ವಿಧಾನಸಭೆ: ನ್ಯಾಯಾಂಗ ವ್ಯವಸ್ಥೆ ಸಂಕಷ್ಟದಲ್ಲಿದೆ. ನ್ಯಾಯಮೂರ್ತಿಗಳ ನೇಮಕವಾಗದೆ ಇತ್ಯರ್ಥಕ್ಕೆ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನ್ಯಾಯಾಲಯಗಳ ಆದೇಶವನ್ನೂ ಪಾಲಿಸದ ಸರ್ಕಾರ. ಸಾಮಾನ್ಯರಿಗೆ ತ್ವರಿತವಾಗಿ ನ್ಯಾಯ ಸಿಗದಾಗಿದೆ. ಸಂವಿಧಾನದ ಆಶಯ ಕುರಿತ ಚರ್ಚೆಯಲ್ಲಿ ಬುಧವಾರ ಪಾಲ್ಗೊಂಡ ಸದಸ್ಯರು ಪಕ್ಷಾತೀತವಾಗಿ ನ್ಯಾಯಾಂಗ ವ್ಯವಸ್ಥೆಯ ಕೊರತೆಗಳ ಬಗ್ಗೆ ಬೆಳಕು ಚೆಲ್ಲಿದರು.
ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್ ಮಾತನಾಡಿ, ನ್ಯಾಯಾಂಗ ಎಷ್ಟು ತೊಂದರೆಗೆ ಸಿಲುಕಿದೆ ಎಂದರೆ ಸುಪ್ರೀಂ ಕೋರ್ಟ್‌ನ ನಾಲ್ಕು ಮಂದಿ ನ್ಯಾಯಮೂರ್ತಿಗಳು ಸಂವಿಧಾನ ಅಪಾಯದ ಅಂಚಿನದಲ್ಲಿದೆ ಎಂದು ಬಹಿರಂಗ ವಾಗಿ ಮಾಧ್ಯಮಗಳ ಬಳಿ ಆತಂಕ ವ್ಯಕ್ತಪಡಿಸಿದ್ದನ್ನು ಕಂಡಿದ್ದೇವೆ. ಸಮಾನ ನ್ಯಾಯ ಸಿಗಬೇಕು. ಬಡವರಿಗೆ ತ್ವರಿತವಾಗಿ ನ್ಯಾಯ ಸಿಗಬೇಕು ಎಂದು ಹೇಳಲಾಗುತ್ತದೆ.
ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಷ್ಟು ಪ್ರಯತ್ನ ನಡೆಸಿವೆ ಎಂಬುದನ್ನು ಚಿಂತಿಸಬೇಕು ಎಂದರು. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ರಂಗ ಒಂದರ ಮೇಲೆ ಮತ್ತೂಂದು ಅತ್ಯಾಚಾರ, ಅತಿಕ್ರಮಣ ನಡೆಸುತ್ತಿದ್ದರೆ ಸ್ಥಿತಿ ಏನಾಗುತ್ತದೆ. ಸೃಷ್ಟಿ, ಸ್ಥಿತಿ, ಲಯದಂತೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕಾರ್ಯ ನಿರ್ವಹಿಸಬೇಕು.
ಆದರೆ ಕೆಲ ಅಂಗಗಳು ಮತ್ತೂಂದು ಅಂಗಗಳ ಅಧಿಕಾರ ಅತಿಕ್ರಮಿಸಲು ಪ್ರಯತ್ನಿಸುತ್ತಿವೆ ಎಂದ ಅವರು ಕೇಶವಾನಂದ ಭಾರತಿ ಪ್ರಕರಣ ಸೇರಿದಂತೆ ಇತರೆ ಉಲ್ಲೇಖ ಮಾಡಿ ಅನೇಕ ಪ್ರಕರಣಗಳಲ್ಲಿ ಶಾಸಕಾಂಗವನ್ನು ನಿರ್ಬಂಧಿಸುವ ಪ್ರಯತ್ನ ನಡೆದಂತಿದೆ ಎಂದು ಹೇಳಿದರು. ನಾನು ಯಾವುದೇ ಅಂಗವನ್ನು ಟೀಕಿಸುತ್ತಿಲ್ಲ. ನಾವು ಎತ್ತ ಸಾಗುತ್ತಿದ್ದೇವೆ ಎಂಬ ಆತಂಕ ಮೂಡುತ್ತದೆ. ಎಲ್ಲರಿಗೂ ತ್ವರಿತವಾಗಿ ನ್ಯಾಯ ಸಿಗಬೇಕು ಎಂದರು.