ಅನಿರೀಕ್ಷಿತ ಲಾಕ್‌ಡೌನ್‌: ಹಳ್ಳಿಯಲ್ಲೇ ಬದುಕು ಕಂಡ ಸ್ಪೇನ್‌ ಯುವತಿ

12:13 PM Jul 28, 2020 | mahesh |

ಬೈಂದೂರು: ಲಾಕ್‌ ಡೌನ್‌ ಹಲವು ಸಮಸ್ಯೆಗಳಿಗೆ ನಾಂದಿಯಾದರೆ ಇನ್ನು ಕೆಲವರಿಗೆ ಹೊಸ ಅನುಭವ ನೀಡಿದೆ. ಸ್ಪೇನ್‌ ದೇಶದಿಂದ ದಕ್ಷಿಣ ಭಾರತ ಪ್ರವಾಸಕ್ಕೆ ಬಂದು ಲಾಕ್‌ಡೌನ್‌ ಕಾರಣದಿಂದ ಹಿಂದಿರುಗಲಾಗದೆ ಬೈಂದೂರು ಸಮೀಪದ ಹೇರಂಜಾಲಿನಲ್ಲಿ ವಿದೇಶಿ ಮಹಿಳೆ ನಾಲ್ಕು ತಿಂಗಳಿಂದ ಉಳಿದುಬಿಟ್ಟಿದ್ದಾರೆ.

Advertisement

ಇಲ್ಲಿನ ಕೃಷ್ಣ ಪೂಜಾರಿ ಅವರ ಮನೆಯಲ್ಲಿ ತಂಗಿರುವ ತೆರೆಸಾ ಹಳ್ಳಿ ಬದುಕಿನೊಂದಿಗೆ ಬೆರೆತು ಹೋಗಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವದ ಇವರು ಮನೆಮಂದಿ ಜತೆ ಕೃಷಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಗೊಬ್ಬರ ಹೊತ್ತು ಗದ್ದೆ, ತೋಟಕ್ಕೆ ಹಾಕುತ್ತಾರೆ. ಪೂಜಾರಿ ಅವರ ತಾಯಿ ಚಿಕ್ಕಮ್ಮ ಪೂಜಾರಿ ಅವರಿಂದ ರಂಗೋಲಿ ಹಾಕಲು, ದನದ ಹಾಲು ಕರೆಯಲು, ಮಡಲು (ತೆಂಗಿನ ಗರಿ) ನೇಯಲು ಕಲಿತಿದ್ದಾರೆ. ಊರಿನ ಜನ ಮಾತನಾಡುವ ಕುಂದಾಪ್ರ ಕನ್ನಡದ ಹಲವು ಪದಗಳನ್ನು ಆಡಲು, ಮಕ್ಕಳಿಂದ ಕನ್ನಡ ಅಕ್ಷರಗಳನ್ನು ಬರೆಯಲು ಪ್ರಯತ್ನಪಡುತ್ತಿದ್ದಾರೆ. ಮನೆಯಲ್ಲಿ ಮಾಡುವ ತಿಂಡಿಗಳಾದ ಕೊಟ್ಟೆಕಡುಬು, ಇಡ್ಲಿ, ದೋಸೆ, ಚಿಕ್ಕನ್‌ ಸುಕ್ಕ, ಮೀನುಸಾರು, ತರಕಾರಿ ಸಾಂಬಾರು ನನಗೆ ಇಷ್ಟವಾಗಿಬಿಟ್ಟಿದೆ ಎಂದು ಬಾಯಿ ಚಪ್ಪರಿಸುತ್ತಾರೆ.

ಹೊಸಬರನ್ನು ಕಂಡೊಡನೆ ಮುಖವಿಡೀ ಅರಳಿಸಿ ನಗೆಯಾಡುವ ತೆರೆಸಾ ‘ಹಾಯ್‌ ಹೇಂಗಿದ್ರಿ’ ಅಂತ ಕೇಳುತ್ತಾರೆ. ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಹಿನ್ನೆಲೆಯಲ್ಲಿ ಮನೆಯವರು ಕಲಿಸಿಕೊಟ್ಟ ‘ಕುಂದಾಪ್ರ ಭಾಸಿ ಚೆಂದ್‌ ಗೋಂಪಿ’ (ಕುಂದಾಪ್ರ ಭಾಷೆ ಅತ್ಯಂತ ಸುಂದರ) ಎಂದು ಸ್ಪೇನಿಶ್‌ ಧಾಟಿಯಲ್ಲಿ ಉತ್ತರಿಸುತ್ತಾರೆ.

ಮುಂಬಯಿಯಲ್ಲಿ ಅಮೆರಿಕದ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕೃಷ್ಣ ಪೂಜಾರಿ ಜತೆಗೆ ತೆರೆಸಾ ಅಣ್ಣನೂ ದುಡಿಯುತ್ತಿದ್ದಾರೆ. ಹಾಗಾಗಿ ಎಂಟು ವರ್ಷಗಳಿಂದ ತೆರೆಸಾ ಪರಿಚಯ. ‘ನಮ್ಮದು ದೇಶದ ಗಡಿಗಳನ್ನು ಮೀರಿದ ಮಾನವೀಯ ಸಂಬಂಧ. ಸ್ವದೇಶಕ್ಕೆ ಮರಳಲಾಗದೆ ತೊಂದರೆಗೆ ಸಿಲುಕಿರುವ ಅವರು ಆ ಕಾರಣದಿಂದ ನಮ್ಮಲ್ಲಿಗೆ ಬಂದಿದ್ದಾರೆ. ಅಲ್ಪಸ್ವಲ್ಪ ಕನ್ನಡ ಕಲಿತಿದ್ದರಿಂದ, ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಸಂತಸದಿಂದ ಭಾಗಿಯಾಗುತ್ತಿರುವುದರಿಂದ ಅವರು ನಾಲ್ಕು ತಿಂಗಳಿನಿಂದ ನಮ್ಮೂರ, ನಮ್ಮ ಮನೆಯ ಹುಡುಗಿ ಆಗಿದ್ದಾರೆ. ಸದ್ಯ ಲಾಕ್‌ಡೌನ್‌ ಕಾರಣದಿಂದ ಅವರು ಮನೆಯಲ್ಲೇ ಇರುತ್ತಾರೆ ಎಂದು ಕೃಷ್ಣ ಪೂಜಾರಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next