ಜಾರ್ಖಂಡ್ (ರಾಮಗಡ): ಅನುಕಂಪದ ನೆಲೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ತನ್ನ ತಂದೆಯನ್ನೇ ಕೊಲೆ ಮಾಡಿದ ಘಟನೆ
ಜಾರ್ಖಂಡ್ ನ ರಾಮಗಡದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕೃಷ್ಣರಾಮ್(55) ಹತ್ಯೆಗೀಡಾದ ವ್ಯಕ್ತಿ. ಈತ ಬರ್ಕಕಾನದ ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್)ನಲ್ಲಿ ಮುಖ್ಯ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದ್ದು, ಈತನ 33 ವರ್ಷದ ನಿರುದ್ಯೋಗಿ ಮಗ ಚಾಕುವಿನಿಂದ ಕತ್ತು ಕುಯ್ದು ಹತ್ಯೆ ಮಾಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಭುದೇವ್-ಹಿಮಾನಿ ಮದುವೆ ಸುದ್ದಿ ಖಚಿತಪಡಿಸಿದ ರಾಜು ಸುಂದರಂ !
ಹತ್ಯೆ ಮಾಡಲು ಬಳಸಲಾದ ಚಾಕು ಹಾಗೂ ಮೃತ ವ್ಯಕ್ತಿಯ ಮೊಬೈಲ್ ಪೋನ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ನಲ್ಲಿ ಕಾರ್ಯನಿರ್ವಹಿಸುವವರು ತಮ್ಮ ಉದ್ಯೋಗದ ಅವಧಿಯಲ್ಲಿ ಮರಣಹೊಂದಿದರೆ, ಸಂಸ್ಥೆಯ ಸೌಲಭ್ಯದ ಅನ್ವಯ ಆತನ ಅವಲಂಬಿತ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ವ್ಯವಸ್ಥೆ ಇದ್ದು, ಇದನ್ನು ಆರೋಪಿ ದುರುಪಯೋಗಪಡಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.