“ಯಾವಾಗ್ ಯಾವಾಗ ಏನೇನು ಆಗಬೇಕೋ ಅದು ಆಗಲೇಬೇಕು…’ ಹೀಗೆ ಹೇಳುವ ಮೂಲಕ, ಅವಳು ಎದುರಿಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಗನ್ ಹಿಡಿದು ಶೂಟ್ ಮಾಡುತ್ತಾಳೆ. ನಂತರ ಆಕೆಯೂ ಅದೇ ಗನ್‌ನಿಂದ ಶೂಟ್ ಮಾಡಿಕೊಂಡು ನೆಲಕ್ಕುರುಳುತ್ತಾಳೆ. ಅಲ್ಲಿಗೆ “ಹುಡುಕಾಟ’ದ ಕಥೆಗೆ ಶುಭಂ! ಈ ಎರಡು ಪ್ರಾಣಗಳು ಹಾರಿ ಹೋಗೋಕ್ಕೂ ಮುನ್ನ, ಎರಡು ಪ್ರಾಣಗಳೂ ಹಾರಿ ಹೋಗಿರುತ್ತವೆ. ಆಕೆ, ಇನ್ಸ್‌ಪೆಕ್ಟರ್‌ನನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಳ್ಳೋಕೆ ಕಾರಣವೇ ಆರಂಭದಲ್ಲಿ ನಡೆದ ಒಂದು ಕೊಲೆ. ಆ ಕೊಲೆಯ ಸುತ್ತ ನಡೆಯೋ ಮೆಲೋಡ್ರಾಮವೇ “ರೂಪ’ದ ಕಥೆ ಮತ್ತು ವ್ಯಥೆ!
ಇಷ್ಟು ಹೇಳಿದ ಮೇಲೆ ಇದು ಸಸ್ಪೆನ್ಸ್, ಥ್ರಿಲ್ಲರ್ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಾಗಂತ, ಇಲ್ಲಿ ಹೇಳಿಕೊಳ್ಳುವಂತಹ ಸಸ್ಪೆನ್ಸ್ ಆಗಲಿ, ಥ್ರಿಲ್ಲರ್ ಆಗಲಿ ಕಾಣಸಿಗಲ್ಲ. ಆರಂಭದಲ್ಲೇ ಒಂದು ಕೊಲೆ ನಡೆಯುತ್ತೆ. ಆ ಕೊಲೆ ಮಾಡಿದ ಕೊಲೆಗಾರನನ್ನು ಹುಡುಕುವ ಪರಿಯೇ ಪ್ರೇಕ್ಷಕನಲ್ಲಿ ಕಿರಿಕಿರಿಯನ್ನುಂಟು ಮಾಡುತ್ತೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಅಂದಮೇಲೆ ಗಂಭೀರತೆ ಬೇಕು. ಅಥವಾ, ಕಥೆಯಲ್ಲೊಂದಷ್ಟು ಕುತೂಹಲ ಅಂಶಗಳಿರಬೇಕು. ಇಲ್ಲಿ ಅದ್ಯಾವುದನ್ನೂ ನಿರೀಕ್ಷಿಸುವಂತಿಲ್ಲ. ಹಾಗೆಯೇ ಇದು ಅದ್ಭುತ ಕಥೆ ಅಂದುಕೊಳ್ಳುವಂತೆಯೂ ಇಲ್ಲ. ಈಗಾಗಲೇ ಇಂತಹ ಅನೇಕ ಮರ್ಡರ್ ಮಿಸ್ಟರಿ ಸ್ಟೋರಿಗಳು ಬಂದು ಹೋಗಿವೆ.
ಹಾಗಾಗಿ, ಇಲ್ಲಿ ಅಪ”ರೂಪ’ ಅನಿಸುವುದಂಥದ್ದೇನೂ ಇಲ್ಲ. ಒಂದು ಕೊಲೆಯ ಸುತ್ತವೇ ಗಿರಕಿ ಹೊಡೆಯುವ ಕಥೆಯಲ್ಲಿ ಸಣ್ಣ ಸಣ್ಣ ತಿರುವುಗಳು ಬಂದು ಹೋಗುತ್ತವೆಯಾದರೂ, ಅದಕ್ಕೆ ಇನ್ನಷ್ಟು ತಾಕತ್ತು ಬೆರೆಸಿದ್ದರೆ, ಸಸ್ಪೆನ್ಸ್-ಥ್ರಿಲ್ಲರ್ ಎಂದಿದ್ದಕ್ಕೆ ಸಾರ್ಥಕವಾಗುತ್ತಿತ್ತು. ಆದರೆ, ನಿರ್ದೇಶಕರು ಅಷ್ಟಕ್ಕೇ ಸುಸ್ತಾದಂತೆ ಕಾಣುತ್ತದೆ. ಇಲ್ಲಿ ರಿವರ್ಸ್ ಸ್ಕ್ರೀನ್‌ಪ್ಲೇನಲ್ಲೇ ಕಥೆ ಹೇಳುವ ಪ್ರಯತ್ನ ಅಷ್ಟಾಗಿ ಫಲಿಸಿಲ್ಲ. ಒಂದು ಕೊಲೆ, ಒಂದು ಹೋಟೆಲ್, ನಾಲ್ಕೈದು ಪಾತ್ರಗಳ ಸುತ್ತವೇ ಕಥೆ ಸುತ್ತುವುದರಿಂದ ನೋಡುಗರಿಗೆ ಯಾವ ಥ್ರಿಲ್ಲೂ ಸಿಗೋದಿಲ್ಲ. ಎಲ್ಲೋ ಒಂದು ಕಡೆ ಆರಂಭದಲ್ಲೇ ಆ ರೂಪಾವತಿ ಎಲ್ಲೆಲ್ಲೋ ಹರಿದಾಡುತ್ತಿದ್ದಾಳೆ ಅಂತ,
ಪ್ರೇಕ್ಷಕ ಗಲಿಬಿಲಿ ಆಗುತ್ತಿದ್ದಂತೆಯೇ, ನಿರ್ದೇಶಕರು ಅಲ್ಲೊಂದು ಜಿಂಗ್‌ಚಾಕ್ ಸೆಟ್‌ನಲ್ಲಿ ಹಾಡು ತೋರಿಸಿ, ಆ ಗಲಿಬಿಲಿಗೆ ಕೊಂಚ ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಾರೆ. ಆದರೂ ಅದು ವಕೌìಟ್ ಆಗಿಲ್ಲ. ಒಂದು ಪತ್ತೆದಾರಿ ಕಾದಂಬರಿಯಲ್ಲಾದರೂ ಒಂದಷ್ಟು ಅಂಶಗಳು ಕುತೂಹಲ ಕೆರಳಿಸುತ್ತವೆ. ಆದರೆ, ಇಲ್ಲಿ ಎರಡು ಕೊಲೆಗಳ ಸುತ್ತ ನಡೆಯುವ ತನಿಖೆಯೇ ಗೊಂದಲವೆನಿಸುತ್ತದೆ. ಇನ್ನಷ್ಟು ಬಿಗಿ ನಿರೂಪಣೆಯಿಂದ ಆ ತನಿಖೆಯ ಅಂಶಗಳನ್ನು ಪರಿಣಾಮಕಾರಿಯಾಗಿ ತೋರಿಸಿದ್ದರೆ, “ರೂಪ”ಳನ್ನು ಮೆಚ್ಚಬಹುದಿತ್ತು. ಆದರೆ, ನಿರ್ದೇಶಕರು ಅಂತಹ ಹೊಗಳಿಕೆಗೆ ಇಲ್ಲಿ ಅವಕಾಶ ಮಾಡಿಕೊಟ್ಟಿಲ್ಲ. ಸಿನಿಮಾ ಅಂದಮೇಲೆ ಮನರಂಜನೆ ಇರಬೇಕು.
ಆದರೆ, ಇಂತಹ ಸಸ್ಪೆನ್ಸ್-ಥ್ರಿಲ್ಲರ್ ಕಥೆಗಳಲ್ಲಿ ಯಾರೂ ಅದನ್ನು ನಿರೀಕ್ಷಿಸುವುದೂ ಇಲ್ಲ. ನಿರ್ದೇಶಕರಿಗೆ ನೋಡುಗರನ್ನು ನಗಿಸಬೇಕು ಎಂಬ ಹಠ. ಹಾಗಾಗಿ, ಸುಖಾಸುಮ್ಮನೆ ನಗಿಸುವ ಹಠಕ್ಕೆ ಬಿದ್ದು ನಗೆಪಾಟಿಲಿಗೆ ಈಡಾಗಿದ್ದಾರೆ. ಮೊದಲೇ ಹೇಳಿದಂತೆ, ಇದು ಕೊಲೆಯ ಸುತ್ತ ನಡೆಯುವ ಕಥೆ. ಎಲ್ಲೂ ಗಂಭೀರತೆಗೆ ದೂಡುವುದಿಲ್ಲ. ಕೆಲ ದೃಶ್ಯಗಳನ್ನು ಹೊರತುಪಡಿಸಿದರೆ, ಇಡೀ ಸಿನಿಮಾ ಯಾವುದೇ ಥ್ರಿಲ್ ಕೊಡುವುದಿಲ್ಲ. ಕಥೆಯ ಒನ್‌ಲೈನ್ ಪರವಾಗಿಲ್ಲ. ಅದನ್ನೇ ಇನ್ನಷ್ಟು ಬಿಗಿಯಾದ ಚಿತ್ರಕಥೆ ಮಾಡಿಕೊಂಡಿದ್ದರೆ, ನೋಡುಗರಿಗೆ “ರೂಪ’ ಹಿಡಿಸುತ್ತಿದ್ದಳ್ಳೋ ಏನೋ? ರೂಪ (ಮಮತಾ ರಾವತ್) ಶ್ರೀಮಂತ ಕುಟುಂಬದ ಹುಡುಗಿ.
ತಂದೆ ಕಳೆದುಕೊಂಡ ಆಕೆಯನ್ನು ಅವಳ ತಾಯಿ ಆಕೆಯನ್ನು ಹುಡುಗನಂತೆಯೇ ಬೆಳೆಸಿರುತ್ತಾಳೆ. ಕೋಟ್ಯಾಂತರ ಮೌಲ್ಯದ ಆಸ್ತಿ ರೂಪಾಳ ಹೆಸರಲ್ಲಿರುತ್ತೆ. ಹಾಗಾಗಿ, ರೂಪ ಸದಾ ಬಿಂದಾಸ್ ಹುಡುಗಿ, ಏನೂ ಇಲ್ಲದ ಮೂವರು ಗೆಳೆಯರಿಗೆ ಸಹಾಯ ಮಾಡಿ, ಅವರ ಬದುಕು ರೂಪಿಸುವ ರೂಪ, ಅವರಿಗೆ ಒಳ್ಳೇ ಫ್ರೆಂಡು. ಕುಡಿತ, ಸಿಗರೇಟು, ಸುತ್ತಾಟ ಹೀಗೆ ಚಟಕ್ಕೆ ಅಂಟಿಕೊಂಡ ರೂಪ, ಇನ್ನೇನು ಎಲ್ಲವನ್ನೂ ಬಿಟ್ಟು, ಚೆನ್ನಾಗಿರಬೇಕು ಅಂದುಕೊಳ್ಳುವಾಗಲೇ, ಅವಳ ಕೊಲೆಯಾಗುತ್ತೆ. ಆ ಕೊಲೆ ಯಾರು ಮಾಡಿದ್ದು ಎಂಬ ಬಗ್ಗೆ ತನಿಖೆ ಶುರುವಾಗುತ್ತೆ. ಆ ಕೊಲೆಗಾರ ಸಿಗುತ್ತಾನಾ, ಸಿಕ್ಕರೂ ಅವನು ಯಾರು ಎಂಬ ಕುತೂಹಲವಿದ್ದರೆ, ಸಮಯವಿದ್ದರೆ, “ರೂಪ’ಳ ಸೊಬಗನ್ನ ನೋಡಬಹುದು.
ಮಮತಾ ರಾವತ್ ನಟನೆಗಿಂತ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವುದೇ ಹೆಚ್ಚು. ಶೋಭರಾಜ್, ತನಿಖೆ ಮಾಡುವ ಪೊಲೀಸ್ ಅಧಿಕಾರಿಯಾಗಿ ಇಷ್ಟವಾಗುತ್ತಾರೆ. ಆಂಟೋನಿ ಕಮಲ್ ಅವರ ಹಾಸ್ಯ ಅಲ್ಲಲ್ಲಿ ಅಪಹಾಸ್ಯ ಎನಿಸುತ್ತೆ. ರೇಖಾ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಕಾಣುವ ಪಾತ್ರಗಳಾÂವೂ ಅಷ್ಟೊಂದು ಗಮನಸೆಳೆಯಲ್ಲ. ಮ್ಯಾಥ್ಯೂಸ್ ಸಂಗೀತ ಕೇಳುವುದೇ ಇಲ್ಲ. ಹಿನ್ನೆಲೆ ಸಂಗೀತಕ್ಕೂ ಇದೇ ಮಾತು ಅನ್ವಯ. ಪವನ್‌ಕುಮಾರ್ ಕ್ಯಾಮೆರಾದಲ್ಲಿ “ರೂಪ’ ಅಷ್ಟಾಗಿ ರೂಪುಗೊಂಡಿಲ್ಲ.
ಚಿತ್ರ: ರೂಪ
ನಿರ್ಮಾಣ: ನೆಲ್ಸನ್ ರೋಜರ್ಸ್
ನಿರ್ದೇಶನ: ಆಂಟೋನಿ ಕಮಲ್
ತಾರಾಗಣ: ಮಮತಾ ರಾವತ್, ಶೋಭರಾಜ್, ರೇಖಾ ಕುಮಾರ್, ಆಂಟೋನಿ ಕಮಲ್, ಸುನೀಲ್, ಚಂದನ್, ಡಾಮನಿಕ್, ವೆಂಕಟೇಶ್ ಇತರರು.
*ವಿಜಯ್ ಭರಮಸಾಗರ