ಮೈಸೂರು: ಗ್ರಾಮ ಪಂಚಾಯಿತಿ ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದಿಂದ ಮತ್ತೂಂದು ಗ್ರಾಪಂ ವ್ಯಾಪ್ತಿಯ ನಿವಾಸಿಗಳು ನಿತ್ಯ ಸಂಕಟ ಅನುಭವಿಸುವಂತಾಗಿದೆ.
ನಗರದ ಹೊರಭಾಗದಲ್ಲಿರುವ ಕೂರ್ಗಳ್ಳಿ ಗ್ರಾಪಂ ವ್ಯಾಪ್ತಿಯ ಹೂಟಗಳ್ಳಿ ಎನ್‌ಎಚ್‌ಬಿ ಕಾಲೋನಿಯಲ್ಲಿ ಹಾಯ್ದು ಹೋಗಿರುವ ಮಳೆನೀರು ಮೋರಿಯಲ್ಲಿ ದಿನದ 24 ಗಂಟೆಯೂ ಯುಜಿಡಿ ನೀರು ಹರಿಯುತ್ತಿದ್ದು, ಮೋರಿ ಅಕ್ಕಪಕ್ಕದ ನಿವಾಸಿಗಳು ನೆಮ್ಮದಿ ಯಿಂದ ಬದುಕು ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇರೊಂದು ಗ್ರಾಪಂನಿಂದ ತ್ಯಾಜ್ಯ ನೀರು: ಹೂಟ ಗಳ್ಳಿ ಎನ್‌ಎಚ್‌ಬಿ ಕಾಲೋನಿಯ ಮೇಲ್ಭಾಗದಲ್ಲಿ ಮೂರು ಖಾಸಗಿ ಬಡಾವಣೆಗಳು ನಿರ್ಮಾಣ ವಾಗಿ ನಾಲ್ಕೈದು ವರ್ಷ ಕಳೆದರೂ, ಇಂದಿಗೂ ಯುಜಿಡಿ ಸಂಪರ್ಕ ಹೊಂದಿಲ್ಲ. ಈಗಾಗಲೇ ಖಾಸಗಿ ಬಡಾವಣೆ ಯಲ್ಲಿ ಮನೆ ನಿರ್ಮಿಸಿಕೊಂಡಿರುವವರು ಶೌಚಾಲಯ ನೀರು, ಗೃಹ ಬಳಕೆಯ ತ್ಯಾಜ್ಯ ನೀರನ್ನು ಮಳೆ ನೀರಿನ ಚರಂಡಿಗೆ ನೇರವಾಗಿ ಹರಿ ಬಿಡುತ್ತಿರುವುದ ರಿಂದ ಕೆಳ ಭಾಗದಲ್ಲಿರುವ ಹೂಟಗಳ್ಳಿ ಎನ್‌ಎಚ್‌ಬಿ ಕಾಲೋ ನಿಯ ನಿವಾಸಿಗಳು ದುರ್ವಾಸನೆ, ಸೊಳ್ಳೆಗಳ ಕಾಟ ದಿಂದ ಬದುಕುವಂತಾಗಿದೆ. ನಿತ್ಯ ಚರಂಡಿಯಲ್ಲಿ ದುರ್ವಾಸನೆ ಹೊರಬರುವುದರಿಂದ ಮನೆಯಲ್ಲಿ ಅಡುಗೆ ಮಾಡುವುದಿರಲಿ ಊಟ ಮಾಡಲಾಗದಷ್ಟು ಸಮಸ್ಯೆ ಇದೆ. ಹಗಲಿನ ವೇಳೆಯೇ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಪರಿಣಾಮ ತಿಂಗಳಿಗೆ ಎರಡು ಬಾರಿ ಮನೆಯ ಸದಸ್ಯರನ್ನು ಆಸ್ಪತ್ರೆಗೆ ಕರೆದೊಯ್ಯುವ ಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ಕೂರ್ಗಳ್ಳಿ ಗ್ರಾಪಂ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರೂ ಅವರು ಇತ್ತ ತಲೆ ಹಾಕಿಲ್ಲ. ಹೀಗಾದರೆ ನಾವು ಬದುಕುವುದಾದರೂ ಹೇಗೆ?, ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಮಳೆ ನೀರಿನ ಮೋರಿಗೆ ಯೂಜಿಡಿ ನೀರು ಹರಿಬಿಡುವುದು ಅಪರಾಧ. ಆದರೆ, ಇಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ನಿರಂ ತರವಾಗಿ ಯುಜಿಡಿ ನೀರು ಮತ್ತು ಕೊಳಚೆ ನೀರು ಹರಿ ಯುತ್ತಿದೆ. ಮುಂದಾದರೂ ಸಮಸ್ಯೆಯ ಗಂಭೀರತೆ ಅರಿತು ಗ್ರಾಪಂ ಅಧಿಕಾರಿಗಳು ಕಾರ್ಯಪ್ರವೃತ್ತ ರಾಗಲಿ ಎಂದು ಎನ್‌ಎಚ್‌ಬಿ ಕಾಲೋನಿಯ ಅಶೋಕ್ ಎಲ್. ಜೋಶಿ ಒತ್ತಾಯಿಸಿದ್ದಾರೆ.
ಮೂರು ಖಾಸಗಿ ಬಡಾವಣೆಗಳು ಬೆಳವಾಡಿ ಗ್ರಾಪಂ ವ್ಯಾಪ್ತಿಗೆ ಬರಲಿದ್ದು, ಮೂಲಭೂತ ಸೌಕರ್ಯಗಳು ಕಲ್ಪಿಸದಿದ್ದರೂ, ಅವು ಗ್ರಾಪಂ ನಿರ್ವಹಣೆಗೆ ಒಪ್ಪಿಸಲಾಗಿದೆ. ಕುಡಿಯುವ ನೀರು, ಯುಜಿಡಿ ಸಂಪರ್ಕ, ರಸ್ತೆ, ಉದ್ಯಾನ ಯಾವ ಸೌಲಭ್ಯವೂ ಇಲ್ಲದ ಬಡಾ ವಣೆಗೆ ಬೆಳವಾಡಿ ಗ್ರಾಮ ಪಂಚಾಯಿತಿ ಎನ್‌ಒಸಿ ನೀಡಿದೆ. ಬಳಿಕ ಗ್ರಾಪಂಗೆ ಹಸ್ತಾಂತರವಾಗಿದೆ. ಅಧಿಕಾರಿಗಳ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ದಿಂದ ಕೂರ್ಗಳ್ಳಿ ಗ್ರಾಪಂ ವ್ಯಾಪ್ತಿಯ ಜನರು ಪರಿತಪಿಸುತ್ತಿದ್ದಾರೆ. ಖಾಸಗಿ ಬಡಾವಣೆಯ ಜನರು ತ್ಯಾಜ್ಯ ನೀರನ್ನು ಕೆಳಭಾಗದ ಬಡಾವಣೆಯ ಮಳೆನೀರು ಚರಂಡಿಗೆ ನೇರವಾಗಿ ಹರಿಬಿಟ್ಟಿರುವುದು ಸಮಸ್ಯೆಗೆ ಕಾರಣವಾಗಿದೆ. ಪರಿಣಾಮ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ದೂರು ನಿಡಿದ್ದರೂ ಯಾವುದೇ ಪ್ರಯೋ ಜನವಾಗಿಲ್ಲ ಎಂದು ಸ್ಥಳೀಯರು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ.
ಜನರ ತೆರಿಗೆ ಹಣ ಪೋಲು: ಖಾಸಗಿ ಬಡಾವಣೆಯ ಮಾಲೀಕ ಯಾವುದೇ ಸೌಲಭ್ಯ ಕಲ್ಪಿಸದೇ ಒಂದಷ್ಟು ರಾಜಕೀಯ ಒತ್ತಡ ಹೇರಿ ಗ್ರಾಪಂಗೆ ಹಸ್ತಾಂತರಿಸಿದ್ದಾರೆ. ಈಗ ಗ್ರಾಮ ಪಂಚಾಯಿತಿಯೇ ಆ ಬಡಾವ ಣೆಗೆ ಎಲ್ಲಾ ಸೌಲಭ್ಯ ಕಲ್ಪಿಸಬೇಕಿದೆ. ಗ್ರಾಮ ಪಂಚಾಯಿತಿ ಮತ್ತು ಶಾಸಕರಿಗೆ ಬರುವ ಅನುದಾನ ಜನರ ತೆರಿಗೆಯದ್ದು. ಕೆಲವರು ಮಾಡಿದ ಕರ್ತವ್ಯ ಲೋಪ ದಿಂದ ಜನರ ಹಣ ಪೋಲಾಗುತ್ತಿದೆ ಎಂದು ಸ್ಥಳೀಯ ನಿವಾಸಿ ವೀರೇಶ್ ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂರ್ಗಳ್ಳಿ ಗ್ರಾಪಂ ಪಿಡಿಒ ಪ್ರತಿಕ್ರಿಯೆ : ಬೆಳವಾಡಿ ಗ್ರಾಪಂನ ಹಿಂದಿನ ಪಿಡಿಒ ಕಾನೂನು ಬಾಹಿರವಾಗಿ ಖಾಸಗಿ ಬಡಾವಣೆಗಳನ್ನು ಗ್ರಾಪಂಗೆ ಹಸ್ತಾಂತರ ಮಾಡಿಕೊಂಡಿದ್ದಾರೆ. ಖಾಸಗಿ ಬಡಾ ವಣೆಗಳಲ್ಲಿ ಮೂಲಸೌಲಭ್ಯಗಳನ್ನೇ ಕಲ್ಪಿಸದಿದ್ದರೂ, ಎನ್‌ಒಸಿ ನೀಡಿ ನಿಯಮ ಬಾಹಿರವಾಗಿ ಪಂಚಾಯಿತಿಗೆ ಹಸ್ತಾಂ ತರ ಮಾಡಿದ್ದಾರೆ. ಈಗ ಆ ಬಡಾ ವಣೆಗಳಲ್ಲಿ ಯುಜಿಡಿ, ರಸ್ತೆ ನಿರ್ಮಾಣ ಮಾಡಲು ಹಣವಿಲ್ಲ ಎಂದು ಬೆಳವಾಡಿ ಗ್ರಾಪಂ ಹೇಳುತ್ತಿದೆ. ಈ ಬಗ್ಗೆ ಜನತಾ ನ್ಯಾಯಾಲಯಕ್ಕೆ ನಮ್ಮ ಗ್ರಾಪಂ ದೂರು ನೀಡಿದೆ. ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು ಎಂದು ಕೂರ್ಗಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಬಸವಣ್ಣ ತಿಳಿಸಿದ್ದಾರೆ.
ಬೆಳವಾಡಿ ಗ್ರಾಪಂ ಪಿಡಿಒ ಪ್ರತಿಕ್ರಿಯೆ : ಈವರೆಗೂ ಖಾಸಗಿ ಬಡಾವಣೆಗಳು ನಮ್ಮ ಗ್ರಾಪಂಗೆ ಹಸ್ತಾಂತರವಾಗಿಲ್ಲ. ಆದರೆ ಅಲ್ಲಿನನಿವಾಸಿಗಳು ಗ್ರಾಪಂಗೆ ತೆರಿಗೆ ಕಟ್ಟುತ್ತಿದ್ದಾರೆ. ಹಿಂದಿನವರು ಮಾಡಿರುವ ಎಡವಟ್ಟಿನಿಂದ ಗ್ರಾಪಂ ಮೂಲಸೌಲಭ್ಯ ಕಲ್ಪಿಸಿಕೊಡಬೇಕಿದೆ. ಅದಕ್ಕಾಗಿ ಶಾಸಕರು, ವಿಧಾನ ಪರಿಷತ್ ಸದಸ್ಯರು ತಮ್ಮ ಅನುದಾನ ನೀಡುತ್ತೇವೆಎಂದಿದ್ದಾರೆ. ಅನುದಾನ ಬಂದ ತಕ್ಷಣ ಯುಜಿಡಿಸಂಪರ್ಕ ಕಲ್ಪಿಸಲಾಗುವುದು ಎಂದು ಬೆಳವಾಡಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.
-ಸತೀಶ್ ದೇಪುರ