Advertisement

ಸಾಗರದೊಳಗಿನ ತೆಂಗಿನಕಾಯಿ

12:30 AM Feb 28, 2019 | |

ಹಿಂದೂ ಮಹಾಸಾಗರದ ಆಳದಲ್ಲಿ ಕೈಗೆ ಸಿಕ್ಕಿದ ಇದರ ಗಿಡಗಳನ್ನು ಹಡಗುಗಳ ನಾವಿಕರು ಕಂಡು “ನೀರಿನೊಳಗಿನ ತೆಂಗಿನಕಾಯಿ’ ಅಂದರೆ “ಕೋಕೊ ಡಿ ಮರ್‌’ ಎಂದು ಕರೆದರು.

Advertisement

ಸಸ್ಯ ಪ್ರಪಂಚದಲ್ಲಿ ಇಷ್ಟು ದೊಡ್ಡ ಬೀಜ ಬೇರೊಂದಿಲ್ಲ. ಸಾಮಾನ್ಯವಾಗಿ ಒಂದು ಬೀಜ ಹದಿನೇಳರಿಂದ ಮೂವತ್ತು ಕಿಲೋ ತನಕ ತೂಗುವುದಾದರೆ ಅಪರೂಪವಾಗಿ ದಾಖಲೆ ಮಾಡಿದ ಒಂದು ಬೀಜ 42 ಕಿಲೋ ತೂಕವಾಗಿದ್ದೂ ಉಂಟು. ಇದು ತೆಂಗಿನ ಮರದ ಜಾತಿಗೆ ಸೇರಿದ “ಕೋಕೊ ಡಿ ಮರ್‌’ ಎಂಬ ಮರದ ಬೀಜ. ಹೊರಭಾಗದಲ್ಲಿ ತೆಂಗಿನಕಾಯಿಯ ಹಾಗೆ ಕಾಣುತ್ತದೆ. ಸಿಪ್ಪೆಯನ್ನು ಸುಲಿದರೆ ಒಳಗೆ ವಿಚಿತ್ರ ಆಕೃತಿಯಲ್ಲಿ ಎರಡಾಗಿ ಜೋಡಿಕೊಂಡ ಅಗಾಧ ಗಾತ್ರದ ಬೀಜವಿದೆ. ಹೆಚ್ಚಾಗಿ ಎರಡಾಗಿ ಸೇರಿದ ಒಂದೇ ಬೀಜ ಒಳಗಿರುವುದಾದರೂ ಕೆಲವೊಮ್ಮೆ ನಾಲ್ಕು ಬೀಜಗಳು ಜೋಡಿಕೊಂಡ ಆಕೃತಿಯೂ ಇರುವುದುಂಟು.

ಇದಿರುವುದು ಎಲ್ಲಿ?
ಸೆಶಲ್ಸ್‌ ದ್ವೀಪ ಸಮುದಾಯದ ಪ್ರಸ್ಲಿನ್‌ ಮತ್ತು ಕ್ಯುರಿಯನ್‌ ದ್ವೀಪಗಳಲ್ಲಿ ಕೋಕೊ ಡಿ ಮರ್‌ ಮರಗಳಿವೆ. ಸಸ್ಯ ಶಾಸ್ತ್ರೀಯವಾಗಿ ಲೊಡೊಸೈ ಮಾಲ್ಡಿವಿಕಾ ಎಂದು ಹೆಸರಿರುವ ಈ ಮರ ಗರಿಷ್ಠ ಮೂವತ್ತು ಮೀಟರ್‌ ಎತ್ತರ ಬೆಳೆಯುತ್ತದೆ. ಅದರ ಗರಿಗಳು ಐದು ಮೀಟರ್‌ ಉದ್ದವಿರುತ್ತವೆ. ಹನ್ನೊಂದನೆಯ ವರ್ಷದಲ್ಲಿ ಮರ ಹೂ ಬಿಡುತ್ತದೆ. 

ಈ ವಿಶಿಷ್ಟ ಬೀಜ ನೆಲದಲ್ಲಿ ಹುಟ್ಟುವುದಿಲ್ಲ. ಕಾಯಿಗಳು ಸಮುದ್ರವನ್ನು ಸೇರಿದಾಗ ಭಾರ ಮತ್ತು ಸಾಂದ್ರತೆಯ ಕಾರಣದಿಂದ ತೇಲದೆ ಮುಳುಗುತ್ತವೆ. ನೀರಿನಾಳದಲ್ಲಿ ಸಿಪ್ಪೆಗಳು ಕೊಳೆತು ಬೀಜವು ಮೊಳಕೆಯೊಡೆಯುತ್ತದೆ. ಹಿಂದೂ ಮಹಾಸಾಗರದ ಆಳದಲ್ಲಿ ಕೈಗೆ ಸಿಕ್ಕಿದ ಇದರ ಗಿಡಗಳನ್ನು ಹಡಗುಗಳ ನಾವಿಕರು ಕಂಡು “ನೀರಿನೊಳಗಿನ ತೆಂಗಿನಕಾಯಿ’, ಅಂದರೆ “ಕೋಕೊ ಡಿ ಮರ್‌’ ಎಂದು ಕರೆದರು.

ಅದೃಷ್ಟದ ಮರವೂ ಹೌದು
ಕೋಕೊ ಡಿ ಮರ್‌ ಆಹಾರವಾಗಿ ನಿಷೇಧಿತವಾಗಿದ್ದರೂ ಕಳ್ಳಸಾಗಣೆಯ ಮೂಲಕ ವಿದೇಶಗಳಿಗೆ ಹೋಗಿ ಒಂದೊಂದು ಬೀಜವೂ ಲಕ್ಷಾಂತರ ಹಣ ಗಳಿಸುತ್ತದೆ. ಇದನ್ನು ಆಭರಣದಂತೆ ಕುತ್ತಿಗೆಗೆ ಕಟ್ಟಿಕೊಂಡರೆ ಅದೃಷ್ಟ ಖುಲಾಯಿಸುತ್ತದೆಂಬ ನಂಬಿಕೆಯಿದೆ. ಧನಿಕರು ಸಿರಿತನ ಹೆಚ್ಚಲೆಂದು ಹಣದ ತಿಜೋರಿಗಳಲ್ಲಿಡುತ್ತಾರೆ. ಅಂಥವರಲ್ಲಿ ರೋಮನ್‌ ಚಕ್ರವರ್ತಿ ಎರಡನೆಯ ರುಡಾಲ್ಫ್ ಕೂಡ ಒಬ್ಬ. ಯುನೆಸ್ಕೋ ರಕ್ಷಿಸಲೇಬೇಕಾದ ವಿಶ್ವ ಪರಂಪರೆಯ ಸಸ್ಯವೆಂದು ಕೋಕೊ ಡಿ ಮರ್‌ ಮರವನ್ನು ಗುರುತಿಸಿದ ಕಾರಣ ಅದರ ಬೀಜಗಳನ್ನು ಬೇರೆ ದೇಶಗಳಿಗೆ ಒಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂತಹ ಅಪರಾಧವೆಸಗುವವರಿಗೆ ಐದು ಸಾವಿರ ಡಾಲರ್‌ ದಂಡ ಮತ್ತು ಐದು ವರ್ಷ ಶಿಕ್ಷೆ ವಿಧಿಸಲಾಗುತ್ತಿದೆ. ಆದರೂ ಈ ಅದ್ಭುತ ಬೀಜದ ವ್ಯಾಮೋಹ ಜನರನ್ನು ಬಿಟ್ಟಿಲ್ಲ.

Advertisement

ಗಂಡು ಹೆಣ್ಣು ಸಸ್ಯಗಳು
ಇದರಲ್ಲಿ ಹೆಣ್ಣು ಮತ್ತು ಗಂಡು ಎಂಬ ಎರಡು ಜಾತಿಗಳಿವೆ. ಗಂಡು ಮರ ಹೂ ಮಾತ್ರ ಬಿಡುತ್ತದೆ. ಹೆಣ್ಣು ಮರದಲ್ಲಿ ಕಾಯಿಗಳಾಗುತ್ತವೆ. ಮಳೆ, ಚಂಡಮಾರುತ, ಸಿಡಿಲು ಮಿಂಚುಗಳ ಮೂಲಕ ಗಂಡುಹೂವಿನ ಪರಾಗಕಣಗಳು ಹೆಣ್ಣು ಹೂವಿನಲ್ಲಿ ಸೇರಿ ಕಾಯಿಗಳಾಗುವಂತೆ ನಿಸರ್ಗ ನಿಯಮವನ್ನು ರೂಪಿಸಿದೆ. ಹೂ ಬಿಟ್ಟು ಮೂರು ವರ್ಷಗಳ ತನಕ ಕಾಯಿ ಬೆಳೆಯಲು ಕಾಯಬೇಕು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next