ಕನಕಪುರ: ತಾಲೂಕಿನ ಮರಳವಾಡಿ ಹೋಬಳಿ ಅಗರ ಗ್ರಾಮದ ಸಹಕಾರ ಸಂಘದಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ಗ್ರಾಮದ ಹಾಲು ಉತ್ಪಾದಕರು ಆರೋಪಿಸಿದ್ದಾರೆ.
ಡೇರಿ ಆರಂಭಗೊಂಡು 20 ವರ್ಷ ಕಳೆದರೂ ನಮಗೆ ಲಾಭ ನಷ್ಟದ ಲೆಕ್ಕಾಚಾರ ಕೊಟ್ಟಿಲ್ಲ. ಮಾಹಿತಿ ಕೇಳಲು ಹೋದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಸಂಘದ ಕಾರ್ಯದರ್ಶಿ ವೆಂಕ ಟಾಚಲ ಸಂಘದಿಂದ ರೈತರಿಗೆ ಸಿಗುವ ಯಾವುದೇ ಸವಲತ್ತುಗಳನ್ನು ಸದಸ್ಯರಿಗೆ ತಲುಪುತ್ತಿಲ್ಲ ಆರೋಪ ಮಾಡಿದ್ದಾರೆ. ಈ ಕುರಿತು ಸಂಘದ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟಾಚಲ ಮಾತನಾಡಿ, 20 ವರ್ಷಗಳ ಹಿಂದಿನ ಲೆಕ್ಕ ಕೊಡಿ ಎಂದು ಸದಸ್ಯರು ಮತ್ತು ನಿರ್ದೇ ಶಕರು ಕೇಳುತ್ತಿದ್ದಾರೆ.
ಈಗಾಗಲೇ ಈವರೆಗಿನ ಎಲ್ಲಾ ವರದಿಯನ್ನು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಪ್ರಸಕ್ತ ಸಾಲಿನ ಯಾವುದೇ ದಾಖಲಾತಿಗಳನ್ನು ನೀಡಲುಸಿದ್ಧರಿದ್ದು, ಅದನ್ನು ಪರಿಶೀಲಿಸಲು ನೋಡಲು ಯಾರು ಸಿದ್ದರಿಲ್ಲ. ಯಾವುದೋ ದುರುದ್ದೇಶ ಇಟ್ಟು ಕೊಂಡು ಈ ರೀತಿ ಆರೋಪಿಸುತ್ತಿದ್ದಾರೆ.
ಸಂಘದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಪ್ರಸಕ್ತ ಸಾಲಿನ ದಾಖಲೆಗಳ ಪರಿಶೀಲನೆಗೆ ಮುಕ್ತವಾಗಿದ್ದೇವೆ ಎಂದು ತಿಳಿಸಿದರು ಗ್ರಾಪಂ ಸದಸ್ಯ ಕುಮಾರ್ ಮಾತನಾಡಿ, ಹಾಲು ಉತ್ಪಾದಕರ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಶಶಿ ಕುಮಾರ್, ಭೂತೇಶ್, ಬೈರ ಶೆಟ್ಟಿ ಗೌಡ, ಶಿವರಾಜು ಸೇರಿದಂತೆ ಹಲವರು ರಾಜಕೀಯ ದುರುದ್ದೇಶ ಇಟ್ಟುಕೊಂಡು ರೈತರು ಮತ್ತು ಕಾರ್ಯದರ್ಶಿ ಮಧ್ಯೆ ಬಿರುಕು ಮೂಡಿಸುವ ಹುನ್ನಾರ ನಡೆಸುತ್ತಿದ್ದಾರೆ.
ರೈತರಿಗೆ ಗುಣ ಮಟ್ಟದ ಹಾಲು ಪೂರೈಕೆ ಮಾಡಲು ಬಿಡದೆ ಸದಸ್ಯರು ತರುವ ಹಾಲಿಗೆ ಯೂರಿಯಾ ಸಕ್ಕರೆ ಪದಾರ್ಥಗಳನ್ನು ಬೆರೆಸಿ ಗುಣ ಮಟ್ಟ ಇಲ್ಲದ ಹಾಲನ್ನು ಪೂರೈಸುತ್ತಿದ್ದಾರೆ. ಇಂತಹ ಹಾಲನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಕಾರ್ಯದರ್ಶಿ ವಿರುದ್ಧ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.