Advertisement

ಲಭಿಸದ ಹಕ್ಕುಪತ್ರ, ಅಭಿವೃದ್ಧಿಗೊಳ್ಳದ ರಸ್ತೆ

10:52 AM Nov 24, 2022 | Team Udayavani |

ಮೂಡುಬಿದಿರೆ: ಇರುವೈಲು ಕಾಡು, ಬೆಟ್ಟ, ವನಗಳಿರುವ ಪ್ರದೇಶ. ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಜನರನ್ನು ಹದಿನೈದು ವರ್ಷಗಳಿಂದ ಕಾಡುತ್ತಿದೆ. ಶೇ. 50ರಷ್ಟು ಡೀಮ್ಡ್ ಫಾರೆಸ್ಟ್‌ ಜಾಗ ಸಮಸ್ಯೆಗಳ ಬೀಡಾಗಿದೆ. ಇಂಥ ಜಾಗದಲ್ಲಿ ಮನೆ ಕಟ್ಟಿಕುಳಿತವರಿಗೆ ಹಕ್ಕು ಪತ್ರ ನೀಡಲಾಗಿಲ್ಲ. ಹಾಗಾಗಿ ಅವರು ಇತರ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ.

Advertisement

ಪೂಪಾಡಿಕಲ್ಲು – ಹೊಸಮರಪದವು ಏಕಪಥ ರಸ್ತೆ, ತಿರುವುಗಳಿಂದಲೂ ಕೂಡಿದ್ದು ಅಪಾಯಕಾರಿಯಾಗಿದೆ. ಇರುವೈಲು ದಂಬೆದಕೋಡಿ ರಸ್ತೆಯೂ ಏಕಪಥವಾಗಿದ್ದು, ಅಭಿವೃದ್ಧಿ ಪಡಿಸಬೇಕಾಗಿದೆ. ಸರಕಾರಿ ಬೋರ್‌ವೆಲ್‌ನಿಂದ 500 ಮೀ. ವ್ಯಾಪ್ತಿಯಲ್ಲಿ ಕೃಷಿಕರು ಬೋರ್‌ವೆಲ್‌ ತೋಡಲು ಕಾನೂನಿನ ತೊಡಕಿದ್ದು, ಇದನ್ನು ನಿವಾರಿಸಬೇಕಿದೆ. ಪ.ಜಾ. ಪ.ಪಂ. ಕಾಲನಿಗೆ ಸಂಪರ್ಕ ಕಲ್ಪಿಸುವ ಮಜ್ಜಿಗುರಿ – ಬೋಲ್ಡೆ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ.

ಇರುವೈಲು ಗ್ರಾ.ಪಂ.ಸದ್ಯ ಬಾಡಿಗೆ ಕಟ್ಟಡದಲ್ಲಿದೆ, ಆದಷ್ಟು ಬೇಗನೇ ನೂತನ ಕಟ್ಟಡ ಹೊಂದಬೇಕಾಗಿದೆ. ಕೊನ್ನೆಪದವು ಪರಿಸರದಲ್ಲಿ ಪಂ.ಗೆ ಸೇರಿದ 35 ಸೆಂಟ್ಸ್‌ ಜಾಗ ಅಳತೆ ಆಗಿದೆ, ಪಹಣಿಪತ್ರ ಇನ್ನೂ ಸಿದ್ಧವಾಗಿಲ್ಲ. ಇರುವೈಲು ಸಮೀಪದ ಪುಚ್ಚಮೊಗರು ಗ್ರಾಮದಲ್ಲಿ ಸರಕಾರಿ ಜಾಗದಲ್ಲಿ ನಡೆಯುತ್ತಿರುವ ಜಲ್ಲಿಕಲ್ಲು ಕೋರೆ, ಅದರಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ.

ಇರುವೈಲು ಗ್ರಾಮದ ಬುಡದಲ್ಲೇ ಹರಿಯುವ ಫಲ್ಗುಣಿ ನದಿಗೆ ಸೂಕ್ತ ಜಾಗದಲ್ಲಿ ದೊಡ್ಡ ಅಣೆಕಟ್ಟು ಕಟ್ಟಿದರೆ ಕೃಷಿಕರಿಗೆ ಅನುಕೂಲವಾಗಲಿದೆ. 10 ವರ್ಷಗಳ ಹಿಂದೆ ಈ ಬಗ್ಗೆ ಪ್ರಸ್ತಾವವಾಗಿದ್ದು, 12 ಕೋಟಿ ರೂ. ಮಂಜೂರಾಗಿದೆ ಎಂದೂ ಹೇಳಲಾಗುತ್ತಿದೆಯಾದರೂ ಯಾವುದೇ ಪ್ರಕ್ರಿಯೆ ಮುಂದುವರಿದಂತಿಲ್ಲ. ಶತಮಾನದ ಹಿನ್ನೆಲೆ ಇರುವ ಹೊಸಬೆಟ್ಟು ಸೇವಾ ಸಹಕಾರಿ ಸಂಘದ ನಿವೇಶನದ ಆರ್‌ಟಿಸಿ ಇನ್ನಾದರೂ ಆಗಬೇಕಾಗಿದೆ. ನೂರಕ್ಕೂ ಅಧಿಕ ಬಿಪಿಎಲ್‌ ಕುಟುಂಬಗಳ ಪಡಿತರ ಚೀಟಿ ಸಮಸ್ಯೆ ಬಗೆಹರಿಸಬೇಕಾಗಿದೆ.

ನಾಳೆ ಡಿಸಿ ಗ್ರಾಮವಾಸ್ತವ್ಯ

Advertisement

ದ.ಕ. ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಅವರು ಇರುವೈಲ್‌ ಶ್ರೀ ದುರ್ಗಾ ಪರಮೇಶ್ವರೀ ದೇಗುಲದ ಪಕ್ಕದ ಸಭಾಂಗಣದಲ್ಲಿ ನ. 25ರಂದು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಇರುವೈಲು ಮಾತ್ರವಲ್ಲ ಮೂಡುಬಿದಿರೆ ತಾಲೂಕಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕಾಗಿದೆ.

ಅಣೆಕಟ್ಟು ನಿರ್ಮಾಣ ಅಗತ್ಯ

ಪುತ್ತಿಗೆ, ಪಾಲಡ್ಕದಲ್ಲಿ ಹಾದುಹೋಗಲಿ ರುವ ವಿದ್ಯುತ್‌ ಲೈನ್‌ ಬಗ್ಗೆ ಜನರ ವಿರೋಧವಿದೆ. ನಿಡ್ಡೋಡಿ ಬಂಗಾಲ ಪದವಿನಲ್ಲಿ ಈ ಬಗ್ಗೆ ಸರ್ವೇಗೆ ಬಂದವರು ಮತ್ತು ಊರವರ ನಡುವೆ ಮುಖಾಮುಖೀ ಚರ್ಚೆ ನಡೆಯುತ್ತಲೇ ಇದೆ. ಪುತ್ತಿಗೆ ಆನಡ್ಕ ಪರಿಸರದ ತೋಡಿನಲ್ಲಿ ತುಂಬಿರುವ ನಾಲ್ಕಡಿ ಎತ್ತರದ ಹೂಳನ್ನು ತೆಗೆದು ಸೂಕ್ತ ಜಾಗದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದರೆ ಪರಿಸರದ ಜನರ ನೀರಿನ ಸಮಸ್ಯೆ ನೀಗಲಿದೆ, ವಿಶೇಷವಾಗಿ ಕೃಷಿ ಭೂಮಿಗೆ ಜಲನಿಧಿ ಒದಗಿಬರಲಿದೆ. ತೆಂಕಮಿಜಾರು ಗ್ರಾ.ಪಂ. ಕಚೇರಿ ಬಳಿಯೇ ಮನೆ ನಿವೇಶನದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿ ದಶಕಗಳೇ ಸರಿದಿದ್ದು ಇದು ಕಾನೂನುಬಾಹಿರ ಎಂದು ಜುಲೈಯಲ್ಲಿ ನಡೆದಿದ್ದ ಗ್ರಾಮಸಭೆಯಲ್ಲಿ ಪಿಡಿಒ ಸ್ಪಷ್ಟ ಪಡಿಸಿದ್ದರೂ ಇನ್ನೂ ಕ್ರಮ ಜರಗಿಸಿದಂತಿಲ್ಲ. ನೀರ್ಕೆರೆ, ಪೂಮಾವರ ಕಟ್ಟ ಗಳಿಗೆ ಕಾಯಕಲ್ಪ, ನೀರ್ಕೆರೆ ಸೇತುವೆ ಪುನರ್‌ ನಿರ್ಮಾಣ, ಸರಕಾರಿ ಆಸ್ಪತ್ರೆ, ಪ.ಪೂ.ಕಾಲೇಜು, ಬ್ಯಾಂಕ್‌ ಶಾಖೆ, ಎಟಿಎಂ ಇಲ್ಲಿನ ಕೆಲವು ಬೇಡಿಕೆಗಳು. ಗ್ರಾಮದವರನ್ನೇ ಗ್ರಾಮ ಸಹಾಯಕರನ್ನಾಗಿ ನೇಮಿಸಬೇಕು ಎಂದು ಈ ಹಿಂದೆ ತಹಶೀಲ್ದಾರರ ಸಭೆಯಲ್ಲಿ ನಿರ್ಣಯವಾಗಿರುವುದು ಮೂಲೆಗುಂಪಾಗಿ ನ.9ರಂದು ದೂರದ ಬಂಟ್ವಾಳದಿಂದ ನೇಮಕಾತಿ ನಡೆದಿದೆ. ಜಿಲ್ಲಾಧಿಕಾರಿಯವರಿಗೆ ಪಂ. ಅಧ್ಯಕ್ಷರು ಬರೆದ ಪತ್ರಕ್ಕೂ ಬೆಲೆ ಇಲ್ಲದಂತಾಗಿದೆ. ಕಲ್ಲಬೆಟ್ಟು ಗ್ರಾಮದ ಬಂಗಾಲಪದ ವಿನಲ್ಲಿ ಶ್ಮಶಾನವಿಲ್ಲದೆ ಸಮಸ್ಯೆ ಬಿಗಡಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next