ಹೊಸದಿಲ್ಲಿ: ಮುಂಬಯಿ ದಾಳಿಯ ಸಂಚುಕೋರ, ಉಗ್ರ ಸಂಘಟನೆ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಪಾಕಿಸ್ಥಾನ ಕೊನೆಗೂ ಕ್ರಮ ಕೈಗೊಂಡಿದೆ. ಜಾಗತಿಕ ಒತ್ತಡಕ್ಕೆ ಮಣಿದು ಈತನನ್ನು “ಉಗ್ರ’ ಎಂದು ಪಾಕ್ ಘೋಷಿಸಿದೆ.
ವಿಶ್ವಸಂಸ್ಥೆಯು ಉಗ್ರರು ಎಂದು ಘೋಷಿಸಿದ ಎಲ್ಲ ವ್ಯಕ್ತಿ ಮತ್ತು ಸಂಘಟನೆಗಳನ್ನೂ ಒಳ ಗೊಳ್ಳುವ ಭಯೋತ್ಪಾದನೆ ನಿಗ್ರಹ ಕಾಯ್ದೆ (ಎಟಿಎ) 1997ರ ಅಡಿಯಲ್ಲಿ ತರುವ ಕಾನೂನು ತಿದ್ದುಪಡಿಗೆ ಪಾಕ್ ಅಧ್ಯಕ್ಷ ಮಮೂ°ನ್ ಹುಸೇನ್ ಸಹಿ ಹಾಕಿದ್ದಾರೆ. ಇದರಿಂದಾಗಿ ಲಷ್ಕರ್-ಎ- ತಯ್ಯಬಾ, ಜಮಾತ್ ಉದ್ ದಾವಾ, ಹರ್ಕತ್ ಉಲ್ ಮುಜಾಹಿದೀನ್‌ನಂತಹ ಸಂಘಟನೆಗಳಿಗೆ ಪಾಕ್ ನಿಷೇಧ ಹೇರಿದಂತಾಗಿದೆ. ಹಫೀಜ್‌ಗೆ ವಿಶ್ವಸಂಸ್ಥೆ ಈಗಾಗಲೇ ನಿಷೇಧ ಹೇರಿದೆ.
ಪ್ಯಾರಿಸ್ ಸಭೆಗೆ ಹೆದರಿ ಕ್ರಮ: ಪ್ಯಾರಿಸ್‌ನಲ್ಲಿ ನಡೆಯಲಿರುವ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್)ಗೂ ಮುನ್ನ ಪಾಕ್ ಈ ಕ್ರಮ ಕೈಗೊಂಡಿದೆ. ಈ ಸಭೆಯಲ್ಲಿ ಪಾಕಿಸ್ಥಾನವನ್ನು ಅಮೆರಿಕ ಒತ್ತಡದ ಮೇರೆಗೆ ನಿಷೇಧಿತ ಪಟ್ಟಿಗೆ ಸೇರಿಸಬಹುದು ಎಂದು ಹೆದರಿ ಈ ನಿರ್ಧಾರ ತಳೆದಿದೆ ಎನ್ನಲಾಗಿದೆ. ನಿಷೇಧಿತ ಪಟ್ಟಿಗೆ ಸೇರಿಸಿದರೆ ಅಂತಾರಾಷ್ಟ್ರೀಯ ವಹಿವಾಟು ನಡೆಸುವುದು ಪಾಕಿಸ್ಥಾನಕ್ಕೆ ವೆಚ್ಚ ದಾಯಕವಾಗುತ್ತದೆ. 2012ರಲ್ಲೂ ಮೂರು ವರ್ಷಗಳವರೆಗೆ ಪಾಕಿಸ್ಥಾನವನ್ನು ಈ ಪಟ್ಟಿಗೆ ಸೇರಿಸಲಾಗಿತ್ತು. ಪ್ಯಾರಿಸ್‌ನಲ್ಲಿ ಫೆ.18ರಿಂದ 23ರ ವರೆಗೆ ಈ ಸಭೆ ನಡೆಯಲಿದೆ. ಸಭೆಯಲ್ಲಿ ಉಗ್ರರಿಗೆ ಹಣಕಾಸು ಪೂರೈಕೆ ಮಾಡುವ ಹಾಗೂ ಉಗ್ರರಿಗೆ ಹಣಕಾಸು ಪೂರೈಕೆ ಸಂಬಂಧ ಕ್ರಮ ಕೈಗೊಳ್ಳದ ದೇಶಗಳ ಜತೆ ವ್ಯಾಪಾರ ವಹಿವಾಟು ಹಾಗೂ ಹಣಕಾಸು ವಹಿವಾಟು ನಡೆಸುವುದಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತದೆ.
ಅಮೆರಿಕದಿಂದ ಪಾಕ್‌ಗೆ ನೆರವು: ಟ್ರಂಪ್ ಅಧಿಕಾರಕ್ಕೇರಿದ ದಿನದಿಂದಲೂ ಪಾಕ್ ವಿರುದ್ಧ ತೀಕ್ಷ್ಣ ವಾಗ್ಧಾಳಿ ನಡೆಸಿದ್ದ ಅಮೆರಿಕವು 2 ಸಾವಿರ ಕೋ. ರೂ. ಅನುದಾನ ನೀಡಲು ಬಜೆಟ್‌ನಲ್ಲಿ ನಿರ್ಧರಿಸಿದೆ. ಆದರೆ ಇದು ಪಾಕ್ ಉಗ್ರರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಅವಲಂಬಿಸಿದೆ ಎಂಬ ಷರತ್ತನ್ನೂ ವಿಧಿಸಲಾಗಿದೆ. ವಾರ್ಷಿಕ 4 ಲಕ್ಷ ಕೋಟಿ ಡಾಲರ್ ಮೊತ್ತದ ಅನುದಾನದ ಭಾಗವಾಗಿಯೇ ಇದನ್ನು ಮೀಸಲಿಡಲಾಗಿದೆ.
ಬ್ಯಾರಿಕೇಡ್ ತೆಗೆದ ಪೊಲೀಸರು
ಸಯೀದ್‌ನನ್ನು ಉಗ್ರರ ಪಟ್ಟಿಗೆ ಸೇರಿಸಿದ್ದಕ್ಕೆ ಸಾಂಕೇತಿಕವಾಗಿ ಉಗ್ರ ಸಂಘಟನೆಯ ಕಚೇರಿಗಳು ಹಾಗೂ ಸಯೀದ್ ಮನೆಯೆದುರು ಹಾಕಲಾಗಿದ್ದ ಪೊಲೀಸ್ ಬ್ಯಾರಿಕೇಡ್ ಅನ್ನು ತೆಗೆದುಹಾಕಲಾಗಿದೆ. ಭದ್ರತೆ ಹೆಸರಿನಲ್ಲಿ ದಶಕಗಳಿಂದಲೂ ಸಯೀದ್ ಕಚೇರಿ ಹಾಗೂ ಮನೆಯೆದುರು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಜಮಾತ್ ಉದ್ ದಾವಾ ಕೇಂದ್ರ ಕಚೇರಿ ಸಹಿತ 26 ಕಡೆಗಳಲ್ಲಿ ಬ್ಯಾರಿಕೇಡ್ ತೆರೆಯಲಾಗಿದೆ ಎಂದು ಲಾಹೋರ್‌ನ ಡಿಐಜಿ ಡಾ| ಹೈದರ್ ಅಶ್ರಫ್ ಹೇಳಿದ್ದಾರೆ.