ಕೊಪ್ಪಳ: ಇಲ್ಲಿನ 23ನೇ ವಾರ್ಡ್ ಹೆಸರಿಗಷ್ಟೇ ‘ಗಾಂಧಿ ನಗರ’ ಎಂಬ ಹೆಸರು ಪಡೆದಿದೆ. ಆದರೆ ಎಲ್ಲೆಂದರಲ್ಲಿ ತ್ಯಾಜ್ಯ, ಭರ್ತಿಯಾದ ಚರಂಡಿಗಳ ಆಗರವಾಗಿದೆ. ಹಂದಿ ಹಾಗೂ ಸೊಳ್ಳೆಗಳ ಕಾಟ ಸ್ಥಳೀಯ ಜನರ ನೆಮ್ಮದಿಯನ್ನೇ ಹಾಳು ಮಾಡಿದೆ. ಪೌರ ಕಾರ್ಮಿಕರು ಹೇಳಿದರೂ ವಾರ್ಡ್‌ನಲ್ಲಿ ಚರಂಡಿ ಸ್ವಚ್ಛತೆಗೆ ಬರುವುದಿಲ್ಲ ಎನ್ನುವ ವೇದನೆ ಇಲ್ಲಿನ ಜನರದ್ದಾಗಿದೆ.
ಹೌದು. ರಾಷ್ಟ್ರಪಿತ ಮಹಾತ್ಮ ಗಾಂಧಿಧೀಜಿ ಅವರ ಹೆಸರಿನ ಗಾಂಧಿ ನಗರ ಕೊಪ್ಪಳಕ್ಕೆ ಮಾದರಿ ನಗರವಾಗಬೇಕಿತ್ತು. ಆದರೆ ಎಲ್ಲರ ವಾರ್ಡ್‌ಗಳಿಗಿಂತಲೂ ಅಧ್ವಾನದ ಸ್ಥಿತಿಯಲ್ಲಿದೆ. ಇಲ್ಲಿ ಕೆಳ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚು ವಾಸ ಮಾಡುತ್ತಿದ್ದು, ಹಿಂದಿನ ಹಲವು ಸದಸ್ಯರಿಗೆ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಆಪಾದನೆ ಸಾಮಾನ್ಯವಾಗಿದೆ.
ಈ ನಗರದಲ್ಲಿ ಸಿಮೆಂಟ್ ರಸ್ತೆಗಳಿಗೇನು ಭರವಿಲ್ಲ. ಆದರೆ, ಕೆಲವು ಕಡೆ ನಿರ್ಮಿಸಿದ ಸಿಮೆಂಟ್ ರಸ್ತೆಗಳು ವರ್ಷ ಕಳೆಯುವ ಮುನ್ನವೇ ಕಿತ್ತು ಹಾಳಾಗಿವೆ. ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿದೆಯಾದರೂ ಚರಂಡಿ ಮೇಲ್ಭಾಗದಲ್ಲಿ ಮುಚ್ಚುವ ವ್ಯವಸ್ಥೆ ಮಾಡಿಲ್ಲ. ಕೆಲವು ಕಡೆ ಜನರೇ ಚರಂಡಿ ಮೇಲೆ ಕಲ್ಲುಬಂಡೆ ಹಾಕಿಕೊಂಡಿದ್ದಾರೆ. ಚರಂಡಿಗಳು ತೆರೆದಿರುವುದರಿಂದ ಕಸವು ಚರಂಡಿ ತುಂಬಿಕೊಂಡಿದೆ. ಮನೆಗಳ ಕಲ್ಮಷ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯುತ್ತಿಲ್ಲ. ಪೌರ ಕಾರ್ಮಿಕರು ಚರಂಡಿ ಸ್ವಚ್ಛ ಮಾಡಲಿ ಎಂದು ಒತ್ತಾಯ ಮಾಡಿದರೆ ಯಾರೊಬ್ಬರೂ ಇತ್ತ ಇಣುಕಿ ನೋಡುತ್ತಿಲ್ಲ. ಕೆಲವು ಓಣಿಯಲ್ಲಿ ಕಾರ್ಮಿಕರು ಬಂದರೂ ಸಹಿತ ಚರಂಡಿಯಲ್ಲಿನ ಕಸ ಮೇಲೆ ತೆಗೆದು ರಸ್ತೆ ಮೇಲೆ ಹಾಗೆ ಬಿಡುತ್ತಾರೆ. ಹತ್ತಾರು ದಿನ ಕಳೆದರೂ ಕಸ ತೆಗೆಯಲ್ಲ, ನಾವೇ ನಮ್ಮ ಮನೆಗಳ ಮುಂದಿನ ಚರಂಡಿ ತ್ಯಾಜ್ಯ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ ಸ್ಥಳೀಯರು.
ಶೌಚಾಲಯ ಇದ್ದರೂ ವ್ಯರ್ಥ: ವಾರ್ಡ್‌ನ ಕೊನೆ ಭಾಗದಲ್ಲಿ ಒಂದು ಮಹಿಳಾ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಕಳೆದ ಹಲವು ದಿನಗಳಿಂದ ಬಂದಾಗಿದ್ದ ಶೌಚಾಲಯವನ್ನು ‘ಉದಯವಾಣಿ’ ಸರಣಿ ವರದಿಗಳಿಂದು ಎಚ್ಚೆತ್ತು 2-3 ದಿನದ ಹಿಂದಷ್ಟೇ ಬಾಗಿಲು, ಕಿಟಕಿ ರಿಪೇರಿ ಮಾಡಿ ಆರಂಭ ಮಾಡಲಾಗಿದೆ. ಈ ಮೊದಲು ಬಯಲು ಪ್ರದೇಶವೇ ಮಹಿಳೆಯರಿಗೆ ಅನಿವಾರ್ಯವಾಗಿತ್ತು. ಇನ್ನು ನಗರಸಭೆಯಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಯಾರೋ ಏಜೆನ್ಸಿ ಲೆಕ್ಕದಲ್ಲಿ ಶೌಚಗೃಹ ನಿರ್ಮಿಸಿದ್ದು ಕೆಳಗಡೆ ಮೂರು ಅಡಿ ಸಹಿತ ತಗ್ಗು ತೊಡಿಲ್ಲ. ದಾಖಲೆಗಳಿಗೆ ಸೀಮಿತ ಎನ್ನುವಂತೆ ಇಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿದ್ದಾರೆ. ಹಾಗಾಗಿ ಅವುಗಳು ಬಳಕೆಯಾಗುತ್ತಿಲ್ಲ.
ಹಂದಿ-ಸೊಳ್ಳೆ ಕಾಟ: ಕೊಪ್ಪಳದ 31 ವಾರ್ಡ್‌ಗಳ ಪೈಕಿ ಗಾಂಧಿ ನಗರದಲ್ಲೇ ಹೆಚ್ಚಿದೆ ಹಂದಿಗಳ ಸಂಖ್ಯೆ. ಇಲ್ಲಿನ ಕೆಲವರು ಹಂದಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಅವುಗಳು ಲ್ಲೆಂದರಲ್ಲಿ ಬಿದ್ದು ಗಲೀಜು ಮಾಡುತ್ತಿವೆ. ಇನ್ನೂ ಚರಂಡಿಯಲ್ಲಿ ಮಲಗಿ ತ್ಯಾಜ್ಯಯುಕ್ತ ನೀರು ಹರಿಯದಂತೆ ಮಾಡುತ್ತಿವೆ. ಇನ್ನೂ ವಾರ್ಡ್‌ನಲ್ಲಿ ಸೊಳ್ಳೆಗಳ ಕಾಟವಂತೂ ವಿಪರೀತವಾಗಿದೆ. ಇಲ್ಲಿನ ಮಕ್ಕಳಿಗೆ, ವೃದ್ಧರಿಗೆ ರೋಗ ಆವರಿಸುತ್ತಿವೆ. ಸ್ವಚ್ಛತೆಗೆ ಆದ್ಯತೆಯನ್ನೇ ನೀಡುತ್ತಿಲ್ಲ. ಪೌಡರ್ ಸಿಂಪರಣೆ ಮಾಡುತ್ತಿಲ್ಲ. ಫಾಗಿಂಗ್ ಮಾಡಿಸುತ್ತಿಲ್ಲ ಎನ್ನುವ ಆಪಾದನೆ ಸಹಜವಾಗಿದೆ. ಇನ್ನೂ ವಾರ್ಡ್‌ನಲ್ಲಿ ಹಳೇ ಕಾಲದ ಶಾಲಾ ಕಟ್ಟಡವಿದ್ದು ಬೀಳುವ ಹಂತದಲ್ಲಿದ್ದು, ಇದನ್ನು ತೆರವು ಮಾಡುವುದು ಸೂಕ್ತ ಎನ್ನುವುದು ಸ್ಥಳೀಯರ ಅಭಿಪ್ರಾಯ.
ವಾರ್ಡ್‌ನಲ್ಲಿ ಸೊಳ್ಳೆಗಳ ಪರಿಸ್ಥಿತಿಯಂತೂ ಹೇಳ ತೀರದು. ನಿತ್ಯವೂ ನೆಮ್ಮದಿಯೇ ಇಲ್ಲದಂತಾಗಿದೆ. ಪೌರ ಕಾರ್ಮಿಕರಂತೂ ಇತ್ತ ಸುಳಿಯುವುದೇ ಇಲ್ಲ. ಚರಂಡಿ ಸ್ವಚ್ಛ ಮಾಡಲ್ಲ. ಕಳೆದ 2-3 ದಿನದ ಹಿಂದಷ್ಟೆ ಮಹಿಳಾ ಶೌಚಾಲಯ ದುರಸ್ತಿ ಮಾಡಿಸಿದ್ದಾರೆ. ಈ ಮೊದಲು ಅದನ್ನು ಬಂದ್ ಮಾಡಲಾಗಿತ್ತು.
. ರೇಣುಕಾ ಲಿಂಗಾಪೂರ,
ರುದ್ರಮ್ಮ ಹಿರೇಮಠ, ಸ್ಥಳೀಯರು.
ನಮ್ಮ ವಾರ್ಡ್‌ಗೆ ಪೌರ ಕಾರ್ಮಿಕರು ಬರುವುದೇ ಅಪರೂಪ. ಚರಂಡಿಗಳನ್ನು ಸ್ವಚ್ಛ ಮಾಡುವುದೇ ಇಲ್ಲ. ಹಲವು ಬಾರಿ ಹೇಳಿದ ಬಳಿಕ ಬರುತ್ತಾರೆ. ಚರಂಡಿಯಲ್ಲಿನ ತ್ಯಾಜ್ಯವನ್ನು ತೆಗೆದು ರಸ್ತೆ ಮೇಲೆ ಹಾಕುತ್ತಾರೆ. ಅದನ್ನು ಬೇರೆಡೆ ಸಾಗಿಸಲ್ಲ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಆದರೆ ಆಳವಾಗಿ ಗುಂಡಿ ತೊಡಿಲ್ಲ. ಹಾಗಾಗಿ ಮಹಿಳೆಯರು ಅದನ್ನು ಬಳಸುತ್ತಿಲ್ಲ. ಸೊಳ್ಳೆಗಳ ಕಾಟವಂತೂ ವಿಪರೀತವಾಗಿದೆ.
. ರಾಮಣ್ಣ ಗಡಗಿಮನಿ, ಸ್ಥಳೀಯ ನಿವಾಸಿ.
ದತ್ತು ಕಮ್ಮಾರ