Advertisement

ಸುಗ್ನಳ್ಳಿಗೆ ಬಾರದ ಸುವರ್ಣ ಕಾಲ

04:15 PM Jun 20, 2019 | Team Udayavani |

ಗದಗ: ರಾಜ್ಯದ ದೊರೆಯೇ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರಿಂದ ದಶಕಗಳಿಂದ ತಾವು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಗಲಿದೆ. ಸುಗ್ನಹಳ್ಳಿಗೆ ಸುವರ್ಣಕಾಲ ಬರಲಿದೆ ಎಂಬ ಗ್ರಾಮಸ್ಥರ ನಿರೀಕ್ಷೆಗಳು ಸಂಪೂರ್ಣ ಹುಸಿಯಾಗಿವೆ. ಇದೀಗ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತೂಮ್ಮೆ ಮುಖ್ಯಮಂತ್ರಿಯಾಗಿದ್ದರಿಂದ ಗ್ರಾಮಸ್ಥರಲ್ಲಿ ಹಳೇ ಬೇಡಿಕೆಗಳು ಮತ್ತೆ ಚಿಗುರೊಡೆದಿವೆ.

Advertisement

ಈ ಹಿಂದೆ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಅವಧಿಯ ಕೊನೆ ದಿನಗಳಲ್ಲಿ ಗದಗ ಜಿಲ್ಲೆಯ ಸುಗ್ನಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದರು. ಈ ಮೂಲಕ ಗ್ರಾಮ ಸೇರಿದಂತೆ ಈ ಭಾಗದ ಜನರ ಎಲ್ಲ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ನಿರೀಕ್ಷಿಸಲಾಗಿತ್ತು.

28-2-2007ರಂದು ಗ್ರಾಮದ ಬಸವರಾಜ್‌ ಹೊಂಬಾಳಿಮಠ ಎಂಬುವವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಹೀಗಾಗಿ ನೆರೆಯ ಗದಗ ಸೇರಿದಂತೆ ಕೊಪ್ಪಳ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಅಂದು ರಾತ್ರಿ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿಗಳ ಮಹಾಪೂರವೇ ಹರಿದು ಬಂದಿತ್ತು. ಸಮುದಾಯಕ್ಕಿಂತ ವೈಯಕ್ತಿಕ ಸಮಸ್ಯೆಗಳನ್ನು ಹೊತ್ತು ಬಂದವರೇ ಹೆಚ್ಚಾಗಿದ್ದರು. ಆದರೆ, ಅವುಗಳಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನಕ್ಕೆ ಸಂಬಂಧಿಸಿ ವಿವಿಧ ಹಂತಗಳಲ್ಲಿ ವಿಲೇವಾರಿಗೆ ಬಾಕಿದ್ದ ಅರ್ಜಿಗಳಿಗೆ ತಕ್ಷಣ ಪರಿಹಾರ ಕಲ್ಪಿಸಲಾಯಿತು. ಆದರೆ, ಮೂಲ ಸೌಲಭ್ಯಗಳಿಂದ ವಂಚಿತ ಸುಗನಹಳ್ಳಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸಬೇಕು ಎಂಬುದೇ ಪ್ರಮುಖ ಬೇಡಿಕೆ ಇದುವರೆಗೂ ಈಡೇರಿಲ್ಲ.

1993ರಲ್ಲಿ ಗ್ರಾಮದಲ್ಲಿ ಆಶ್ರಯ ಮನೆ ಯೋಜನೆಗೆ 32 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಅವರಿಗೆ ಆಶ್ರಯ ಮನೆ ನಿರ್ಮಾಣದ ಮಂಜೂರಾ ತಿ ಪತ್ರಗಳನ್ನೂ ವಿತರಿಸಲಾಗಿದೆ. ಅದಕ್ಕಾಗಿ ಗ್ರಾಪಂ ವತಿಯಿಂದ ಜಮೀನು ಖರೀದಿಸಿದ್ದರೂ ಫಲಾನುಭವಿಗಳಿಗೆ ವಿತರಣೆಯಾಗಿರಲಿಲ್ಲ. ಅದಕ್ಕಾಗಿ ವರ್ಷಗಳಿಂದ ಅಲೆದರೂ ಫಲಿಸಿಲ್ಲವೆಂದು ಮುಖ್ಯಮಂತ್ರಿ ಗ್ರಾಮವಾಸ್ತವ್ಯದ ವೇಳೆ ಅಳಲು ತೋಡಿಕೊಂಡರೂ ಫಲಿಸಿಲ್ಲ. ಇಂದಿಗೂ ಬಾಡಿಗೆ ಮನೆಗಳಲ್ಲೇ ವಾಸಿಸುತ್ತಿದ್ದೇವೆ ಎಂಬುದು ಫಲಾನುಭವಿ ದೇವಪ್ಪ ನಿಂಗಪ್ಪ ಧಾರವಾಡ ಅಳಲು. ಸುವರ್ಣ ಗ್ರಾಮ ಯೋಜನೆಗೆ ಗ್ರಾಮ ಸುಗ್ನಳ್ಳಿ ಆಯ್ಕೆಯಾಗದಿದ್ದರೂ ಆನಂತರ ಗ್ರಾ.ಪಂ.ವತಿಯಿಂದ ವಿವಿಧ ಯೋಜನೆಗಳಡಿ ಗ್ರಾಮದ ಕೆಲ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ನಿರ್ಮಿಸಲಾಗಿದೆ. ಇನ್ನುಳಿದಂತೆ ಗ್ರಾಮದ ಚಿತ್ರಣ ಏನೂ ಬದಲಾಗಿಲ್ಲ ಎಂದು ಬೇಸರದಿಂದ ನುಡಿಯುತ್ತಾರೆ ಗ್ರಾಮಸ್ಥರು.

 

Advertisement

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next