ಲಕ್ನೋ: ಲಾಕ್‌ಡೌನ್‌ನಿಂದಾಗಿ ಈಗಾಗಲೇ ಆನ್‌ಲೈನ್ ಮದುವೆ ಆಗಿರುವ ಸುದ್ದಿ ಬಂದಿದೆ. ಅದೆಷ್ಟೋ ಸರಳ ವಿವಾಹಗಳು ನಡೆದಿರುವುದು ಗೊತ್ತೇ ಇದೆ. ಈಗ ಕಾನ್ಪುರದ ಹುಡುಗಿಯೊಬ್ಬಳು, ಸುಮಾರು 80 ಕಿ.ಮೀ.ದೂರ ನಡೆಯುವ ಮೂಲಕ ಮದುವೆಯಾಗಿರುವ ಸುದ್ದಿ ಬಂದಿದೆ.
ಹೌದು ಕಾನ್ಪುರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಕನೌಜ್‌ಗೆ ಏಕಾಂಗಿಯಾಗಿಯೇ ನಡೆದು ಬಂದ ಆ ಯುವತಿ, ಈ ಹಿಂದೆ ನಿಶ್ಚಯಗೊಂಡಿದ್ದ ಹುಡುಗನನ್ನು ಮದುವೆಯಾಗಿದ್ದಾಳೆ ಎಂಬುದೇ ಈ ಸುದ್ದಿಯ ವಿಶೇಷ.
ಮೇ.4ರಂದು 20 ವರ್ಷದ ಗೋಲ್ಡಿ ಮತ್ತು ವೀರೇಂದ್ರ ಕುಮಾರ್ ಅವರ ಮದುವೆ ನಡೆಯಬೇಕಿತ್ತು. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರ ವಿವಾಹವನ್ನು ಮುಂದೂಡಲಾಗಿತ್ತು. ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದ ಬಳಿಕ ಎಲ್ಲಾ ಸಾರಿಗೆ ಸೇವೆಗಳು ಸ್ಥಗಿತಗೊಂಡಿದ್ದವು. ಈ ಮಧ್ಯೆ ಗೋಲ್ಡಿ ಹಾಗೂ ವೀರೇಂದ್ರ ಕುಮಾರ್ ಫೋನ್‌ನಲ್ಲೇ ನಿರಂತರ ಸಂಪರ್ಕ ದಲ್ಲಿದ್ದರು. ಇಬ್ಬರ ಮನೆಯ ಪೋಷಕರು ಅವರ ಮದುವೆಯನ್ನು 2ನೇ ಬಾರಿಗೂ ಮುಂದೂಡಿದ ಬಳಿಕ ಗೋಲ್ಡಿ, ವೀರೇಂದ್ರ ಕುಮಾರ್ ಅಸಮಾಧಾನಗೊಂಡಿದ್ದರು.
ಕಳೆದ ಬುಧವಾರ ಮಧ್ಯಾಹ್ನ ಕಾನ್ಪುರದ ಲಕ್ಷ್ಮಣಪುರ ತಿಲಕ್ ಗ್ರಾಮದಲಿದ್ದ ಗೋಲ್ಡಿ, ತುಂಬಾ ದೂರದಲ್ಲಿರುವ ಕನೌಜ್‌ನ ಬೈಸಾಪುರದ ಬಳಿ ಇರುವ ವೀರೇಂದ್ರಕುಮಾರ್ ಅವರ ಹಳ್ಳಿ ಮನೆಗೆ ಹೋಗಲು ನಿರ್ಧರಿಸಿದ್ದಾಳೆ. ಲಾಕ್‌ಡೌನ್ ಮಧ್ಯೆಯೂ ಗೋಲ್ಡಿ ಆಗಮಿಸಿದ್ದರಿಂದ ವೀರೇಂದ್ರ ಅವರ ಕುಟುಂಬ ದೇವಾಲಯ ದಲ್ಲಿ ಅವರಿಬ್ಬರ ವಿವಾಹ ನಡೆಸಲು ತೀರ್ಮಾನಿಸಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ವಧು, ವರ ಇಬ್ಬರಿಗೂ ಮಾಸ್ಕ್ ಹಾಕಿಸಿ ಮದುವೆ ಮಾಡಿಸಲಾಗಿದೆ.