ಯಳಂದೂರು: ಶಿಕ್ಷಕರು ಮಕ್ಕಳಿಗೆ ನಾಡಗೀತೆ ನಂತರ ಪ್ರತಿನಿತ್ಯ ಸಂವಿಧಾನ ಪೀಠಿಕೆಯನ್ನು ಬೋಧಿಸಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಇದರ ಅರ್ಥ ತಿಳಿದುಕೊಳ್ಳುವ ಬಗ್ಗೆ ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರಶ್ನೆ ಕೇಳಬಹುದು ಹಾಗಾಗಿ ಶಿಕ್ಷಕರು ಸಂವಿಧಾನದ ಪೀಠಿಕೆ ಬಗ್ಗೆ ಜ್ಞಾನ ಮೂಡಿಸಿಕೊಳ್ಳಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೇ.50 ಸಾಕ್ಷರತೆ: ಕಾನೂನಿನ ಬಗ್ಗೆ ಅರಿವು ಪಾಲನೆ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ. ಆದರೆ ಶೇ.99 ರಷ್ಟು ಜನರಿಗೆ ಕಾನೂನಿನ ಪಾಲನೆ ಬಗ್ಗೆ ಜ್ಞಾನವೇ ಇಲ್ಲ. ಭಾರತವು ಸಂವಿಧಾನ ಅಳವಡಿಸಿಕೊಂಡ 70 ವರ್ಷಗಳಲ್ಲಿ ಶೇ.50 ರಷ್ಟು ಸಾಕ್ಷರತೆ, ಅಭಿವೃದ್ಧಿಯನ್ನು ಕಂಡಿದೆ ಎಂದರು.
ವಿಶ್ವ ಪ್ರಬಲ ದೇಶವಾಗಲಿರುವ ಭಾರತ: ಮುಂದಿನ 20 ವರ್ಷಗಳಲ್ಲಿ ಶೇ.100 ರಷ್ಟು ಸಾಧನೆ ಮಾಡುವ ಮೂಲಕ ಭಾರತ ವಿಶ್ವದ ಪ್ರಬಲ ರಾಷ್ಟ್ರವಾಗಲಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ ಸಂವಿಧಾನ ಅಳವಡಿಸಿಕೊಂಡ ನಂತರ ನಮ್ಮ ಸಾಧನೆಯಲ್ಲಿ ಗಣನೀಯ ಏರಿಕೆಯಾಗಿದೆ. ಗಣತಂತ್ರ ದಿನವನ್ನು ಸಂವಿಧಾನ ದಿನ ಎಂದು ಆಚರಿಸಬೇಕು. ಇದರ ಆಶಯಗಳು ಈಡೇರಬೇಕು ಇಲ್ಲದಿದ್ದರೆ ಯಾರಿಗೂ ಉಳಿಗಾಲ ವಿಲ್ಲ ಇದಕ್ಕೆ ಅವಿರತ ಶ್ರಮ ಹಾಕಬೇಕು ಎಂದು ತಿಳಿಸಿದರು.
ಸಂವಿಧಾನ ನೀತಿ ಗ್ರಂಥವಿದ್ದಂತೆ: ಮುಖ್ಯ ಭಾಷಣಕಾರ ಡಿ.ಮಹೇವಕುಮಾರ್ ಮಾತನಾಡಿ, ಸಂವಿಧಾನ ಒಂದು ಮೌಲ್ಯ ಹಾಗೂ ನೀತಿ ಗ್ರಂಥವಾಗಿದೆ. ಇದರ ಪಾಲನೆ ಮಾಡಬೇಕು. ಸಂವಿಧಾನ ಚಾಚುತಪ್ಪದೆ ಜಾರಿಯಾದಲ್ಲಿ ದೇಶ ಇನ್ನಷ್ಟು ಬಲಿಷ್ಠವಾಗಲಿದೆ. ಮನುವಾದಿ ಧೋರಣೆ ಈ ದೇಶಕ್ಕೆ ಒಗ್ಗುವುದಿಲ್ಲ. ಸಂವಿಧಾನದ ಆಶಯಗಳಿಗೆ ಚ್ಯುತಿ ಬಂದರೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು. ಇದಕ್ಕೂ ಮುಂಚೆ ತಹಶೀಲ್ದಾರ್ ಮಹೇಶ್ ಧ್ವಜಾರೋಹಣ ನಡೆಸಿದರು. ಶಾಲಾ ಮಕ್ಕಳು ಪಥಸಂಚಲನ ನಡೆಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಜಿಪಂನ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿ, ತಾಪಂ ಅಧ್ಯಕ್ಷ ನಿರಂಜನ್, ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಮಲ್ಲಾಜಮ್ಮ, ಪಲ್ಲವಿ, ಪದ್ಮಾವತಿ, ಸಿದ್ದರಾಜು, ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಂಜು, ಮಹಾದೇವನಾಯಕ, ಸುಶೀಲಾ, ತಹಶೀಲ್ದಾರ್ ಜೆ.ಮಹೇಶ್ ಇಒ ಬಿ.ಎಸ್.ರಾಜು, ಬಿಇಒ ವಿ.ತಿರುಮಲಾಚಾರಿ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.