Advertisement

ವಾರದ ಬಳಿಕ ಪಾತಕಿ ರವಿ ಪೂಜಾರಿ ಭಾರತಕ್ಕೆ ಗಡೀಪಾರು?

01:21 AM May 19, 2019 | Sriram |

ಮಂಗಳೂರು: ನಕಲಿ ಪಾಸ್‌ಪೋರ್ಟ್‌ ಹೊಂದಿದ ಆರೋಪದಡಿ ಸೆನಗಲ್‌ನಲ್ಲಿ ಮೂರೂವರೆ ತಿಂಗಳ ಹಿಂದೆ ಬಂಧನಕ್ಕೊಳಗಾದ ಕರಾವಳಿ ಮೂಲದ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಗಡೀಪಾರು ಮಾಡುವ ಕಾನೂನು ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ವಾರದ ಬಳಿಕ ಆತನನ್ನು ದೇಶಕ್ಕೆ ಕರೆ ತರುವ ಸಾಧ್ಯತೆಯಿದೆ.

Advertisement

ಇದರೊಂದಿಗೆ ಎರಡೂವರೆ ದಶಕಗಳಿಂದ ಭೂಗತ ಪಾತಕಿಯಾಗಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಹಲವೆಡೆ ಉದ್ಯಮಿಗಳು- ಶ್ರೀಮಂತರಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದ ರವಿ ಪೂಜಾರಿಯ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಭಾರತೀಯ ಪೊಲೀಸರು ಕೊನೆಗೂ ಯಶಸ್ಸು ಗಳಿಸಿದಂತಾಗಿದೆ. ಸದ್ಯಕ್ಕೆ ಆತನನ್ನು ಬಿಗಿ ಭದ್ರತೆಯಲ್ಲಿ ಅಲ್ಲಿನ ಜೈಲಿನಲ್ಲಿರಿಸಲಾಗಿದೆ.

“ಉದಯವಾಣಿ’ಗೆ ಉನ್ನತ ಮೂಲಗಳು ಖಚಿತಪಡಿಸಿರುವಂತೆ, ರವಿ ಪೂಜಾರಿ ಗಡೀಪಾರು ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿವೆ. ಈ ಕುರಿತ ವಿಚಾರಣೆ ಸೆನಗಲ್‌ ನ್ಯಾಯಾಲಯದಲ್ಲಿ ಮೇ 15ಕ್ಕೆ ನಿಗದಿಯಾಗಿತ್ತು. ಮುಂಬಯಿಯಿಂದ ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳ ತಂಡವೊಂದು ಸೆನಗಲ್‌ಗೆ ತೆರಳಿದ್ದು, ರವಿ ಪೂಜಾರಿ ಮೇಲಿರುವ ಅಪರಾಧ ಕೃತ್ಯಗಳ ದಾಖಲೆಗಳನ್ನು ಡಕಾರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಮೂಲಕ ಸೆನಗಲ್‌ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರೊಂದಿಗೆ ಸೆನಗಲ್‌ನಲ್ಲಿ ಆ್ಯಂಟನಿ ಫೆರ್ನಾಂಡಿಸ್‌ ಹೆಸರಿನಲ್ಲಿ ಬಂಧನಕ್ಕೊಳಗಾದ ವ್ಯಕ್ತಿಯೇ ರವಿ ಪೂಜಾರಿ ಎಂದು ನ್ಯಾಯಾಲಯಕ್ಕೆ ನಮ್ಮ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಶ್ರೀಲಂಕಾದಿಂದಾಗಿ ಗಡೀಪಾರು ವಿಳಂಬ
ಶ್ರೀಲಂಕಾ ದೇಶದ ನಕಲಿ ಪಾಸ್‌ಪೋರ್ಟ್‌ನಲ್ಲಿ ರವಿ ಪೂಜಾರಿ ಸಿಕ್ಕಿಬಿದ್ದಿರುವ ಕಾರಣ ಆ ಬಗ್ಗೆ ಶ್ರೀಲಂಕಾವೇ ಖಚಿತಪಡಿಸಬೇಕಿದೆ. ಆದರೆ ಸೆನಗಲ್‌ನಲ್ಲಿ ಶ್ರೀಲಂಕಾ ರಾಯಭಾರಿ ಕಚೇರಿಯಿಲ್ಲ. ಹೀಗಾಗಿ ಸೆನಗಲ್‌ ಅಧಿಕಾರಿಗಳು ಶ್ರೀಲಂಕಾವನ್ನು ಕೋರಿದ್ದಾರೆ. ಸದ್ಯ ಅಲ್ಲಿನ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಉತ್ತರ ವಿಳಂಬವಾಗಿದ್ದು ಗಡೀಪಾರು ಪ್ರಕ್ರಿಯೆಗೂ ಸ್ವಲ್ಪ ಮಟ್ಟಿನ ತಡೆಯಾಗಿದೆ.

ಕೋರ್ಟ್‌ಗೆ ಮತ್ತೆ ಸುಳ್ಳು ದೂರು
ಈ ಮಧ್ಯೆ ರವಿ ಪೂಜಾರಿ ತನ್ನನ್ನು ಭಾರತಕ್ಕೆ ಗಡೀಪಾರು ಮಾಡಿದರೆ ಅಲ್ಲಿ ಜೀವಕ್ಕೆ ಅಪಾಯವಿದ್ದು, ಹಸ್ತಾಂತರಿಸದಂತೆ ಮನವಿ ಮಾಡಿದ್ದಾನೆ ಎನ್ನಲಾಗಿದೆ. ಅದರ‌ ವಿಚಾರಣೆಗೆ ನ್ಯಾಯಾಲಯ ಮತ್ತೆ ಒಂದು ವಾರ ಕಾಲಾವಕಾಶ ನೀಡಿದೆ.

Advertisement

ಆಸ್ತಿಪಾಸ್ತಿ ಮುಟ್ಟುಗೋಲು
ಹಲವು ವರ್ಷಗಳಿಂದ ಬರ್ಕಿನೊ ಫಾಸೊ, ಸೆನಗಲ್‌ ಮತ್ತು ಐವರಿ ಕೋಸ್ಟ್‌ನಂತಹ ದೇಶಗಳಲ್ಲಿ ನೆಲೆ ನಿಂತಿದ್ದ ರವಿ ಪೂಜಾರಿ ಹೊಟೇಲ್‌ ಸಹಿತ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದ. ಬರ್ಕಿನೊ ಫಾಸೊದಲ್ಲಿ”ನಮಸ್ತೆ ಇಂಡಿಯಾ’ ಮತ್ತು ಸೆನಗಲ್‌ನಲ್ಲಿ “ಮಹಾರಾಜ’ ಎಂಬಹೊಟೇಲ್‌ ನಡೆಸುತ್ತಿದ್ದ. ರವಿ ಪೂಜಾರಿ ಪಾಲುದಾರಿಕೆಯ ಎಲ್ಲ ಉದ್ಯಮ ಸ್ಥಗಿತಗೊಳಿಸಿರುವ ಪೊಲೀಸರು ಆತನ ಬ್ಯಾಂಕ್‌ ಖಾತೆ ಮತ್ತು ಆಸ್ತಿ ಪಾಸ್ತಿ ಕೂಡ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಮುಂಬಯಿ ಪೊಲೀಸರಿಗೆ ಹಸ್ತಾಂತರ
ರವಿ ಪೂಜಾರಿಯನ್ನು ಭಾರತಕ್ಕೆ ಕರೆ ತರುತ್ತಿದ್ದಂತೆ ಮೊದಲು ಮುಂಬಯಿ ಪೊಲೀಸರಿಗೆ ಹಸ್ತಾಂತರ ಗೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಆತ ಮುಂಬಯಿ ಭೂಗತ ಲೋಕಕ್ಕೆ ಮೊದಲು ಪ್ರವೇಶ ಪಡೆದು ಅಲ್ಲಿಂದ ವಿದೇಶಕ್ಕೆ ಪರಾರಿಯಾಗಿದ್ದ. ಮುಂಬಯಿ ಸೇರಿದಂತೆ ಮಹಾರಾಷ್ಟ್ರದಲ್ಲಿ ಆತನ ಮೇಲೆ ಕೊಲೆ ಸುಪಾರಿ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣಗಳಿವೆ. ಆ ಬಳಿಕವಷ್ಟೇ ಕರ್ನಾಟಕದ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಯಿದೆ. ಮಂಗಳೂರು ಸೇರಿದಂತೆ, ರಾಜ್ಯ ದಲ್ಲಿಯೂ 30ಕ್ಕೂ ಹೆಚ್ಚು ಕ್ರಿಮಿನಲ್‌ ಆರೋಪದ ಪ್ರಕರಣಗಳಿವೆ.

– ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next