ಸಕಲೇಶಪುರ: ತಾಪಂ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ಮಂಡಿಸಿರುವ ಅವಿಶ್ವಾಸ ನಿಲುವಳಿ ಸಭೆ ಶುಕ್ರವಾರ ನಡೆಯಲಿದ್ದು, ಅವಿಶ್ವಾಸ ನಿರ್ಣಯಕ್ಕೆ ಸೋಲಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಒಟ್ಟು 11 ಸದಸ್ಯ ಬಲದ ತಾಪಂನಲ್ಲಿ ಐವರು ಕಾಂಗ್ರೆಸ್ ನಾಲ್ವರು ಜೆಡಿಎಸ್ ಹಾಗೂ ಇಬ್ಬರು ಬಿಜೆಪಿ ಸದಸ್ಯರಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಒಟ್ಟಾಗಿ ತಾಪಂ ಅಧಿಕಾರ ಹಿಡಿದಿದ್ದು ಕಳೆದ ನಾಲ್ಕು ವರ್ಷದಿಂದ ತಾಪಂ ಅಧ್ಯಕ್ಷರಾಗಿ ಬಿಜೆಪಿಯ ಶ್ವೇತ ಪ್ರಸನ್ನ ಮುಂದುವರಿದಿದ್ದಾರೆ. ಉಪಾ ಧ್ಯಕ್ಷರಾಗಿ ಕಾಂಗ್ರೆಸ್‌ನ ಯಡೆಹಳ್ಳಿ ಮಂಜುನಾಥ್, ಉದಯ, ಕೃಷ್ಣೇಗೌಡ ಅಧಿಕಾರ ಅನುಭವಿಸಿದ್ದಾರೆ.
ಅಧ್ಯಕ್ಷರ ಬದಲಾವಣೆಗೆ ಪಟ್ಟು: ಅಧ್ಯಕ್ಷರ ಬದಲಾವಣೆಗೆ ಈಗಾಗಲೇ ಜೆಡಿಎಸ್ ಸದಸ್ಯರು ನಾಲ್ಕಾರು ಬಾರಿ ಪ್ರಯತ್ನ ನಡೆಸಿದ್ದು ಕಾಂಗ್ರೆಸ್ ಸದಸ್ಯರ ಸಹಕರ ದೊರಯದ ಕಾರಣ ಹಿಂದೆ ನಡೆಸಿದ ಪ್ರಯತ್ನಗಳೆಲ್ಲ ವಿಫಲಗೊಂಡಿತ್ತು. ಕೊನೆಯ ಪ್ರಯತ್ನವಾಗಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸದಸ್ಯರೊಂದಿಗೆ ನಡೆಸಿದ ಮಾತುಕತೆಗೆ ಯಶಸ್ಸು ದೊರೆತಿದೆ.
ಹಾನುಬಾಳ್ ಕ್ಷೇತ್ರದ ತಾಪಂ ಸದಸ್ಯೆ ಹೊರತುಪಡಿಸಿ ನಾಲ್ವರು ಕಾಂಗ್ರೆಸ್ ಸದಸ್ಯರು ತಾಪಂ ಅಧ್ಯಕ್ಷರ ವಿರುದ್ಧ ಮಂಡಿಸಲಿರುವ ಅವಿಶ್ವಾಸ ನಿಲುವಳಿ ಬೆಂಬಲಿಸುವುದಾಗಿ ಘೋಷಿಸಿದ್ದರು. ಇದರಂತೆ ಜಿಲ್ಲಾಧಿಕಾರಿಗೆ ನೀಡಿದ ಪತ್ರಕ್ಕೆ ಜೆಡಿಎಸ್‌ನ ನಾಲ್ವರ ಸದಸ್ಯರೊಂದಿಗೆ ಕಾಂಗ್ರೆಸ್‌ನ ನಾಲ್ವರು ಸದಸ್ಯರು ಸಹಿ ಹಾಕಿದ್ದರು. ಇದರಿಂದಾಗಿ ಜು.10 ಕ್ಕೆ ಅವಿಶ್ವಾಸ ಮಂಡನೆಗೆ ಅವಕಾಶ ನೀಡಲಾಗಿತ್ತು.
ಜೆಡಿಎಸ್ ಸದಸ್ಯ ಕಣ್ಮರೆ: ಅವಿಶ್ವಾಸ ನಿಲುವಳಿ ಗೆಲುವಿಗೆ ಒಟ್ಟು ಸದಸ್ಯ ಬಲದ ಮೂರನೇ ಎರಡರಷ್ಟು ಸದಸ್ಯರ ಬಲ ಅಂದರೆ 8 ಸದಸ್ಯರ ಬೆಂಬಲ ಅಗತ್ಯವಿದ್ದು, ಮೆಲ್ನೋಟಕ್ಕೆ ಅವಿಶ್ವಾಸ ನಿಲುವಳಿಗೆ ಜಯ ದೊರೆಯಲಿದೆ ಎಂಬ ವಾತಾವಾರಣ ಸೃಷ್ಟಿಯಾಗಿತ್ತು. ಆದರೆ, ಅವಿಶ್ವಾಸ ನಿಲುವಳಿಗೆ ನಿಗದಿಯಾಗಿದ್ದ ಸಮಯ ಹತ್ತಿರ ಬರುತ್ತಿರುವಂತೆ ಜಿಲ್ಲಾಧಿಕಾರಿಗೆ ನೀಡಿದ ಪತ್ರಕ್ಕೆ ಸಹಿ ಹಾಕಿದ್ದ ಐಗೂರು ಕ್ಷೇತ್ರದ ಜೆಡಿಎಸ್ ಸದಸ್ಯ ಕಣ್ಮರೆಯಾಗಿರುವುದು ಜೆಡಿಎಸ್ ಪಾಳಯದ ಆತಂಕಕ್ಕೆ ಕಾರಣವಾಗಿದ್ದು,
ಅವಿಶ್ವಾಸ ನಿಲುವಳಿ ಬೆಂಬಲಿ ಸುವವರ ಸಂಖ್ಯೆ 7 ಕ್ಕೆ ಕುಸಿದಿದೆ. ಐಗೂರು ಕ್ಷೇತ್ರದ ತಾಪಂ ಸದಸ್ಯನನ್ನು ಬಿಜೆಪಿ ಯವರು ಅಪಹರಿಸಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಖುದ್ದು ಶಾಸಕರೇ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಅವಿಶ್ವಾಸ ನಿಲುವಳಿಯನ್ನು ಮುಂದೂಡು ವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು ಆದರೆ ಈ ಬೇಡಿಕೆ ಈಡೇರುವುದು ಅನುಮಾನವಾಗಿದೆ.