ಹೊಸದಿಲ್ಲಿ: ಕೋಲ್ಕತಾದಲ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾಗಿರುವ ದೇಶದ ಮೊತ್ತಮೊದಲ ಮೆಟ್ರೋ ರೈಲು ಮಾರ್ಗದ ಸುರಂಗ ಕಾಮಗಾರಿ ಮುಕ್ತಾಯಗೊಂಡಿದ್ದು, ಸದ್ಯದಲ್ಲೇ ಕೋಲ್ಕತಾ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಎರಡು ಬಾರಿ ಗಡುವು ವಿಸ್ತರಣೆಯಾದ ಬಳಿಕ ಮೂರನೇ ಪ್ರಯತ್ನದಲ್ಲಿ ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ತಿ ಗೊಳಿಸಲಾಗಿದೆ. ಈ ಹಿಂದೆ 2012, 2015ರ ಗಡುವನ್ನು ಮೀರಿದ್ದ ರಿಂದ ಈ ವರ್ಷ ಡಿಸೆಂಬರ್‌ನೊಳಗೆ ಕಾಮಗಾರಿ ಮುಗಿಸಬೇಕೆಂಬ ಹೊಸ ಗಡುವನ್ನು ಹಾಕಿಕೊಳ್ಳಲಾಗಿತ್ತು.
ಈ ಸುರಂಗ ಮಾರ್ಗವು ಕೋಲ್ಕತಾ ಮೆಟ್ರೋ ಮಾರ್ಗದ ಹೌರಾ ಹಾಗೂ ಕೋಲ್ಕತಾ ನಗರ ಮೆಟ್ರೋ ನಿಲ್ದಾಣಗಳನ್ನು ಬೆಸೆಯಲಿದೆ. ಎಲ್ಲಿಯೂ ನೀರು ಒಳಗೆ ಬಾರದಂತೆ ಈ ಸುರಂಗವನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿಯೇ ವಿಶೇಷ ಹೈಡ್ರೋಹಾಲಿಕ್ ಗ್ಯಾಸ್ಕೆಟ್‌ಗಳನ್ನು ಬಳಕೆ ಮಾಡಲಾಗಿದೆ. ಅಫಾನ್ಸ್ ಟ್ರಾನ್ಸ್‌ಟನೆಲ್ಸ್‌ಟ್ರಾಯ್ ಹಾಗೂ ಕೋಲ್ಕತಾ ಮೆಟ್ರೋ ರೈಲು ನಿಗಮಗಳು ಜಂಟಿಯಾಗಿ ಈ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದು, ಸುರಂಗ ಕೊರೆಯುವಿಕೆಗಾಗಿ “ರಚನಾ’ ಎಂಬ ಜರ್ಮನಿ ಮೂಲದ ದೈತ್ಯ ಟನೆಲ್-ಬೋರಿಂಗ್ ಮೆಷಿನನ್ನು (ಟಿಬಿಎಂ) ಬಳಸಿಕೊಳ್ಳಲಾಗಿತ್ತು.
16.6 ಕಿ.ಮೀ. ಹೌರಾ ಮತ್ತು ಕೋಲ್ಕತಾ ನಿಲ್ದಾಣಗಳ ನಡುವಿನ ದೂರ
5.8 ಮೀ. ಸುರಂಗದ ವೃತ್ತಾಕಾರ
33 ಮೀ.ನೆಲ -ಸುರಂಗದ ನಡುವಿನ ಅಂತರ
502 ಮೀ. ನದಿಯೊಳಗೆ ನಿರ್ಮಿಸಲಾಗಿರುವ ಸುರಂಗದ ಉದ್ದ
1000+ಕಾರ್ಮಿಕರಿಂದ ಕೆಲಸ
8,500 ಕೋಟಿ ರೂ. ಈ ಯೋಜನೆಯ ವೆಚ್ಚ