Advertisement

ನಿರುದ್ಯೋಗಿಗಳಿಗೆ “ಉದ್ಯೋಗ ನಿಮಿತ್ತಂ’

04:55 PM Dec 13, 2018 | |

ಮೈಸೂರು: ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತಿರುವ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ಕೆಲಸ ಹಾಳು ಎಂದು ಟೀಕಿಸುವ ಜನರೇ ಹೆಚ್ಚು. ಆದರೆ, ಮೈಸೂರಿನ ವ್ಯಕ್ತಿಯೊಬ್ಬರು ಆರಂಭಿಸಿದ ಸಾಮಾಜಿಕ ಜಾಲ ತಾಣದ ವಾಟ್ಸ್‌ಆಫ್ ಗ್ರೂಪ್‌ವೊಂದು 250ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಮೂಲಕ, ನಿರುದ್ಯೋಗಿಗಳ ಪಾಲಿಗೆ ದಾರಿ ದೀಪವಾಗಿದೆ.

Advertisement

ಪ್ರಸ್ತುತ ನಿರುದ್ಯೋಗ ದೇಶದಲ್ಲೆಡೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ನಿರುದ್ಯೋಗ ನಿವಾರಣೆಗೆ ನಿರಂತರ ಪ್ರಯತ್ನಗಳು ನಡೆಯುತ್ತಿದ್ದರೂ ಶಾಶ್ವತ ಪರಿಹಾರವೇ ಸಿಗುತ್ತಿಲ್ಲ. ಈ ಸಮಸ್ಯೆಗೆ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಅಚ್ಯುತಾನಂದ ಬಾಬು ಆರಂಭಿಸಿರುವ ವಾಟ್ಸಾಪ್‌ ಗ್ರೂಪ್‌, ತಾತ್ಕಾಲಿಕ ಪರಿಹಾರ ನೀಡುವ ಮೂಲಕ ಒಂದಿಷ್ಟು ಮಂದಿಗೆ ಉದ್ಯೋಗ ಭಾಗ್ಯ ಕಲ್ಪಿಸಿಕೊಟ್ಟಿದೆ.

“ಉದ್ಯೋಗ ನಿಮಿತ್ತಂ’: ಎಲ್ಲಾ ಕ್ಷೇತ್ರಗಳಲ್ಲೂ ಆವರಿಸಿರುವ ನಿರುದ್ಯೋಗದ ಸಮಸ್ಯೆ ಅರಿತ ಮೈಸೂರಿನ ಟಿ.ಕೆ.ಲೇಔಟ್‌ ನಿವಾಸಿ ಅಚ್ಯುತಾನಂದ ಬಾಬು, ಉದ್ಯೋಗದ ಸಮಸ್ಯೆ ನಿವಾರಿಸುವ ಜತೆಗೆ ಸಮಾಜಕ್ಕೆ ಕೈಲಾದಷ್ಟು ಸೇವೆ ಮಾಡಬೇಕೆಂದು ಹಂಬಲಿಸುತ್ತಿದ್ದರು. ಇದೇ ಆಲೋಚನೆಯೊಂ ದಿಗೆತಮ್ಮ ಸುತ್ತಮುತ್ತಲಿರುವ ಮಂದಿಗೆ ಉದ್ಯೋಗದ ಮಾಹಿತಿ ನೀಡುವ ಸಲುವಾಗಿ “ಉದ್ಯೋಗ ನಿಮಿತ್ತಂ’ ಹೆಸರಿನ ವಾಟ್ಸಾಪ್‌ ಗ್ರೂಪ್‌ ಆರಂಭಿಸಿದ್ದಾರೆ. ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ, ನಿರು ದ್ಯೋಗಿಗಳ ಅನುಕೂಲಕ್ಕಾಗಿ ಮಾಡಿದ ಈ ಗ್ರೂಪ್‌ ಇದೀಗ 250ಕ್ಕೂ ಹೆಚ್ಚು ಯುವಕ-ಯುವತಿ ಯರಿಗೆ ಉದ್ಯೋಗ ದೊರೆಯುವಂತೆ ಮಾಡಿದೆ.

4,250 ಸದಸ್ಯರು: ಉದ್ಯೋಗ ನಿಮಿತ್ತಂ ವಾಟ್ಸಾಪ್‌ ಗ್ರೂಪ್‌ಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದೆ. ಪ್ರಾರಂಭದಲ್ಲಿ ಉದ್ಯೋಗ ನಿಮಿತ್ತಂ ಹೆಸರಿನಲ್ಲಿ ಒಂದು ವಾಟ್ಸಾಪ್‌ ಗ್ರೂಪ್‌ ಕ್ರಿಯೆಟ್‌ ಮಾಡಿದ ಅಚ್ಯುತಾನಂದ್‌, ಅದರಲ್ಲಿ ಒಂದಿಷ್ಟು ಜನರು ಹಾಗೂ ವಿವಿಧ ಕಂಪನಿಗಳ ಮಾನಸ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿಗಳನು °(ಎಚ್‌ಆರ್‌) ಸೇರಿಸಿದ್ದಾರೆ. ಇವರ ಮೂಲಕ ತಮ್ಮ ಸುತ್ತಮುತ್ತಲಿನ ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಾವಕಾಶಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಗ್ರೂಪಿನಲ್ಲಿ ತಿಳಿಯುವಂತೆ ಮಾಡುತ್ತಿದ್ದರು. ಹೀಗೆ ಒಂದು ಗ್ರೂಪ್‌ನಿಂದ ಶುರುವಾದ ಈ ಪ್ರಯಾಣ ನಂತರದ ದಿನಗಳಲ್ಲಿ ಸಾಕಷ್ಟು ಜನರಿಗೆ ತಲುಪಿದ್ದು, ಸದ್ಯ ಉದ್ಯೋಗ ನಿಮಿತ್ತಂ ಹೆಸರಿನಲ್ಲೇ 18 ಗ್ರೂಪ್‌ಗಳಿವೆ. ಈ ಎಲ್ಲಾ ಗ್ರೂಪ್‌ಗ್ಳಿಂದ ಅಂದಾಜು 4,400 ಮಂದಿ ಸದಸ್ಯರಿದ್ದು, 250ಕ್ಕೂ ಕಂಪನಿಗಳ ಎಚ್‌ಆರ್‌ ಗಳು ಗ್ರೂಪಿನಲ್ಲಿದ್ದಾರೆ.

ನೇರ ಸಂದರ್ಶನ: ಉದ್ಯೋಗ ನಿಮಿತ್ತಂ ವಾಟ್ಸಾಪ್‌ ಗ್ರೂಪ್‌ ಮೂಲಕ ಉದ್ಯೋಗಾವಕಾಶದ ಮಾಹಿತಿ ತಿಳಿದು, ನಿರುದ್ಯೋಗಿಗಳು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಹೀಗೆ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಕಂಪನಿಗಳ ಸಂದರ್ಶನ ದಲ್ಲಿ ಪಾಲ್ಗೊಂಡ 250ಕ್ಕೂ ಹೆಚ್ಚು ಜನರು ಉದ್ಯೋಗ ಪಡೆದುಕೊಂಡಿದ್ದಾರೆ. ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಉದ್ಯೋಗವಕಾಶ ಖಾಲಿ ಇರುವ ಬಗ್ಗೆ ಮಾಹಿತಿ ಒದಗಿಸುವ ವಾಟ್ಸಾಪ್‌ ಗ್ರೂಪಿನ ಬಗ್ಗೆ ಇದೇ ಗ್ರೂಪಿನ ಮೂಲಕ ಕೆಲಸ ಪಡೆದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉದ್ಯೋಗ ಪಡೆದ ಸಾಕಷ್ಟು ಜನರು ತಮಗೆ ಕೆಲಸ ಸಿಕ್ಕಿರುವ ವಿಷಯಗಳನ್ನು ಗ್ರೂಪ್‌ನ ಎಲ್ಲರೊಂದಿಗೆ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

Advertisement

ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ಆಲೋಚನೆಯೊಂದಿಗೆ ಉದ್ಯೋಗ ನಿಮಿತ್ತಂ ಗ್ರೂಪ್‌ ಆರಂಭಿಸಿದೆ. ನಾನು ಎಚ್‌.ಆರ್‌. ಹಿನ್ನೆಲೆಯಲ್ಲಿ ಇರುವುದರಿಂದ ವಿವಿಧ
ಕಂಪನಿಗಳ ಎಚ್‌ಆರ್‌ಗಳನ್ನು ಸಂಪರ್ಕಿಸಲು ಸಾಧ್ಯವಾಯಿತು. ನನ್ನ ಈ ಕೆಲಸಕ್ಕೆ ಎಲ್ಲ ರಿಂದಲೂ ಉತ್ತಮ ಸ್ಪಂದನೆ, ಸಹಕಾರ ದೊರೆಯುತ್ತಿದೆ. ಮುಂದೆಯೂ ಹೆಚ್ಚಿನ ಮಂದಿಗೆ ಇದರ ಅನುಕೂಲವಾಗಬೇಕೆಂಬ ಉದ್ದೇಶವಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸಿದರೆ ಅನುಕೂಲವಾಗಲಿದೆ. ಆಸಕ್ತರು 9902024614 ಈ ಸಂಖ್ಯೆಗೆ ಸಂಪರ್ಕಿಸಬಹುದು. 
ಅಚ್ಯುತಾನಂದ ಬಾಬು, “ಉದ್ಯೋಗ ನಿಮಿತ್ತಂ’ ಗ್ರೂಪ್‌ ಅಡ್ಮಿನ್‌

ಸಿ. ದಿನೇಶ್

Advertisement

Udayavani is now on Telegram. Click here to join our channel and stay updated with the latest news.

Next