Advertisement

ಗ್ರಾಮದ ಮುಖ್ಯರಸ್ತೆ ಸಂಪೂರ್ಣ ಕೆಸರು ಗದ್ದೆ

12:26 PM Oct 11, 2021 | Team Udayavani |

ನೆಲಮಂಗಲ : ಶಾಸಕರಿಗೆ ಪಾದಪೂಜೆ ಮಾಡುವ ಭರವಸೆ ನೀಡುತ್ತೇವೆ ಮೂರು ತಲೆಮಾರಿನಿಂದ ಎದುರಾಗಿರುವ ಗ್ರಾಮದ ಮುಖ್ಯರಸ್ತೆ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ, ತೊರೆಪಾಳ್ಯ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನಿಂದ 7 ಕಿ.ಮೀ. ದೂರದಲ್ಲಿರುವ ತೊರೆ ಪಾಳ್ಯ ಗ್ರಾಮದ ಮುಖ್ಯರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು, ಗುಂಡಿಗಳ ನಿರ್ಮಾಣವಾಗಿ ವಾಹನ ಸವಾರರು, ಗ್ರಾಮದ ಜನರು, ವಿದ್ಯಾರ್ಥಿಗಳು ಓಡಾಡಲು ಬಹಳಷ್ಟು ಸಮಸ್ಯೆ ಎದುರಾಗಿದೆ. ಹತ್ತಾರು ವರ್ಷಗಳಿಂದ ಭರವಸೆಯಲ್ಲಿಯೇ ಜೀವನ ಮಾಡುತ್ತಿದ್ದ ಗ್ರಾಮದ ಜನರು ಭಾನುವಾರ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಪೂಜೆ ಮಾಡುವ ಮೂಲಕ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಾದಪೂಜೆ ಭರವಸೆ: ಕೆಸರು ಗದ್ದೆಯಾಗಿ ಗುಂಡಿ ಬಿದ್ದಿರುವ ರಸ್ತೆಗೆ ಡಾಂಬರ್‌ ಹಾಕಿ ಓಡಾಡಲು ಅನುವು ಮಾಡಿ ಕೊಡಿ. ನಿಮಗೆ ಪಾದಪೂಜೆ ಮಾಡುವ ಭರವಸೆಯನ್ನು ನಾವು ನೀಡುತ್ತೇವೆ ಎಂದು ಮನವಿ ಮಾಡಿರುವ ಗ್ರಾಮಸ್ಥರು ಶಾಸಕರಿಗೆ ವಿಶೇಷ ರೀತಿಯ ಭರವಸೆ ನೀಡಿದ್ದಾರೆ. ಈಗಲಾದರೂ ಶಾಸಕರು ಗ್ರಾಮಕ್ಕೆ ನೀಡಿದ್ದ ರಸ್ತೆ ಭರವಸೆ ಈಡೇರಿಸಬೇಕಾಗಿದೆ.

ಅನಾಥವಾದ ಗ್ರಾಮ: ನೆಲಮಂಗಲದಿಂದ 7 ಕಿ.ಮೀ. ದೂರದಲ್ಲಿರುವ ತೊರೆಪಾಳ್ಯ ಕೆಂಪಲಿಂಗನಹಳ್ಳಿ ಶಿವಗಂಗೆ ರಸ್ತೆಯಿಂದ ಗ್ರಾಮದ ಮೂಲಕ ಬೈರಸಂದ್ರ ರಸ್ತೆಗೆ ಹೋಗುವ ಮುಖ್ಯರಸ್ತೆ ಗುಂಡಿಗಳು ಬಿದ್ದಿದ್ದು, ಮಳೆಗಾಲದಲ್ಲಿ ಕೆಸರು ಗದ್ದೆಯಾಗಲಿದೆ. ಅನೇಕ ಬಾರಿ ಡಾಂಬರ್‌ ಹಾಕಿಸಿ ಉತ್ತಮ ರಸ್ತೆ ಮಾಡುತ್ತೇವೆ ಎಂದು ಭರವಸೆ ನೀಡಿ ಸುಮ್ಮನಾಗಿದ್ದಾರೆ. ಗ್ರಾಮದಲ್ಲಿ ಜನರು ಬಳಸುತ್ತಿರುವ ನೀರು ಕೂಡ ಕುಡಿಯಲು ಯೊಗ್ಯವಿಲ್ಲ. ನಮ್ಮ ಗ್ರಾಮ ಸೌಲಭ್ಯಗಳಿಂದ ಅನಾಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:- ಅಬ್ಬಾ.. ಭತ್ತದ ಗದ್ದೆಯಲ್ಲಿತ್ತು ಬರೋಬ್ಬರಿ 50 ಕೆ.ಜಿ ತೂಕದ ಹೆಬ್ಬಾವು

Advertisement

ವಿನೂತನ ಪ್ರತಿಭಟನೆ: ತೊರೆಪಾಳ್ಯಗ್ರಾಮದ ರಸ್ತೆಯ ಗುಂಡಿಗಳಿಗೆ ಮಹಿಳೆಯರು ಪೂಜೆ ಮಾಡಿದ್ದು, ಗ್ರಾಮಕ್ಕೆ ಈಗಲಾದರೂ ಶಾಸಕರು ಬಂದು ರಸ್ತೆ ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ. ಮೂರು ತಲೆಮಾರುಗಳೇ ಕಳೆದಿವೆ. ಆದರೆ, ಗ್ರಾಮದ ರಸ್ತೆಗೆ ಮಾತ್ರ ಡಾಂಬರ್‌ ಕಾಣಲಿಲ್ಲ. ಭರವಸೆಯಲ್ಲಿಯೇ ಜೀವನ ಮಾಡುತ್ತಿದ್ದು, ನಗರ ಸಮೀಪವಿದ್ದರು ನಾವು ನತದೃಷ್ಟರಾಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆಲಮಂಗಲದಿಂದ 7 ಕಿ.ಮೀ. ಇರುವ ನಮ್ಮ ಗ್ರಾಮಕ್ಕೆ ಉತ್ತಮ ರಸ್ತೆ ಆಗಿಲ್ಲ. ಶಾಸಕರೇ ಬನ್ನಿ ನಮ್ಮ ಗ್ರಾಮಕ್ಕೆ ಒಂದು ಬಾರಿ ಓಡಾಡಿ ನಂತರ ತೊರೆಪಾಳ್ಯ ರಸ್ತೆ ಮಾಡಿಸಿ. ನಾವು ಸುಳ್ಳು ಹೇಳುತ್ತಿಲ್ಲ ಭರವಸೆ ಯಲ್ಲಿ ಸೋತು ಹೋಗಿದ್ದೇವೆ.                  -ರಾಜಮ್ಮ, ತೊರೆಪಾಳ್ಯ ಗ್ರಾಮಸ್ಥೆ

ಶಾಸಕರೇ ನಿಮ್ಮ ಪಾದಪೂಜೆ ಮಾಡುತ್ತೇವೆ. ನಮ್ಮ ಗ್ರಾಮಕ್ಕೆ ಉತ್ತಮ ರಸ್ತೆ ಮಾಡಿಸಿ ಕೊಡಿ. ನಾನು ಶಾಲೆಗೆ ಹೋಗುವ ಹಂತದಿಂದ ಕೆಸರು ಗದ್ದೆಯ ರಸ್ತೆಯೇ ಕಾಣುವಂತಾಗಿದೆ. ಈಗಲಾದರೂ ರಸ್ತೆ ಸಮಸ್ಯೆ ಬಗೆಹರಿಸಿ.                                        -ವೆಂಕಟೇಶ್‌, ಗ್ರಾಮದ ಯುವಕ

Advertisement

Udayavani is now on Telegram. Click here to join our channel and stay updated with the latest news.

Next