ಬೆಳಗಾವಿ: ನಕಲಿ ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಸ್ಥಿತಿವಂತರು ಸ್ವಯಂ ಪ್ರೇರಣೆಯಿಂದ ವಾಪಸ್ ನೀಡಲು ಮುಂದೆ ಬಂದಿದ್ದು, ಈವರೆಗೆ 8 ಸಾವಿರಕ್ಕೂ ಹೆಚ್ಚು ಕಾರ್ಡುಗಳು ಜಮಾ ಆಗಿವೆ. ಇನ್ನೂ ಉಳಿದ ಉಳ್ಳವರು ವಾಪಸು ಮಾಡುವರೇನಯ್ಯ ಎಂಬ ಪ್ರಶ್ನೆ ಜಿಲ್ಲಾಡಳಿತದ್ದಾಗಿದೆ.
ಪಡಿತರ ಚೀಟಿಗಳಿಗೆ ಆಧಾರ್ ಜೋಡಣೆ ಮಾಡಿದ ನಂತರ ಲಕ್ಷಾಂತರ ನಕಲಿ ಕಾರ್ಡುಗಳು ರಾಜ್ಯದಲ್ಲಿವೆ ಎಂಬುದು ಪತ್ತೆಯಾಗಿದೆ. ಇ-ಕೆವೈಸಿ ಮಾಡಿಸಿಕೊಳ್ಳುವ ವೇಳೆಯೂ ಅನೇಕರು ಬೋಗಸ್ ಪಡಿತರ ಕಾರ್ಡ್ ಹೊಂದಿದ್ದನ್ನು ಗುರುತಿಸಲಾಗಿದೆ. ಹೀಗಾಗಿ ಬಡತನ ರೇಖೆಗಿಂತ ಕೆಳಗಿನವರಿಗೆ ನೀಡಲಾಗುವ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂತಿರುಗಿಸಬೇಕೆಂಬ ಆದೇಶಕ್ಕೆ ಜಿಲ್ಲೆಯಲ್ಲಿ ಈವರೆಗೆ 8 ಸಾವಿರಕ್ಕೂ ಹೆಚ್ಚು ಜಮಾ ಆಗಿವೆ.
ವಾಪಸ್ ಮಾಡಲು ಕಾಲಾವಕಾಶ: ಒಂದು ವೇಳೆ ಸ್ಥಿತಿವಂತರು ಬಿಪಿಎಲ್ ಕಾರ್ಡು ಹೊಂದಿದ್ದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆಗೆ ಹೆದರಿ ಕಾರ್ಡ್‌ಗಳನ್ನು ಜಮಾ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 8124 ಕಾರ್ಡುಗಳು ಜಮಾಗೊಂಡಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜನರಿಗೆ ಇನ್ನಷ್ಟು ಕಾಲಾವಕಾಶ ನೀಡಿದೆ. ಸುಳ್ಳು ದಾಖಲೆ ನೀಡಿ ಪಡಿತರ ಕಾರ್ಡು ಪಡೆದವರು ಕೂಡಲೇ ಬಂದು ಸರ್ಕಾರಕ್ಕೆ ವಾಪಸ್ ಮಾಡಬೇಕು ಎಂಬುದೇ ಅಧ್ಯರ್ಪಣೆ ಯೋಜನೆಯ ಉದ್ದೇಶವಾಗಿದೆ.
ಬನ್ನಿ ಶರಣಾಗಿ: ಯಾವುದೇ ಕ್ರಮ ಇಲ್ಲದೇ ಪಡಿತರ ಕಾರ್ಡುಗಳನ್ನು ಜಮಾ ಮಾಡಲು ಸೆ. 2019ರವರೆಗೆ ಗಡುವು ನೀಡಲಾಗಿತ್ತು. ಅದು ಈಗ ಫೆಬ್ರುವರಿವರೆಗೆ ಈ ಅವಧಿ ವಿಸ್ತರಣೆ ಮಾಡಲಾಗಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಸ್ಥಿತಿವಂತರು ಕೈ ಜೋಡಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.
ಜಿಲ್ಲೆಯಲ್ಲಿ ಒಟ್ಟು 11,24, 851 ಪಡಿತರ ಕಾರ್ಡುದಾರರಿದ್ದು, ಈ ಪೈಕಿ 1266 ಕಾರ್ಡುಗಳನ್ನು ನೇರವಾಗಿ ರದ್ದುಗೊಳಿಸಲಾಗಿದೆ. 3338 ಕಾರ್ಡುಗಳು ಜಮಾ ಆಗಿವೆ. ಬಿಪಿಎಲ್‌ದಿಂದ ಎಪಿಎಲ್‌ಗೆ 3726 ಕಾರ್ಡುಗಳನ್ನು ಪರಿವರ್ತಿಸಲಾಗಿದೆ. 2398 ಕಾರ್ಡು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ. ಕಾನೂನು ಬಾಹಿರವಾಗಿ ಪಡಿತರ ಚೀಟಿ ಹೊಂದಿದವರಿಂದ ಒಟ್ಟು 36.91 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಸರ್ಕಾರದ ಆದೇಶದಂತೆ ಸ್ಥಿತಿವಂತರು ನೇರವಾಗಿ ಬಂದು ಪಡಿತರ ಚೀಟಿಗಳನ್ನು ವಾಪಸ್ ಮಾಡುತ್ತಿದ್ದಾರೆ. ಇನ್ನುಳಿದವರೂ ನೇರವಾಗಿ ಬಂದು ಜಮಾ ಮಾಡಲು ಅವಕಾಶ ಇದೆ. ಇಲಾಖೆ ಪರಿಶೀಲನೆ ನಡೆಸುವಾಗ ಸಿಕ್ಕಿ ಬಿದ್ದರೆ ದಂಡದ ವಸೂಲಿ ಮಾಡುವುದರ ಜತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಜತೆಗೆ ಸರ್ವರ್ ಸರಿಯಾಗಿ ಕೆಲಸ ಮಾಡುತ್ತಿದ್ದು, ಫೆ. 10ರೊಳಗೆ ಎಲ್ಲರೂ ಇ-ಕೆವೈಸಿ ಮಾಡಿಸಿಕೊಳ್ಳಬೇಕು.
-ಚನ್ನಬಸಪ್ಪ ಕೊಡ್ಲಿ, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
-ಭೈರೋಬಾ ಕಾಂಬಳೆ